ಜಗತ್ತು ಎಷ್ಟೇ ಆಧುನೀಕತೆಯಲ್ಲಿ ತುಂಬಿ ತುಳುಕಿದರೂ ಜನರು ತಮ್ಮ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಈಗಲೂ ಬ್ರಹ್ಮ ಹಾಗೂ ಕೋಟಿ ಋಷಿಗಳಿಗೆ ಶಿವನು ದರ್ಶನ ಕೊಟ್ಟ ಶುಭ ದಿನದಂದು ಪರಶುರಾಮ ಸೃಷ್ಠಿಯ ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದಾಗಿರುವ ಧ್ವಜಪುರ ಖ್ಯಾತಿಯ ಕೋಟೇಶ್ವರ ಮಹತೋಬಾರ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಏಳು ದಿನಗಳ ಕಾಲ ನಡೆಯುವ ಕೊಡಿಹಬ್ಬ ಅಥವಾ ಭುವನೋತ್ಸವ ಹರ್ಷೋಲ್ಲಾಸದ ಸಂಕೇತಕ್ಕೆ ಸಾಕ್ಷಿಯಾಗಿ ಊರ ಪರಊರ ಜನರೆಲ್ಲಾ ಜಾತಿ ಭೇದವಿಲ್ಲದೆ ಒಗ್ಗೂಡಿ ದರ್ಶನ ಪಡೆಯುತ್ತಾರೆ. ಕೋಟಿ ಸಂಖ್ಯೆಯ ಪಾಪಗಳನ್ನು ತೊಳೆಯತಕ್ಕಂತಹ ದಿವ್ಯ ಕ್ಷೇತ್ರ ಎಂಬ ಹಿರಿಮೆಯಿಂದಾಗಿ ಕೋಟೇಶ್ವರ “ದಕ್ಷಿಣ ಕಾಶಿ”ಎಂದು ಕೋಟಿಲಿಂಗೇಶ್ವರನೆಂದು ಜನ ಜನಿತವಾಗಿದೆ. ಕುಂದಾಪುರದಿಂದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕಿಮೀ ದೂರದವರೆಗೆ ಸಾಗುವಾಗ ಸಿಗುವ ಪುಣ್ಯ ಕ್ಷೇತ್ರವಿದು.
ಭಾವೈಕ್ಯತಯ ಸಂಗಮ ಕೊಡಿಹಬ್ಬ :
ಇಲ್ಲಿನ ಬೃಹ್ಮರಥವನ್ನು ನಿರ್ಮಿಸುವಲ್ಲಿ ಸ್ಥಳೀಯ ಮುಸ್ಲಿಮರು ಅತ್ಯಂತ ಭಯ ಭಕ್ತಿಯಿಂದ ತಮ್ಮ ಜವಾಬ್ದಾರಿ ನೆರವೇರಿಸುತ್ತಾರೆ. ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದ ದೀವಿಟಿಗೆ ಸಲಾಮ್ ಎನ್ನುವ ವಿಶಿಷ್ಟ ಧಾರ್ಮಿಕ ಸೇವೆ ನಡೆಯುತ್ತದೆ. ಕೊಡಿ ಹಬ್ಬ ಸರ್ವ ಧರ್ಮಗಳ ಸಂಗಮ ಕ್ಷೇತ್ರ.
ನಂಬಿಕೆಗಳು : ನವ ದಂಪತಿಗಳು ಕೊಡಿ ಹಬ್ಬದಂದು ದೇವರಿಗೆ ಕಬ್ಬಿನ ಕೊಡಿ ಅರ್ಪಿಸಿ ಮನೆಗೆ ಕೊಂಡೊಯ್ದರೆ ಅವರ ಬಾಳಲ್ಲಿ ಶ್ರೇಯಸ್ಸು ಕೊಡಿ ಅರಳುತ್ತದೆ ಎಂಬ ನಂಬಿಕೆ ಇದೆ. ಜಾತ್ರೋತ್ಸವಕ್ಕಾಗಿ ಗರುಡ ಪಟ ಕಟ್ಟಿದ ದಿನದಿಂದ ಸುತ್ತ ಮುತ್ತಲಿನ ಊರಿನವರು ಯಾರೂ ಕೂಡ ಬೇರೆಡೆ ಹೋಗಿ ರಾತ್ರಿ ಉಳಿಯುವಂತಿಲ್ಲ. ಮದುವೆ, ಉಪನಯನಗಳಂತಹ ಶುಭ ಕಾರ್ಯಗಳು ಕೂಡ ನಡೆಯುವಂತಿಲ್ಲ.
ಸುತ್ತಕ್ಕಿ : ಸುತ್ತಕ್ಕಿ ಸೇವೆಯಲ್ಲಿ ದೇವಾಲಯದ ಸುತ್ತದ ಸುಮಾರು 4 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕೋಟಿ ತೀರ್ಥ ಪುಷ್ಕರಣಿಯ ಸುತ್ತಾ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾದಿಗಳು ಪುಷ್ಕರಣಿಯಲ್ಲಿ ಮುಳುಗೆದ್ದು ಬಟ್ಟೆ ಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲುತ್ತಾರೆ ಅದೆ ಸುತ್ತಕ್ಕಿ ಸೇವೆ .
ರಥೋತ್ಸವ : ಕೊಡಿಹಬ್ಬದ ಪ್ರಮುಖ ಆಕರ್ಷಣೆ ಇಲ್ಲಿನ ತಟ್ಟಿರಾಯ. ಕುಂದಾಪುರದ ಕೋಟಿಲಿಂಗೇಶ್ವರ ದೇಗುಲದ ರಥ ರಾಜ್ಯದಲ್ಲಿನ ಅತ್ಯಂತ ದೊಡ್ಡ ರಥಗಳ ಸಾಲಿನಲ್ಲಿದೆ. ಇಲ್ಲಿನ ಬ್ರಹ್ಮರಥದಲ್ಲಿ ಅಪೂರ್ವ ಕಾಷ್ಠಶಿಲ್ಪದ ವೈಭವ ಎದ್ದು ಕಾಣುತ್ತದೆ. ಜಿಲ್ಲೆಯಲ್ಲೇ ಪುರಾತನವಾದ ಮತ್ತು ಬೃಹತ್ತಾದ ಬ್ರಹ್ಮರಥ ಎನ್ನುವ ಹೆಗ್ಗಳಿಕೆ ಹೊಂದಿದೆ. ಈ ರಥೋತ್ಸವದ ಬಗ್ಗೆ ವಿಶಿಷ್ಟ ಕಲ್ಪನೆಗಳು ಭಕ್ತರನ್ನು ಪುಳಕಗೊಳಿಸುವುದು. ಇಲ್ಲಿನ ಬ್ರಹ್ಮ ರಥದ ಆರು ಗಾಲಿಗಳೇ ಆರು ಋತುಗಳು. ಮೇಲಿನ ಹನ್ನೆರಡು ತೊಲೆಗಳನ್ನು ಹನ್ನೆರಡು ಮಾಸಗಳೆಂದೂ ರಥದ ಎದುರು ಬಾಗಿಲುಗಳನ್ನು ಹಗಲಿಗೂ ಹಿಂದಿನ ಬಾಗಿಲನ್ನು ರಾತ್ರಿಗೂ ಹೋಲಿಸಲಾಗಿದೆ. ಪಾರ್ಶ್ವ ಬಾಗಿಲು ಎರಡು ಸಂಧ್ಯಾ ಕಾಲಗಳೆಂಬ ಆಶಯ. ಪತಾಕೆಗಳು ಮೂಹೂರ್ತಗಳು, ಘಳಿಗೆಗಳು ಹುಣ್ಣಿಮೆಯ ಪೂರ್ಣ ಚಂದ್ರ ವರ್ಷಕ್ಕೊಮ್ಮೆ ರಥವೇರಿ ಲೋಕ ಕಲ್ಯಾಣಾರ್ಥವಾಗಿ ಸಂಚರಿಸಿ ಬರುವುದೇ ಬ್ರಹ್ಮ ರಥೋತ್ಸವ. ಅದಕ್ಕಾಗಿ ಈ ರಥಕ್ಕೆ ಚಲಿಸುವ ದೇವಾಲಯವೆಂದು ಹೇಳಲಾಗುತ್ತದೆ. ಈ ರಥೋತ್ಸವವೇ ಕೊಡಿ ಹಬ್ಬವೆಂದು ಪ್ರಸಿದ್ದ.
ಈ ರಥದಲ್ಲಿ ಕೆತ್ತಿದ ಕೆತ್ತನೆಗಳು ಅನೇಕ ಪೌರಾಣಿಕ ವಿಚಾರಧಾರೆಗಳನ್ನು ಬಿಂಬಿಸುವ ದೃಢತೆಗಳಂತೆಯಿದ್ದು ಹಲವು ಪುಣ್ಯ ಕಥೆಗಳನ್ನು ಸಾರುತ್ತದೆ. ಕೋಟೇಶ್ವರದ ಐತಿಹಾಸಿಕ ರಥೋತ್ಸವಕ್ಕೆ ವಸು ಚಕ್ರವರ್ತಿ ಚಾಲನೆ ನೀಡಿದ್ದು ಎಂದು ಹಿರಿಯರು ಹೇಳುತ್ತಾರೆ. ಬಿದಿರಿನಿಂದ ನಿರ್ಮಿತವಾಗುವ 5 ಅಂತಸ್ತಿನ ವಿಶಿಷ್ಟವೇ ಬ್ರಹ್ಮರಥ.
ಬ್ರಹ್ಮರಥೋತ್ಸವ ಕೊಡಿಹಬ್ಬದ ಪರಿ : ಬಸ್ರೂರು ಮಹಾರಾಜ ವಸು ಚಕ್ರವರ್ತಿಗೆ ಮದುವೆಯಾಗಿ ಬಹಳ ಕಾಲ ಮಕ್ಕಳಿರಲಿಲ್ಲ. ಇದೇ ಕೊರಗಿನಲ್ಲಿ ರಾಜ, ತನಗೆ ಮಕ್ಕಳಾದರೆ ಕೋಟೇಶ್ವರದಲ್ಲಿ ದೇವಸ್ಥಾನ ಕಟ್ಟುತ್ತೇನೆ ಎಂದು ಹರಕೆ ಹೊರುತ್ತಾನೆ. ರಾಜನಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಹರಕೆಯಂತೆ ದೇವಸ್ಥಾನ ಕಟ್ಟಲು ಮುಂದಾಗುತ್ತಾನೆ. ಆದರೆ ಸಮಯಕ್ಕೆ ಸರಿಯಾಗಿ ಬ್ರಹ್ಮರಥ ತಯಾರಾಗುವುದಿಲ್ಲ. ಆಗ ಬಿದಿರು ಹಾಗೂ ಕಬ್ಬಿನ ಜಲ್ಲೆಗಳನ್ನು ಬಳಸಿ ರಥ ನಿರ್ಮಿಸಲಾಗುತ್ತದೆ. ಆ ಕಾರಣಕ್ಕಾಗಿ ರಥೋತ್ಸವಕ್ಕೆ ಕೊಡಿಹಬ್ಬ ಎಂದು ಹೆಸರು. ಬ್ರಹ್ಮರಥೋತ್ಸವ ಕೊಡಿ ಹಬ್ಬವಾದ ಪರಿ ಇದು. ಅದೂ ಅಲ್ಲದೆ ಕುಂದ ಕನ್ನಡದಲ್ಲಿ ಕೊಡಿ ತಿಂಗಳು ಎಂದು ಕರೆಯಲ್ಲಡುವ ಸಮಯದಲ್ಲಿ ಈ ಹಬ್ಬ ನಡೆಯತ್ತದೆ.
ಕೋಟಿಲಿಂಗೇಶ್ವರ : ಪರಶಿವನು ಪಾರ್ವತಿ ಸಮೇತನಾಗಿ ಸಕಲ ದೇವಾದಿ ದೇವತೆಗಳೊಂದಿಗೆ ನೆಲೆಸಿರುವ ಪರಮ ಪವಿತ್ರ ಪುಣ್ಯಭೂಮಿ. ಪುರಾಣ ಪ್ರಕಾರ ಬ್ರಹ್ಮ ಆದಿ ಶಕ್ತಿಯ ತಪಸ್ಸು ಮಾಡಿದಾಗ ಮೊದಲನೆಯ ಲಿಂಗಾಕೃತಿಯ ಒಂದು ಪ್ರಖರವಾದ ಜ್ಯೋತಿ ಕಾಣಿಸುತ್ತದೆ. ನಂತರ ಈ ಜ್ಯೋತಿಯು ಕೋಟಿ ಲಿಂಗಗಳಾಗಿ ಮಾರ್ಪಟ್ಟಿತು. ಈ ಲಿಂಗಗಳಿಂದ ಗಂಗಾಜಲ ಹಾಗೂ ಅಮೃತ ಬ್ರಹ್ಮ ನದಿಗೆ ಹರಿದು ಹೋಯಿತು. ಆದರೆ ಪ್ರಳಯ ಕಾಲದ ಸಂದರ್ಭದಲ್ಲಿ ಈ ದೇವಸ್ಥಾನ ಮುಳುಗಿದೆ ಎನ್ನುತ್ತಾರೆ.
ದೇವಾಲಯ ವಿಶಾಲವಾದ ಏಳು ಪ್ರದಕ್ಷಿಣಾ ಪಥಗಳನ್ನೊಳಗೊಂಡು ದ್ವಾರದ ಬಳಿ ಪರಶುಪಾಣಿ ಹಾಗೂ ಶೂಲಪಾಣಿಗಳೆಂಬ ಪಂಚ ಲೋಹದ ದ್ವಾರಪಾಲಕರ ಮೂರ್ತಿಯಿದೆ. ಇದು ವಿಜಯ ನಗರ ಅಥವಾ ಕೆಳದಿ ನಾಯಕರ ಕಾಲದಲ್ಲಿ ರಚಿಸಲ್ಪಟ್ಟಿದೆ. ಮೊದಲ ಸುತ್ತಿನಲ್ಲಿ ಸಪ್ತ ಮಾತೃಕೆಯರ ಮೂರ್ತಿ ಇದೆ. ಹಿಂಭಾಗದಲ್ಲಿ ಷಣ್ಮುಖನ ಮೂರ್ತಿಯಿದ್ದು ವಾಯುವ್ಯ ಮೂಲೆಯಲ್ಲಿ ಪಾರ್ವತಿ ದೇವಸ್ಥಾನವಿದೆ. ಏಳು ಪ್ರದಕ್ಷಿಣಾ ಪಥಗಳನ್ನೊಳಗೊಂಡ ಈ ದೇಗುಲ ಪೂರ್ವಾಭಿಮುಖವಾಗಿದೆ. ಗರ್ಭಗುಡಿಯಲ್ಲಿ ವೃತ್ತಾಕಾರದ ಶಿಲಾ ಬಾವು ಇದ್ದು ಮೂಲಸ್ಥಾನ ಕೋಟೇಶ್ವರ ಶಿಲಾಲಿಂಗ ಗರ್ಭಗೃಹದ ತಳಕ್ಕಿಂತ ಒಂದುವರೆ ಅಡಿ ಆಳಕ್ಕಿರುವ ಉದ್ಭವ ಲಿಂಗವೆಂಬುದು ಐತಿಹ್ಯ. ಆಳವಾದ ಮೊಗರು ಶಿಲೆಯಿದ್ದು ಅದರ ತುದಿ ಭಾಗ ರುದ್ರಾಕ್ಷಿ ಮಣಿಗಳಂತಿದೆ. ಇದುವೇ ಕೋಟಿ ಲಿಂಗವೆಂಬ ಪ್ರತೀತಿ. ಈ ಶಿಲಾ ಬಾವಿಯ ಕರಿ ಶಿಲೆಯ ಮೇಲೆ ಬೃಹತ್ ಪಾಣಿಪೀಠವಿದ್ದು ಅದರ ಮೇಲೆ ಶಿವನ ಪ್ರತಿಮೆಯನ್ನು ಪೂಜಿಸುತ್ತಾರೆ. ಈ ಬಾವಿಯ ನೇರ ಮೇಲ್ಬಾಗದಲ್ಲಿ ಗಂಗಾ ಪಾತ್ರೆ ತೂಗು ಹಾಕಿದ್ದು ಅದರಿಂದ ನಿರಂತರ ನೀರು ಬಾವಿಗೆ ತೊಟ್ಟಿಕ್ಕುವಂತೆ ಇದೆ. ದೇವಸ್ಥಾನದ ದ್ವಾರದ ಮೇಲಿರುವ ಬ್ರಹ್ಮ, ಶಿವ, ವಿಷ್ಣುವಿನ ಉಬ್ಬು ಶಿಲ್ಪ ಹಾಗೂ ಸ್ತ್ರೀ ವಿಗ್ರಹಗಳಿವೆ. ದೇಗುಲದ ಒಳ ಭಾಗದ ಎದುರಿಗೆ ಉತ್ಸವ ಮೂರ್ತಿಯಿದೆ. ಎಡ ಭಾಗದಲ್ಲಿ ಗಣಪತಿ ವಿಗ್ರಹವಿದೆ. 12 ಶಿಲಾ ಕಂಗಳನ್ನು ಹೊಂದಿರುವ ನಂದಿ ಮಂಟಪವಿದೆ. ಗರ್ಭಗುಡಿಯ ಆಸುಪಾಸಿನ ನವರಂಗ ಒಳ ಸುತ್ತಿನಲ್ಲಿದೆ.
ಕೋಟಿ ತೀರ್ಥ : ಕೋಟಿಲಿಂಗೇಶ್ವರ ದೇವಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಕೋಟಿ ತೀರ್ಥ ಪುಷ್ಕರಣಿ. ನಾಲ್ಕು ಎಕರೆ ವಿಸ್ತೀರ್ಣದ ಪುಣ್ಯತೀರ್ಥ ಲೋಕದ ಅನೇಕ ತೀರ್ಥಗಳಿಗೆ ಸಮಾನ ಎಂಬ ನಂಬಿಕೆ ಇದೆ. ಗೌತಮ ಋಷಿಗಳ ಶಾಪಕ್ಕೆ ತುತ್ತಾದ ಬ್ರಾಹ್ಮಣರು ಕೋಟಿ ತೀರ್ಥದಲ್ಲಿ ಮಿಂದು ಅಶ್ವಥ ಮರಕ್ಕೆ ಪ್ರದಕ್ಷಿಣೆ ಮಾಡಿ ಶಾಪ ಮುಕ್ತರಾದ ಉಲ್ಲೇಖವಿದೆ.
ಕೋಟಿಲಿಂಗೇಶ್ವರ ಸನ್ನಿಧಿ ಅತ್ಯಂತ ಶಕ್ತಿಪ್ರದ. ಕೋಟಿಲಿಂಗ ಐಕ್ಯವಾಗಿರುವ ಕೋಟೇಶ್ವರ ದೇವರ ಸನ್ನಿಧಿಯ ಕೋಟಿ ತೀರ್ಥದಲ್ಲಿ ಸ್ನಾನಗೈದು ದೇವರ ದರ್ಶನ ಪಡೆದರೆ ಸರ್ವ ವಿಧವಾದ ದೋಷ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಸರಸ್ವತಿ, ತ್ರಿಪಧಿಕಾ, ಕಾಳೀನದಿ, ಸರಯೂ, ಶಿವ, ಗೋಮತಿ, ನರ್ಮದಾ, ನಿರ್ವಿಂದ್ಯಾ, ಶೋರಾಭದ್ರ, ತುಂಗಾ, ಗೋದಾವರಿ, ಕಾವೇರಿ, ಕೃಷ್ಣ, ಭೀಮ, ಪಯಸ್ವನಿ ಮೊದಲಾದ ನದಿಗಳ ಅಂತರ್ಯ ಇಲ್ಲಿ ಅಡಕವಾಗಿದೆ ಎನ್ನಲಾಗಿದೆ. ಬ್ರಹ್ಮದೇವರು ಸೃಷ್ಟಿಸಿದ ಸರೋವರಕ್ಕೆ ಕೋಟಿ ತೀರ್ಥ ಕೋಟಿಲಿಂಗೇಶ್ವರ ತೀರ್ಥದಲ್ಲಿ ಪಾಪಿಷ್ಠರು, ಪುಣ್ಯವಂತರು ಯಾರೇ ಆಗಲಿ ಭಕ್ತಿಯಿಂದ ವಿಧಿ ಪೂರ್ವಕ ಸ್ನಾನ ಮಾಡಿದರೆ ಅವರ ಪುಣ್ಯ ವರ್ಧಿಸಿ ಪಾಪ ಪರಿಹಾರವಾಗಲಿ ಎಂದು ಬ್ರಹ್ಮ ದೇವರು ಹರಸಿದ್ದರಂತೆ.
ಪಾಂಡವರು ಬ್ರಹ್ಮದೇವನ ಕಮಂಡಲದ ನೀರಿನಿಂದ ನಿರ್ಮಿಸಿದ ಕೋಟಿ ತೀರ್ಥ ಪುಷ್ಕರಣಿ ಎಂದು ನಂಬಲಾಗುತ್ತದೆ. ಕೋಟಿ ತೀರ್ಥ ನಿರ್ಮಿಸಿ ಪಾಂಡವರು ಅದೇ ದಿನ ವಂಡಾರಿಗೆ ಆಗಮಿಸಿ ಕಂಬಳ ಗದ್ದೆ ನಿರ್ಮಿಸಿದರು ಎಂಬ ಕಥೆ ಇದೆ. ಕೊಡಿ ಹಬ್ಬದಂದು ಇಲ್ಲಿನ ರಥ ಬೀದಿಯಲ್ಲಿ ರಥ ಸಾಗುವಾಗ ವಂಡಾರು ಕಂಬಳ ಗದ್ದೆಯಲ್ಲಿ ಧೂಳು ಏಳುವುದು ಮತ್ತು ಕಂಬಳದ ದಿನ ಕೋಟಿ ತೀರ್ಥದಲ್ಲಿ ನೀರು ಕದಡುತ್ತದೆ. ಇಂತಹ ಜನಜನಿತ ಅನೇಕ ಕಥೆಗಳಿವೆ. ಹಲವಾರು ಕೌತುಕಗಳನ್ನು ಸಾರುವ ವಿಸ್ತಾರವಾದ ರಥ ಬೀದಿ, ಇಕ್ಕೆಲಗಳಲ್ಲೂ, ದೇವತಾ ಮಂದಿರದ ಭವ್ಯವಾದ ದೇಗುಲದ ಹಿನ್ನೆಲೆಯಲ್ಲಿ ಪೌರಾಣಿಕ, ಚಾರಿತ್ರಿಕ ಉಲ್ಲೇಖಗಳೊಂದಿಗೆ ವಿಶಾಲ ಪುಷ್ಕರಣಿ ಹೊಂದಿರುವ ಈ ದೇಗುಲದ ಕೋಟಿ ತೀರ್ಥದ ಮಡುವಿನಲ್ಲಿ ಅನೇಕ ರೋಚಕ ಸಂಗತಿಗಳಿವೆ. ಪಾಣಿ ಪೀಠದ ಅಡಿಯಲ್ಲಿ ಐಕ್ಯವಾದ ಲಿಂಗ ಬಾವಿಗೆ ಎಷ್ಟೇ ಅಭಿಷೇಕ ಮಾಡಿದರೂ ನೀರು ಉಕ್ಕೇರದೆ ಇರುವುದಕ್ಕೆ ಲಿಂಗ ಬಾವಿಗೂ ಕೋಟಿ ತೀರ್ಥ ಸರೋವರಕ್ಕೂ ಇರುವ ಸುರಂಗ ಮಾರ್ಗವೇ ಕಾರಣವೆಂಬ ಪ್ರತೀತಿ ಇದೆ. ಪಾಣಿ ಪೀಠದ ನಡುವೆ ಒಂದು ಶಿಲಾಬಾವಿ ಇದ್ದು ಬಾವಿಯ ಒಳ ಮಗ್ಗುಲಲ್ಲಿ ಕೈಯಾಡಿಸಿದರೆ ರುದ್ರಾಕ್ಷಿಗಳಂತೆ ಕೈಗೆಟುಕುವ ಹಲವು ಲಿಂಗಗಳು ಸ್ಪರ್ಶಕ್ಕೆ ಸಿಗುತ್ತದೆ.
ಕೊಡಿ ಹಬ್ಬ ಕರಾವಳಿ ಭಾಗದ ಅತ್ಯಂತ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯಿದೆ. ಬ್ರಹ್ಮ ರಥೋತ್ಸವದ ಮರುದಿನ ರಾತ್ರಿ ನಡೆಯುವ ಬುರ್ಣೋತ್ಸವ ಶ್ರೀ ದೇವರ ಓಕುಳಿಯಾಟ, ನಡಾವಳಿಗಳಿಂದ ಹಬ್ಬದ ರಂಗು ಏರುತ್ತದೆ. ಶ್ರೀ ಕೋಟಿಲಿಂಗೇಶ್ವರ ಕರಾವಳಿಯ ಅತ್ಯಂತ ಪ್ರಾಚೀನ ಶಿವ ಕ್ಷೇತ್ರ. ಕೋಟಿ ಋಷಿಗಳನ್ನು ಸಂತೈಸಿದ ಹಿರಿಮೆ ಈ ಕ್ಷೇತ್ರದ್ದು. ಅನೇಕ ಧಾರ್ಮಿಕ ಆಚರಣೆಗಳೊಂದಿಗೆ ರಥೋತ್ಸವದ ಮರುದಿನ ಓಕುಳಿಯಾಟ, ಕೊಡಿ ಕೊಂಡೊಯ್ಯುವುದು, ಸುತ್ತಕ್ಕಿ ಸೇವೆ ಈ ಜಾತ್ರೆಯಲ್ಲಿನ ಆಚರಣೆಗಳು. ಭಕ್ತರ ಮಹಾ ಮೇಳ ಈ ಜಾತ್ರೆ, ರಥೋತ್ಸವಗಳು, ಭಕ್ತಿ ಶ್ರದ್ದೆಯನ್ನು ಹೆಚ್ಚಿಸುವುದಕ್ಕೆ ಉದಾಹರಣೆ ಎಂಬಂತೆ ಎಷ್ಟ ಸಾಪ್ ಆಲ್ಲದ ಹಬ್ಬು .. ದೀಪಾಳಿ ಹಬ್ಬದ್ ದೀಪ ಕಣ್ ಮುಂದ್ ಬಪ್ಪಕೊಡಿ ಕಾಣ್… ದೀಪಾವಳಿಯ ಗೋಪೂಜೆಯಂದು ಗೋವುಗಳಿಗೆ ಹೇಳುವ ಮಾತಿದು ಕುಂದಾಪುರದ ಆಸುಪಾಸಿನ ಜನತೆ.
ಕ್ಷೇತ್ರ ಪುರಾಣ : ಸಪ್ತ ಕ್ಷೇತ್ರಗಳಲ್ಲಿ ವಿಶೇಷವಾದ ಕೋಟೇಶ್ವರ ಪುರಾಣ ಪ್ರಸಿದ್ಧ ಸ್ಥಳ. ಪರಶುರಾಮ ಸೃಷ್ಟಿಯ ಈ ಪುಣ್ಯ ಭೂಮಿಯಲ್ಲಿ ಈ ಭಾಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದ್ದು ಮೊದಲು ಧ್ವಜಪುರ ಎಂದು ಈಗ ಕೋಟೇಶ್ವರ ಎಂದು ಪ್ರಸಿದ್ಧ. ಒಂದು ಕಾಲದಲ್ಲಿ ಈ ಪರಿಸರ ಬರಗಾಲದಿಂದ ನಲುಗಿತ್ತು. ಆಗ ಹಿಭಾಂಡ ಋಷಿ ಮುನಿ ಮುಂದಾಳತ್ವದಲ್ಲಿ ಒಂದು ಕೋಟಿ ಮುನಿಗಳು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡ ಪ್ರತೀಕವಾಗಿ ಶಿವನು ಪ್ರತ್ಯೇಕವಾಗಿ ಕೋಟಿ ಲಿಂಗಗಳ ರೂಪದಲ್ಲಿ ನೆಲೆನಿಂತು ಬರಗಾಲವನ್ನು ದೂರ ಮಾಡಿ ಜನರನ್ನು ರಕ್ಷಿಸುತ್ತಾನೆ. ಇಲ್ಲಿ ಶಿವನು ಕೋಟಿ ಲಿಂಗದಲ್ಲಿ ಐಕ್ಯವಾದ ಕ್ಷೇತ್ರಕ್ಕೆ ಕೋಟಿಲಿಂಗೇಶ್ವರ ಎಂದು ಹೆಸರು ಬಂದು ಕಾಲ ಕ್ರಮೇಣ ಕೋಟೇಶ್ವರ ಎಂದು ನಾಮಾಂಕಿತಗೊಂಡಿತು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ.