ಪುತ್ತೂರು ದೇವತಾ ಸಮಿತಿ ವತಿಯಿಂದ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ 66 ನೇ ವರ್ಷದ ಸಾರ್ವಜನಿಕ ಮಹಾಗಣೇಶೋತ್ಸವದ ವಿಗ್ರಹ ರಚನೆಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಪೈ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ವೇದಮೂರ್ತಿ ಸುಬ್ರಮಣ್ಯ ಹೊಳ್ಳರವರ ನೇತೃತ್ವದಲ್ಲಿ ದೇವತಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ವಿಗ್ರಹ ರಚನೆಗೆ ಮುಹೂರ್ತ ನಡೆಸಲಾಯಿತು.


ಮೂರ್ತಿ ರಚನೆ ಮಾಡುವ ರಮೇಶ್ ಪೂಜಾರಿಯವರು ಶ್ರೀ ಗಣೇಶನ ವಿಗ್ರಹ ರಚಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರತೀ ವರ್ಷ ನಾಗರ ಪಂಚಮಿಯ ದಿನದಂದು ಕಿಲ್ಲೆ ಮೈದಾನದ ಗಣೇಶೋತ್ಸವಕ್ಕೆ ವಿಗ್ರಹ ಮುಹೂರ್ತ ಮಾಡಲಾಗುತ್ತಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ : ಶ್ರೀಮಹಾ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ್ ಶೆಟ್ಟಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಇದು ಗಣೇಶನ ಸಂಕಲ್ಪದಂತೆ ನಡೆಯುವ ಉತ್ಸವವಾಗಿದೆ. ಕಳೆದ 65 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು ಇದೀಗ 66 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಗಣೇಶನ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಲು ಎಲ್ಲರ ಸಹಕಾರದಿಂದ ಸಾಧ್ಯವಿದೆ ಎಂದು ಹೇಳಿದರು. ಶ್ರೀದೇವತಾ ಸಮಿತಿಯ ಪದಾಧಿಕಾರಿಗಳಾದ ಕಿಟ್ಟಣ್ಣ ಗೌಡ, ಶ್ರೀಧರ ನಾಯಕ್, ಗಣಪತಿ ಪೈ, ಸೀತಾರಾಮ ಶೆಟ್ಟಿ, ಸುದೇಶ್, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸುದರ್ಶನ್, ದಿನೇಶ್ ಪಿ.ವಿ. ಉಪಸ್ಥಿತರಿದ್ದರು.





































































































