ಟಿವಿ ವರದಿಗಾರರಿಗೆ ಮೂರು ‘ಸಿ’ ಮುಖ್ಯ: ಪ್ರಕಾಶ್ ಡಿ. ರಾಂಪುರ
ವಿದ್ಯಾಗಿರಿ: ‘ಯಶಸ್ವಿ ಟಿವಿ ವರದಿಗಾರರಾಗಲು ಮೂರು ‘ಸಿ’ ಬಹುಮುಖ್ಯ. ವಿಷಯ (ಕಂಟೆಂಟ್), ಸಂಪರ್ಕ (ಕಾನ್ಟ್ಯಾಕ್ಟ್ಸ್) ಹಾಗೂ ಸಂವಹನ (ಕಮ್ಯುನಿಕೇಷನ್)ದಿಂದ ಉತ್ತಮ ವರದಿ ನೀಡಬಹುದು’ ಎಂದು ಪಬ್ಲಿಕ್ ಟಿವಿ ವರದಿಗಾರ ಪ್ರಕಾಶ್.ಡಿ.ರಾಂಪುರ ಅಭಿಪ್ರಾಯ ವ್ಯಕ್ತಪಡಿಸಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಶುಕ್ರವಾರ ಹಮ್ಮಿಕೊಂಡ ‘ಹಿರಿಯ ವಿದ್ಯಾರ್ಥಿ ಜೊತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿ ದೆಸೆಯಲ್ಲಿ ಪತ್ರಿಕೋದ್ಯಮದ ವಿವಿಧ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಒಂದು ಕೌಶಲಕ್ಕೆ ಸೀಮಿತವಾಗಬೇಡಿ. ಎಲ್ಲವನ್ನು ಕಲಿತಾಗ ಒಂದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.
‘ವೃತ್ತಿಯಲ್ಲಿ ಆತ್ಮವಿಶ್ವಾಸ ಮುಖ್ಯ. ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ಭಂಡ ಧೈರ್ಯ ಬೇಕಾಗುತ್ತದೆ. ಛಲದಿಂದ ಮುಂದಡಿ ಇಡಬೇಕು’ ಎಂದು ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು. ರಕ್ಷಣಾ ಸಚಿವಾಲಯದಿಂದ ಅಧಿಕೃತವಾಗಿ ಯುದ್ಧ ವರದಿಗಾರಿಕೆಗೆ ತರಬೇತಿ ಪಡೆದ ಕುರಿತು ವಿವರಿಸಿದ ಅವರು, ‘ಭಾರತೀಯ ರಕ್ಷಣಾ ಮಂತ್ರಾಲಯವು ಯುದ್ಧ ವರದಿಗಾರಿಕೆ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮ ಹಾಗೂ ನಿಯಮಗಳ ಬಗ್ಗೆ ತರಬೇತಿ ನೀಡುತ್ತದೆ. ಸೇನೆಯ ಒಟ್ಟು ಚಿತ್ರಣ ಹಾಗೂ ಸುರಕ್ಷತೆ ಬಗೆಗೂ ತಿಳಿಸುತ್ತದೆ ಎಂದರು. ‘ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧದ ವರದಿಗಾರಿಕೆಯನ್ನು ಆಲ್ಜಜೀರಾ, ಬಿಬಿಸಿ ಮತ್ತಿತರ ಕೆಲವೇ ಚಾನೆಲ್ಗಳು ಯುದ್ಧಭೂಮಿಯ ನೈಜ ಚಿತ್ರಣವನ್ನು ನೀಡುತ್ತಿವೆ. ಇದಕ್ಕೆ ಅವರಿಗೆ ಅಲ್ಲಿರುವ ಸಂಪರ್ಕ ಹಾಗೂ ಮಾಹಿತಿ ಕಾರಣ’ ಎಂದರು. ಬಳಿಕ ವಿದ್ಯಾರ್ಥಿಗಳ ಜೊತೆ ಅವರು ಸಂವಾದ ನಡೆಸಿದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಪಿ.ಆರ್., ನಿಶಾನ್ ಕೋಟ್ಯಾನ್ ಹಾಗೂ ದೀಕ್ಷಿತಾ ಜೇಡರಕೋಡಿ ಇದ್ದರು.