ಚಂದ್ರನ ಅಂಗಳ ನೋಡಿದ್ದಾಯ್ತು. ಈಗ ಸೂರ್ಯನತ್ತ ಇಸ್ರೋ ಕಣ್ಣುನೆಟ್ಟಿದೆ! ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ನೆಲೆ ನಿಂತಿದೆ. ಈಗಾಗಲೇ ಅದು ತನ್ನ ಕಾರ್ಯಾಚರಣೆಯನ್ನೂ ಶುರುಮಾಡಿದೆ. ಈ ಸಾಧನೆಯು ಈಗ ಭಾರತದ ನಿರೀಕ್ಷೆಗಳನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇದಾದ ನಂತರ ಭಾರತದ ಮೊದಲ ಸೋಲಾರ್ ಮಿಷನ್ ‘ಆದಿತ್ಯ ಎಲ್ 1’ ಅನ್ನು ಇಸ್ರೋ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಮೂಲಕ ಸೂರ್ಯನ ಸಂಶೋಧನೆಗೆ ಮುಂದಾಗುತ್ತಿದೆ.

ಸೂರ್ಯನ ಮೇಲೆ ಮಾತ್ರವಲ್ಲ; ಶುಕ್ರ, ಮತ್ತೂಮ್ಮೆ ಮಂಗಳ, ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಪಯಣ ಬೆಳೆಸುವುದು ಹೀಗೆ ಹಲವು ಯೋಜನೆಗಳನ್ನು ಮುಂದೊಂದು ದಶಕದಲ್ಲಿ ಕಾರ್ಯರೂಪಕ್ಕೆ ತರುವ ಗುರಿಯನ್ನು ಭಾರತದ ವಿಜ್ಞಾನಿಗಳು ಹೊಂದಿದ್ದಾರೆ. ಇದಕ್ಕಾಗಿ ಸಿದ್ಧತೆಗಳು ಈಗಿನಿಂದಲೇ ನಡೆದಿದೆ. ಚಂದ್ರನ ಮೇಲೆ ಬೀಡುಬಿಟ್ಟ ‘ವಿಕ್ರಂ’ ಮತ್ತು ‘ಪ್ರಗ್ಯಾನ್’ ನೀಡುವ ಮಾಹಿತಿಗಳನ್ನು ಕಲೆಹಾಕಿ, ಅವುಗಳ ವಿಶ್ಲೇಷಣೆ ಮಾಡಬೇಕಿದೆ. ಅಗತ್ಯಬಿದ್ದರೆ ಚಂದ್ರಯಾನ-4 ಕೈಗೆತ್ತಿಕೊಳ್ಳಬೇಕಾಗುತ್ತದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮೇಲೆ ಜವಾಬ್ದಾರಿಗಳನ್ನೂ ಹೆಚ್ಚಿಸಿದೆ. ಅದನ್ನು ಇಷ್ಟೇ ಚಾಕಚಕ್ಯತೆಯಿಂದ ನಿಭಾಯಿಸುವ ಹೊಣೆ ವಿಜ್ಞಾನಿಗಳ ಮೇಲಿದೆ.

ಇದುವರೆಗೆ ಯಾರೂ ಹೋಗಿರದ ಜಾಗಕ್ಕೆ ಇಸ್ರೋ ವಿಜ್ಞಾನಿಗಳು ಯಾವುದೇ ಅಡತಡೆ ಇಲ್ಲದೆ ಸಲೀಸಾಗಿ ದಾಂಗುಡಿ ಇಟ್ಟಿದ್ದಾರೆ. ಇದಕ್ಕೆ ಉಳಿದ ರಾಷ್ಟ್ರಗಳ ವಿಜ್ಞಾನಿಗಳು ನಿಬ್ಬೆರಗಾಗಿದ್ದು, ಎಲ್ಲೆಡೆ ಶ್ಲಾಘನೆಯೂ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸಾಲು-ಸಾಲು ಸವಾಲುಗಳಿವೆ. ಗಗನಯಾನ ಸೇರಿ ಭವಿಷ್ಯದಲ್ಲಿ ಹತ್ತಾರು ಯೋಜನೆಗಳನ್ನು ಇಸ್ರೋ ಹಾಕಿಕೊಂಡಿದೆ. ಚಂದ್ರನಲ್ಲಿ ಸ್ಥಾಪಿಸಿದ ಮೈಲುಗಲ್ಲಿನ ಮೇಲೆ ಸಾಧನೆಯ ಸೌಧ ನಿರ್ಮಿಸಬೇಕಿದೆ ಎಂದು ತಜ್ಞರು ಹೇಳುತ್ತಾರೆ.
ಆದಿತ್ಯ ಎಲ್ 1 – ಇದು ಸೂರ್ಯನ ಬಗ್ಗೆ ಅಧ್ಯಯನ ಮಾಡುವ ಮಿಷನ್ ಆಗಿದೆ. ಇದು ಸೆಪ್ಟೆಂಬರ್ ಆರಂಭದಲ್ಲಿ ಆಗಸದತ್ತ ನೆಗೆಯುವ ಸಾಧ್ಯತೆ ಇದೆ. ಈ ಉಪಗ್ರಹವು ಸೂರ್ಯ ಮತ್ತು ಭೂಮಿಯ ನಡುವಿನ ಬಿಂದು ‘ಲ್ಯಾಗ್ರೇಂಜ್- 1’ ನಲ್ಲಿ ಗಿರಕಿ ಹೊಡೆಯಲಿದೆ. ಈ ಬಿಂದು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ. ದೂರದಲ್ಲಿರಲಿದೆ. ಅಲ್ಲಿಂದ ಸೂರ್ಯನ ಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇಸ್ರೋಗೆ ಅಲ್ಲಿನ ಮಾಹಿತಿಗಳನ್ನೂ ರವಾನಿಸಲಿದೆ.

ಗಗನಯಾನ- ಇಸ್ರೋದ ಹಲವು ಯೋಜನೆಗಳ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸಿದ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶದತ್ತ ಪಯಣಿಸುವ ಪ್ರಾಜೆಕ್ಟ್ ಇದು. 2024ರಲ್ಲಿ ಇದನ್ನು ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಮೂವರು ಗಗನಯಾತ್ರಿಗಳನ್ನು 400 ಕಿ.ಮೀ. ಎತ್ತರದ ಕಕ್ಷೆಗೆ ಮೂರು ದಿನಗಳ ಪ್ರಯಾಣಕ್ಕಾಗಿ ಕರೆದೊಯ್ದು, ಅವರನ್ನು ಮರಳಿ ಸುರಕ್ಷಿತವಾಗಿ ಭೂಮಿಗೆ ಕರೆತಂದು ಭಾರತದ ವ್ಯಾಪ್ತಿಯ ಸಮುದ್ರದಲ್ಲಿ ಇಳಿಸುವ ಯೋಜನೆ ಇದಾಗಿದೆ. ಸಾಮಾನ್ಯವಾಗಿ ಬಾಹ್ಯಾಕಾಶ ಅವಶೇಷಗಳು ವಾತಾವರಣದಲ್ಲೇ ಉರಿದುಹೋಗುತ್ತವೆ. ಆದರೆ, ಈ ಯೋಜನೆಯಲ್ಲಿ ವಿಜ್ಞಾನಿಗಳ ಮುಂದಿರುವ ದೊಡ್ಡ ಸವಾಲು ಎಂದರೆ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ತರುವುದು.
ನಿಸಾರ್- ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆ ನಾಸಾ ಪಾಲುದಾರಿಕೆಯಲ್ಲಿ ಕೈಗೆತ್ತಿಕೊಂಡ ಯೋಜನೆ ಇದಾಗಿದೆ. ಮುಂದಿನ ವರ್ಷದಲ್ಲಿ ಇದು ಉಡಾವಣೆಯಾಗುವ ನಿರೀಕ್ಷೆ ಇದೆ. ಇದು ಭೂಮಿಯ ಮೇಲ್ಮೆನಲ್ಲಿರುವ ಮಣ್ಣು, ಮಂಜುಗಡ್ಡೆಯ ಬಗ್ಗೆ ಅಧ್ಯಯನ ನಡೆಸಲಿದೆ. ಹವಾಮಾನ ಬದಲಾವಣೆ, ಅರಣ್ಯ ನಾಶ, ಕರಗುತ್ತಿರುವ ಹಿಮನದಿಗಳು, ಭೂಮಿಯ ಕಂಪನಗಳು ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ, ಮಣ್ಣಿನಲ್ಲಿರುವ ತೇವಾಂಶ, ಇಳುವರಿ ಮುನ್ಸೂಚನೆ, ಅಕ್ಕಿ ಮತ್ತು ಸೆಣಬಿನಂತಹ ಪ್ರಮುಖ ಬೆಳೆಗಳ ಕೊಯ್ಲಿಗೆ ಮೊದಲೇ ಸೂಚನೆ ಮತ್ತಿತರ ಹಲವಾರು ಕೃಷಿಗೆ ಉಪಯುಕ್ತವಾದ ಮಾಹಿತಿಯನ್ನು ಈ ನಿಸಾರ್ ಮಿಷನ್ನಿಂದ ಲಭ್ಯವಾಗಲಿದೆ.
ಶುಕ್ರಯಾನ- ಹೆಸರೇ ಸೂಚಿಸುವಂತೆ ಇದು ಶುಕ್ರನ ಮೇಲೆ ಅಧ್ಯಯನ ನಡೆಸಲಿದೆ. 2024ರ ಡಿಸೆಂಬರ್ನಲ್ಲಿ ಇದನ್ನು ಉಡಾವಣೆ ಮಾಡುವ ಯೋಜನೆ ಇತ್ತು. ಆದರೆ, 2031ಕ್ಕೆ ಮುಂದೂಡಿಕೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶುಕ್ರ ಮತ್ತು ಭೂಮಿ ತುಂಬಾ ಹತ್ತಿರದಲ್ಲಿ ಒಂದೇ ಸಾಲಿನಲ್ಲಿ ಇದು ಆಗುವಂತಹದ್ದು. ಅತ್ಯಂತ ತಾಪಮಾನ ಹೊಂದಿರುವ ಈ ಶುಕ್ರನ ಮೇಲ್ಮೆ ಅನ್ನು ಇಸ್ರೋ ವೀಕ್ಷಿಸಲಿದೆ.
ಮಂಗಳಯಾನ 2- ಇದೊಂದು ಅಂತರ ಗ್ರಹ ಮಿಷನ್. 2024ರಲ್ಲಿ ಯೋಜನೆ ಜಾರಿಗೊಳಿಸುವ ಗುರಿಯನ್ನು ಹೊಂದಲಾಗಿದೆ. ಹೈಪರ್ಸ್ಪೆಕ್ಟ್ರಲ್ ಕ್ಯಾಮೆರಾ, ಅತ್ಯಧಿಕ ರೆಸಲ್ಯುಷನ್ವುಳ್ಳ ಕ್ಯಾಮೆರಾ ಮತ್ತು ರೆಡಾರ್ ಮೂಲಕ ಮಂಗಳನ ಆರಂಭಿಕ ಹೊರಪದರ, ಅಗ್ನಿಶಿಲೆ, ಬಂಡೆಗಳನ್ನು ಶೋಧಿಸಲು ಉದ್ದೇಶಿಸಲಾಗಿದೆ.








































































































