ತುಳುನಾಡಿನ ಸಮಗ್ರ ಆಸ್ಮಿತೆಯ ಅವಲೋಕನಕ್ಕಾಗಿ ಎಲ್ಲಾ ಜಾತಿ, ಧರ್ಮದವರನ್ನು ಒಳಗೊಂಡ ಪ್ರತ್ಯೇಕ ತುಳು ಭಾಷಾ ಕೇಂದ್ರ ತುಳುನಾಡಿನಲ್ಲೇ ಸ್ಥಾಪನೆಯಾಗಬೇಕಾದ ಅಗತ್ಯತೆಯಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಆಶಿಸಿದರು.
ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ತುಳು ಪರಿಷತ್ ಮಂಗಳೂರು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ರೋಶನಿ ನಿಲಯದ ಕನ್ನಡ ಸಂಘ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಯ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಆಯೋಜಿಸಲಾದ ‘ನೆಲಮೂಲದ ನಡೆ: ಶೋಧ – ಸ್ವಾದ’ ಎಂಬ ರಾಜ್ಯ ಮಟ್ಟದ ವಿಚಾರಗೋಷ್ಠಿ ಹಾಗೂ ಡಾ. ಇಂದಿರಾ ಹೆಗ್ಗಡೆ ಅವರು ಬರೆದ ‘ಅತಿಕಾರೆ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೊಂಕಣಿ ಭಾಷೆಯ ಕುರಿತಂತೆ ಆಳವಾದ ಅಧ್ಯಯನಕ್ಕೆ ಪೂರಕವಾಗುವ ಭಾಷಾ ಕೇಂದ್ರವಿದೆ. ಆದರೆ ತುಳುನಾಡಿನಲ್ಲಿ ತುಳುವಿಗೆ ಬೇಕಾಗಿರುವ ತುಳು ಭಾಷಾ ಕೇಂದ್ರ ಇಲ್ಲದಿರುವುದು ಆಶ್ಚರ್ಯ ತಂದಿದೆ. ತುಳು ಅಕಾಡೆಮಿ ಸಹಿತ ವಿವಿಧ ಪ್ರಕಾರಗಳು ಇದ್ದರೂ ತುಳು ಭಾಷಾ ಕೇಂದ್ರ ಇಂದಿನ ಅಗತ್ಯವಾಗಿದೆ.
ತುಳುನಾಡಿನಲ್ಲಿ ಇವತ್ತು ಇರುವ ಆಚರಣೆ ನಾಳೆಗೆ ಮರೆಯಾಗುತ್ತಿರುವ ಇಂತಹ ಕಾಲದಲ್ಲಿ ತುಳುನಾಡಿನ ಸಂರಚನೆಯ ಆಳ ಅಗಲವನ್ನು ಭವಿಷ್ಯಕ್ಕೆ ಕಾಪಾಡುವ ಉದ್ದೇಶದಿಂದ ಭಾಷಾ ಕೇಂದ್ರ ಅನಿವಾರ್ಯ ಎಂದರು. ಮಂಜೇಶ್ವರ ಗೋವಿಂದ ಪೈ ಆದಿಯಾಗಿ ತುಳುನಾಡಿನ ಬಗ್ಗೆ ಹಲವು ಅಗ್ರಗಣ್ಯರು ವಿಸ್ತೃತವಾಗಿ ಅಧ್ಯಯನ ಮಾಡಿದ್ದಾರೆ. ಈ ಪಂಕ್ತಿಯಲ್ಲಿ ಡಾ. ಇಂದಿರಾ ಹೆಗ್ಗಡೆ ಅವರು ಕೂಡ ತುಳುನಾಡಿನ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲುವ ವಿಶೇಷ ಪ್ರಯತ್ನವನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ ಎಂದರು.
ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ರೋಶನಿ ನಿಲಯದ ರಿಜಿಸ್ಟಾರ್ ಪ್ರೊ ವಿನುತಾ ಕೆ, ತುಳು ಪರಿಷತ್ ಗೌರವಾಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ ಉಪಸ್ಥಿತರಿದ್ದರು. ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರೊ. ಪಿ. ಕೃಷ್ಣಮೂರ್ತಿ ಸ್ವಾಗತಿಸಿದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಪುಸ್ತಕದ ಕುರಿತಂತೆ ಮಾಹಿತಿ ನೀಡಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ಕಲ್ಲೂರು ನಾಗೇಶ ವಂದಿಸಿದರು. ಲೇಖಕಿ ಡಾ. ಸುಲತಾ ನಿರೂಪಿಸಿದರು.