ಬಂಟ ಸಮಾಜದ ಅಗ್ರಗಣ್ಯ ನೇತಾರ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಅವರ ಆಶೀರ್ವಾದದೊಂದಿಗೆ ಪತ್ರಿಕೋದ್ಯಮಿ ರಂಜಿತ್ ಶೆಟ್ಟಿಯವರು ಸರ್ವರಿಗೂ ಆರೋಗ್ಯ, ಸರ್ವರಿಗೂ ವಿದ್ಯಾಭ್ಯಾಸ, ಸರ್ವರಿಗೂ ಉದ್ಯೋಗ ಎಂಬ ಮೂರು ಪರಿಕಲ್ಪನೆ ಇಟ್ಟುಕೊಂಡು, ಬಂಟ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಬಂಟ್ಸ್ ಬ್ರಿಗೇಡ್ ಸೇವಾ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದ್ದಾರೆ. ನಾಳೆ ಗಣೇಶ ಚತುರ್ಥಿಯ ಶುಭ ದಿನದಂದು ಮಂಗಳೂರಿನಲ್ಲಿ ಬಂಟ್ಸ್ ಹಾಸ್ಟೆಲ್ ಓಂಕಾರ ನಗರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬಂಟ್ಸ್ ಬ್ರಿಗೇಡ್ ಸೇವಾ ಸಂಸ್ಥೆಯ ಲೋಗೋ ಅನಾವರಣವನ್ನು ಗಣ್ಯರ ಸಮ್ಮುಖದಲ್ಲಿ ಅಜಿತ್ ಕುಮಾರ್ ರೈ ಮಾಲಾಡಿಯವರು ಮಾಡಲಿದ್ದಾರೆ.
ಪ್ರತಿ ತಿಂಗಳು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಬಂಟ ಸಮಾಜ ಬಾಂಧವರಿಗೆ ಅರೋಗ್ಯ ತಪಾಸಣಾ ಶಿಬಿರ ಮಾಡಿಕೊಂಡು ಔಷಧಿ ಉಚಿತವಾಗಿ ನೀಡಲು, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಅವರವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ದೊರಕಿಸಿಕೊಡಲು, ಸರ್ವರಿಗೂ ವಿದ್ಯಾಭ್ಯಾಸ ದೊರೆಯಲು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಸಹಾಯಹಸ್ತ ಚಾಚಲು ಸಂಸ್ಥೆ ಮುಂದಾಗಿವೆ.