ಡಿಸೆಂಬರ್ ತಿಂಗಳ 5 ನೇ ತಾರೀಖು ಮಂಗಳವಾರ ಮತ್ತು 6 ನೇ ತಾರೀಖು ಬುಧವಾರದಂದು ಉಡುಪಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೋಟ ವಿವೇಕ ವಿದ್ಯಾಲಯದ ಆವರಣದಲ್ಲಿ ಸಾಹಿತ್ಯ ಗೋಷ್ಠಿ, ವಿಚಾರ ಗೋಷ್ಠಿ, ಸನ್ಮಾನ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧಕ್ಷರು ನಾಡೋಜ ಡಾ. ಮಹೇಶ್ ಜೋಶಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸಾಲಿಗ್ರಾಮ ಗುರು ನರಸಿಂಹ ದೇಗುಲದಿಂದ ಸಮ್ಮೇಳನಾ ಸ್ಥಳಕ್ಕೆ ತಾಯಿ ಭುವನೇಶ್ವರಿಯ ಜಯಕಾರದೊಂದಿಗೆ ಕನ್ನಡದ ಕಹಳೆ ಮೊಳಗುತ್ತಾ ಮೆರವಣಿಗೆ ಸಾಗಲಿದೆ.
ಈ ಸಮ್ಮೇಳನವು ಮುಂಬಯಿಯ ಹಿರಿಯ ಸಾಹಿತಿ ಶ್ರೀ ಬಾಬು ಶಿವ ಪೂಜಾರಿಯವರ ಅಧ್ಯಕ್ಷತೆಯಲ್ಲಿ ವಿಶೇಷವಾದ ಮೆರುಗನ್ನು ಕಾಣಲಿದೆ. ಡಿಸೆಂಬರ್ 6 ರಂದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಉಡುಪಿ ಜಿಲ್ಲಾ ಹಿರಿಯ ಕಿರಿಯ ಕವಿಗಳಿಂದ ನಡೆಯಲಿರುವ ಕವಿ ಕಲರವ ಕವಿಗೋಷ್ಠಿಯಲ್ಲಿ ಮುಂಬಯಿ ಸಾಹಿತಿ ಲತಾ ಸಂತೋಷ ಶೆಟ್ಟಿ ಮುದ್ದುಮನೆ ಅವರು ಸ್ವರಚಿತ ಕವನ ವಾಚನ ಮಾಡಲಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯವರಾದ ಇವರು ಮುಂಬಯಿ ನಿವಾಸಿ. ಹೊರನಾಡಿನಲ್ಲಿದ್ದು ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಸಾಹಿತಿ, ಕವಯತ್ರಿ, ಅಂಕಣ ಬರಹಗಾರ್ತಿಯಾದ ಇವರ ಬರಹಕ್ಕೆ ಹಲವು ಬಹುಮಾನಗಳು ಲಭಿಸಿದೆ. ಅದರಲ್ಲಿ ಮುಖ್ಯವಾಗಿ ಕರುಳ ಬಳ್ಳಿಯ ಕೂಗು ಎಂಬ ಕಥೆಗೆ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ದೊರಕಿದೆ. ಬಹುಮಾನಿತ ಲೇಖನಗಳಲ್ಲಿ ಅಮ್ಮ, ಅನ್ನ ಪರಬ್ರಹ್ಮ, ಸೌಂದರ್ಯ ಸಾಧನಗಳು ಯಾಕೆ ಬೇಕು, ಹನಿ ಹನಿ ನೀರಿಗೂ ತಾತ್ವರ, ಕೆರೆಗಳ ಕಂಡಿರಾ ಇವುಗಳು ಮುಖ್ಯವಾದವು. ಹಲವೆಡೆ ತೀರ್ಪುಗಾರರಾಗಿಯೂ ಮತ್ತು ಮಂಗಳೂರು ಹಾಗೂ ಮುಂಬಯಿ, ಧಾರವಾಡ ಆಕಾಶವಾಣಿಯಲ್ಲಿ ಕವನ ಹಾಗೂ ವಿವಿಧ ವಿಷಯಗಳ ಪ್ರಬಂಧ ಮಂಡಿಸಿರುವರು.
ಮಹಾರಾಷ್ಟ್ರ ಸರ್ಕಾರ ನಡೆಸಿದ ಭಿಕ್ಷುಕರ ಸಮೀಕ್ಷೆಯ ತಂಡದ ಅಧ್ಯಯನ ಸಮಿತಿಯ ಸದಸ್ಯರಾಗಿ ಬಿಕ್ಷುಕರ ಬದುಕು ಬವಣೆಯ ಒಳಹೊರ ನೋಟದ ಸಮೀಕ್ಷಾ ವರದಿ ಮಹಾರಾಷ್ಟ್ರ ಸರಕಾರಕ್ಕೆ ಒಪ್ಪಿಸಿರುವ ಹೆಗ್ಗಳಿಕೆ ಇವರದ್ದು. “ಶ್ರಿಮುದ್ದು” ಇವರ ಕಾವ್ಯನಾಮ. ವರ್ತಮಾನದ ಆಗು ಹೋಗುಗಳಿಗೆ ಸ್ಪಂದಿಸುತ್ತಾ ಹತ್ತು ಹಲವು ವಿಷಯಗಳ ಬಗ್ಗೆ ಬರೆಯುತಿರುವ ಇವರ 1).”ಹೊಂಗನಸು” ವೈಚಾರಿಕ ಲೇಖನಗಳ ಸಮೂಹ.
2). “ಬಾಂಧವ್ಯ” ಕಾದಂಬರಿ.
3). “ಮನದಂಗಳ” ಅಂಕಣ ಬರಹಗಳ ಸಂಕಲನ.
4) “ಯಶಸ್ವಿ ಪಯಣ” ಪ್ರವಾಸ ಕಥನ ಮತ್ತು
5) ಬಿರಿವ ಮೊಗ್ಗು ಕವನ ಸಂಕಲನ ಬೆಳಕು ಕಂಡಿದೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ “ಪ್ರೇಮ ನಾರಾಯಣ ರೈ” ಪ್ರಶಸ್ತಿ ಬಂಟರ ಸಂಘ ಮುಂಬಯಿಯಿಂದ ದೊರಕಿದೆ. “ಕನ್ನಡದ ಕಣ್ಮಣಿ” ಪ್ರಶಸ್ತಿ ಕೋಟಾ ಶಿವರಾಮ ಕಾರಂತ ಅಭಿಮಾನಿ ಬಳಗದಿಂದ, “ತೌಳವಸಿರಿ ಪ್ರಶಸ್ತಿ” ಕಲಾಜಗತ್ತು ಮುಂಬಯಿನ ವತಿಯಿಂದ, ಡಾ.ಸಂಜೀವ ಶೆಟ್ಟಿ ಸ್ಮಾರಕ” ಕನ್ನಡ ಸಂಜೀವಿನಿ ಪ್ರಶಸ್ತಿ” ಅಯ್ಯಪ್ಪ ಆರಾಧನದವರಿಂದ, “ಸಾಹಿತ್ಯ ತನುಜಾತೆ” ಕರ್ನಾಟಕ ಮಹಾ ಮಂಡಲದವರಿಂದ, “ಸಾಹಿತ್ಯ ಸೌರಭೆ” ಗುರುಕುಲ ಮುಂಬಯಿ ವತಿಯಿಂದ ಬಿರುದು ಲಭಿಸಿದೆ. ಬಂಟರವಾಣಿ ಮುಂಬಯಿ ಹಾಗೂ ಯಶಸ್ವಿ ವ್ಯಕ್ತಿ ಮಾಸ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಂಬಯಿ ಲೇಖಕಿಯರ ಬಳಗ ಸೃಜನಾದ ಗೌರವ ಪ್ರಧಾನ ಕಾರ್ಯದರ್ಶಿಯಾಗಿರುವರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ ನೇತೃತ್ವದಲ್ಲಿ ಅದ್ದೂರಿಯಾಗಿ ಎರಡು ದಿನ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಪಸರಿಸಿ ಕನ್ನಡಿಗರಿಗೆಲ್ಲಾ ಹಬ್ಬದ ವಾತಾವರಣ ಸೃಷ್ಠಿ ಆಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರಭಾಕರ ಮಯ್ಯ ಪುಸ್ತಕ ಮಳಿಗೆ ಉದ್ದಾಟಿಸಲಿದ್ದಾರೆ. ಪುಸ್ತಕ ಓದುವ ಆಸಕ್ತರಿಗೆ ಪುಸ್ತಕ ಮಳಿಗೆ ಇದೆ. ವಿಶೇಷ ಉಪನ್ಯಾಸದ ಸವಿಯೂ ಇದೆ. ಬಹುಬಗೆಯ ಗೋಷ್ಠಿ ಹಾಗೂ ಕನ್ನಡ ಗೀತ ಗಾಯನ ಮತ್ತು ನೃತ್ಯದೊಂದಿಗೆ ಸಾಂಸ್ಕೃತಿಕ ಅಮೃತಧಾರೆಯ ಸೊಬಗಿದೆ. ವಿಚಾರಗೋಷ್ಠಿ ಇದೆ. ಸಾಹಿತ್ಯ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ರಾಜ್ಯದ ಅನೇಕ ಕವಿಗಳು, ವಿದ್ವಾಂಸರು, ಸಾಹಿತಿಗಳು, ಕನ್ನಡ ನಾಡು ನುಡಿಯ ಚಿಂತಕರು ಜೊತೆಯಾಗಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ವಿವಿಧ ಸಮುದಾಯದ ಸಾಧಕ 23 ಮಂದಿ ಗಣ್ಯರನ್ನು ಹಾಗೂ 10 ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸಲಾಗುವುದು. ಸಾಹಿತ್ಯ ಹಾಗೂ ಕನ್ನಡಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋರಿದೆ.