ಪ್ರಗತಿ ಗ್ರಾಫಿಕ್ಸ್ ಮತ್ತು ಶ್ರೀನಿವಾಸ ಪುಸ್ತಕ ಪ್ರಕಾಶನ ಅರ್ಪಿಸುವ ಪರಂಪರಾ ಕಲ್ಚರಲ್ ಫೌಂಡೇಷನ್ ಅವರ ಸಹಯೋಗದಲ್ಲಿ ಸಾಹಿತಿ ರಾಜೇಂದ್ರ ಬಿ. ಶೆಟ್ಟಿಯವರ ಅಮ್ಮ ಹಚ್ಚಿದ ದೀಪ, ಕಥೆಯೊಂದಿಗೆ ಗಣಿತ, ದೆವ್ವಗಳ ನಾಡಿನಲ್ಲಿ ಎಂಬ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ಎಂ. ಭೈರೇಗೌಡ ಅವರು, ಸೂಜಿಗಲ್ಲಿನ ವ್ಯಕ್ತಿತ್ವ ಇರುವವರು ರಾಜೇಂದ್ರ ಬಿ. ಶೆಟ್ಟಿ. ಅಧ್ಯಯನ ಮತ್ತು ಆಸಕ್ತಿಗಳಿಗೆ ಸಂಬಂಧ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಕೆಲಸ ಇವರು ಮಾಡಿದ್ದಾರೆ ಎಂದರು. ಹಾಗೆಯೇ ಸದ್ಯದ ಪತ್ರಿಕೋದ್ಯಮದ ಸ್ಥಿತಿಗತಿ ಬಗೆಗೂ ಸಂತಾಪ ವ್ಯಕ್ತಪಡಿಸಿದರು.
ಅಮ್ಮ ಹಚ್ಚಿದ ದೀಪ ಪುಸ್ತಕ ಪರಿಚಯವನ್ನು ಮಾಡುತ್ತಾ ಡಾ. ನಾ. ದಾಮೋದರ ಶೆಟ್ಟಿ, ಕಥೆಗಾರರು ಸಾಮಾನ್ಯವಾಗಿ ತಮ್ಮ ಕಥೆಗಳಿಗೆ ಒಂದೊಳ್ಳೆ ಆದಿ, ಮಧ್ಯ, ಹಾಗೂ ಒಂದೊಳ್ಳೆ ಮುಕ್ತಾಯ ಇರುವಂತಹ ಕಥಗಳನ್ನು ಬರೆಯುತ್ತಾರೆ ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಬರೆಯುವವರು ರಾಜೇಂದ್ರ ಅವರು, ಹಾಗೆ ಈ ಕೃತಿಯಲ್ಲೂ ಇವರು ಯಾವುದೇ ಅತಿಶಯೋಕ್ತಿ ಇಲ್ಲದೆ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಈ ಸಂಕಲನದಲ್ಲಿ ಬರುವಂತಹ ಒಂದು ಕಥೆ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿನ ಮನೆಗಳಲ್ಲಿ ನಡೆಯುವ, ನಡೆಯಬಹುದಾದಂತಹ ಘಟನೆಯನ್ನು ಅತಿ ಸೂಕ್ಷ್ಮವಾಗಿ ಬರೆದಿದ್ದಾರೆ ಎಂದರು.
ದೆವ್ವಗಳ ನಾಡಿನಲ್ಲಿ ಪುಸ್ತಕ ಪರಿಚಯ ಮಾಡುತ್ತಾ ಶಿಕ್ಷಣ ತಜ್ಞ ಡಿ. ಮಲ್ಲಾರೆಡ್ಡಿ, ಈ ಕಥೆಗಳನ್ನು ಓದುತ್ತ ಓದುತ್ತ ಹೋದಂತೆ ಶಿರಾಡಿ ಘಾಟಿಗೂ ರಾಜೇಂದ್ರ ಅವರಿಗೂ ಅವಿನಾಭಾವ ಸಂಬಂಧ ಇದ್ದಂತೆ ಕಾಣುತ್ತದೆ. ಯಾಕೆಂದರೆ ಈ ಕಥಾ ಸಂಕಲನದಲ್ಲಿ ಬರುವ ಕಥೆಗಳು ದೆವ್ವ ಮತ್ತು ಲೇಖಕರ ನಡುವಿನ ಸಂಭಾಷಣೆ ರೂಪದಲ್ಲಿ ಇದೆ. ಆದರೆ ಇದು ಕನಸಂತೆ ಬದಲಿಸಿ ಓದುಗರಿಗೆ ಹಾಸ್ಯದ ಜೊತೆಗೆ ನೈಜ ಭ್ರಮೆಯನ್ನು ಹುಟ್ಟಿಸುವುದರಲ್ಲಿ ಸಫಲವಾಗಿದೆ ಎಂದರು. ಹಾಗೆ ಕೃತಿಯಲ್ಲಿ ಪರಿಸರದ ಕಾಳಜಿ ಜೊತೆಗೆ ಮಾನವೀಯ ಮೌಲ್ಯವು ಇದೆ ಎಂದರು.
ಕಥೆಯೊಂದಿಗೆ ಗಣಿತ ಕೃತಿಯನ್ನು ಪರಿಚಯಿಸಿದ ಎನ್. ರಾಮನಾಥ್, ಗಣಿತದಲ್ಲಿ ಕೂಡುವುದು ಕಳೆಯುವುದು ಎಷ್ಟು ಸುಲಭವಾಗಿ ಮಾಡಬಹುದು ಎಂಬುವುದನ್ನು ಈ ಪುಸ್ತಕದಲ್ಲಿ ಕಂಡಷ್ಟು ಸುಲಭದ ಉಪಾಯವನ್ನು ನಾನು ಈವರೆಗೂ ಎಲ್ಲೂ ಕಂಡಿಲ್ಲ. ಎಲ್ಲೊ ಗಣಿತ ವಿಷಯದಲ್ಲಿ ಭಯಪಡುವ ವಿದ್ಯಾರ್ಥಿಗಳಿಗೆ ಇದೊಂದು ಅಧ್ಯಯನ ಪುಸ್ತಕವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕೃತಿಗಳ ಕರ್ತೃ ರಾಜೇಂದ್ರ ಬಿ. ಶೆಟ್ಟಿ ಮಾತನಾಡಿ, ನಾನು ಎಂಟನೇ ತರಗತಿಯಲ್ಲಿ ಕಥೆ ಬರೆಯಲು ಆರಂಭಿಸಿದೆ, ತಂದೆ, ತಾಯಿ, ಗುರುಗಳು ನನ್ನನ್ನು ತಿದ್ದಿ ನನ್ನಲ್ಲಿ ಈ ಹವ್ಯಾಸವನ್ನು ಬೆಳಸಿದರು. ಬೆಂಗಳೂರು ಕಡೆ ಮುಖ ಮಾಡಿದ ಮೇಲೆ ಕನ್ನಡ ಬರವಣಿಗೆ ಕಾರಣಾಂತರಗಳಿಂದ ನಿಂತರೂ 20 ವರ್ಷಗಳ ಬಳಿಕ ಬರೆಯಲು ಕಥಾ ಗುಚ್ಛ ಹಾಗೆ ಕನ್ನಡ ಬ್ಲಾಗ್ ಗಳು ಪ್ರೇರೇಪಿಸಿತು. ಇನ್ನು ನನ್ನ ಕಥೆಗಳ ಬರವಣಿಗೆಯ ಶೈಲಿಗೆ ಬಂದರೆ ಅವೆಲ್ಲವೂ ಕಾಲ್ಪನಿಕ ಆದರೆ ನೈಜಕ್ಕೆ ಹತ್ತಿರ. ನಾನು ಕಂಡ ಅನುಭವಕ್ಕೆ ಬಂದ ಘಟನೆಗಳು ಕಥೆಯಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷೀಯ ಮಾತುಗಳನ್ನು ಆಡಿದ ಖ್ಯಾತ ಹಾಸ್ಯ ಸಾಹಿತಿ, ಎಚ್. ಡುಂಡಿರಾಜ್, ಸಾಹಿತ್ಯೇತರ ಕ್ಷೇತ್ರದ ಅನುಭವಗಳನ್ನು ರಾಜೇಂದ್ರ ಅವರು ಬರೆಯುವುದರಿಂದ ಅದರಲ್ಲಿ ಒಂದು ರೀತಿಯ ನಾವೀನ್ಯತೆ, ಸೃಜನ ಶೀಲತೆಯನ್ನು ನಾವು ಕಾಣಬಹುದು. ಹಾಗಾಗಿ ಅವರ ಕಥೆಗಳನ್ನು ನಾವು ಓದಬೇಕು. ಇನ್ನೊಂದು ಅವರ ಕಥೆಗಳು ಚೆನ್ನಾಗಿರುವ ಕಾರಣ ಅವರಿಗೆ ತಾನೊಬ್ಬ ಕಥೆಗಾರ ಎಂಬ ಭ್ರಮೆ ಇಲ್ಲ ಎಂದರು. ಹಾಗೆಯೇ ಅವರ ಎಲ್ಲಾ ಕಥೆಗಳಲ್ಲೂ ಒಂದು ರೀತಿಯ ಪಂಚ್ ಇರುತ್ತದೆ. ಹಾಗೆಯೇ ಅನಿರೀಕ್ಷಿತವಾದ ತಿರುವು ಇರುತ್ತದೆ ಹಾಗಾಗಿ ಅವರ ಕಥೆಗಳನ್ನು ಓದಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ, ಕೆಎಸ್ಎಂ ಸ್ಮಾರಕ ಟ್ರಸ್ಟ್ನ ಸಂಸ್ಥಾಪಕ ಡಾ. ಎಂ. ಭೈರೇಗೌಡ, ಅಂಕಣಕಾರ ಎನ್. ರಾಮನಾಥ್, ಟಿ.ಕೆ.ವಿ ಭಾರತಿ, ಕಟ್ಟೆಸತ್ಯ ಫೌಂಡೇಷನ್ ಮತ್ತು ಸತ್ತ್ವಶಾಲೆಯ ಎಸ್. ಸುಜಯ್, ಜಿ ಮಧುಸೂದನ್ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಹಿತಿ, ಕಂಠದಾನ ಕಲಾವಿದ ಜಿ.ಪಿ. ರಾಮಣ್ಣ ನಿರೂಪಿಸಿದರು.