ಚಿಣ್ಣರ ಬಿಂಬದ ನೆರೂಲ್ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆಗಾಗಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ನೆರೂಲ್ ಶನಿ ಮಂದಿರದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ, ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಹೋಟೆಲ್ ಉದ್ಯಮಿ ಹಾಗೂ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರ ನೆರೂಲ್ ನ ಕಾರ್ಯಾಧ್ಯಕ್ಷರಾದ ಶ್ರೀ ರವಿ ಆರ್ ಶೆಟ್ಟಿ ಮಾತನಾಡಿ, ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆ ನೋಡಿ ಸಂತೋಷವಾಗುತ್ತಿದೆ. ಮಕ್ಕಳು ಎಳೆಯ ಗಿಡದಂತಿದ್ದಾಗಲೇ ಬಗ್ಗಿಸಿ, ತಿದ್ದಿ ತೀಡಿ ನೀಡುವ ಬಾಲ್ಯದ ಶಿಕ್ಷಣ-ಸಂಸ್ಕಾರಗಳು ಅವರ ವ್ಯಕ್ತಿತ್ವನ್ನು ರೂಪಿಸುವವು. ಅದಕ್ಕೆ ಶ್ರಮಿಸುವ ರೂವಾರಿಗಳು ಮತ್ತು ಸ್ವಯಂ ಸೇವಕರು ಮಾಡುವ ಕೆಲಸ ಶ್ಲಾಘನೀಯ. ಚಿಣ್ಣರ ಬಿಂಬದ ಮಕ್ಕಳಿಗೆ ನನ್ನ ಸಹಾಯ ಸದಾ ಇರುತ್ತದೆ ಎಂದು ಹೇಳಿದರು.
ಬಂಟರ ಸಂಘದ, ನವಿ ಮುಂಬಯಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿರುವ ಶ್ರೀಮತಿ ಜಯಂತಿ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಪ್ರಕಾಶ್ ಭಂಡಾರಿಯವರ ಕಾರ್ಯದಕ್ಷತೆ, ಮಕ್ಕಳ ಬಗೆಗಿನ ಅವರ ಕಾಳಜಿ ತಿಳಿಸುತ್ತಾ ಮಕ್ಕಳಿಗೆ ಶುಭ ಹಾರೈಸಿದರು. ನೆರೂಲ್ ಪರಿಸರದ ನಗರ ಸೇವಕರಾದ ಮೀರಾ ಪಾಟೀಲ್ ಮಕ್ಕಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನಂದ ವ್ಯಕ್ತ ಪಡಿಸಿದರು. ಅಂತೆಯೇ ಶ್ರೀ ಜನಾರ್ದನ್ ದೇವಾಡಿಗ ಗೌರವಾಧ್ಯಕ್ಷರು, ದೇವಾಡಿಗ ಸಂಘ ಉಪ್ಪುಂದ ಮತ್ತು ಶ್ರೀ ರಾಜೇಶ್ ಗೌಡ ಸಮಾಜ ಸೇವಕರು ಹಾಗೂ ಮಯೂರ ಫೌಂಡೇಶನ್ ಮುಂಬಯಿ ಇದರ ಉಪಾಧ್ಯಕ್ಷರುಗಳು ಮಕ್ಕಳಿಗೆ ಶುಭವಾಗಲಿ ಅವರ ಕಾರ್ಯ ಚಟುವಟಿಕೆಗಳಿಗೆ ಸದಾ ನಮ್ಮ ಬೆಂಬಲವಿದೆ ಎಂದು ಸಂದೇಶ ಕಳುಹಿಸಿದರು.
ವೇದಿಕೆಯ ಮೇಲೆ ಟ್ರಸ್ಟಿ ಭಾಸ್ಕರ ಶೆಟ್ಟಿ, ಹಿರಿಯ ಸದಸ್ಯೆ ಸಂಘಟಕಿ ರೂಪ ದಿನೇಶ್ ಶೆಟ್ಟಿ, ವಲಯ ಮುಖ್ಯಸ್ಥರಾದ ಆಶಾ ಪೂಜಾರಿ, ಸುಕುಮಾರಿ ಶೆಟ್ಟಿ, ಶ್ರೀಮತಿ ಪದ್ಮಾವತಿ, ಪ್ರಾದೇಶಿಕ ಮುಖ್ಯಸ್ಥೆ ಕ್ಷಮ ತಾಮಣಕರ್, ಸಂಧ್ಯಾ ಮೋಹನ್, ಶಿಬಿರ ಮುಖ್ಯಸ್ಥೆ ಆಶಾ ಬಿ ಶೆಟ್ಟಿ, ಸಹ ಮುಖ್ಯಸ್ಥೆ ಸವಿತಾ ಶೆಟ್ಟಿ, ಸಾoಸ್ಕ್ರತಿಕ ಮುಖ್ಯಸ್ಥೆ ಪೂಜಾ ಭಟ್ ಉಪಸ್ಥಿತರಿದ್ದರು. ಜಾತಿ, ಮತ, ಪಂಥಗಳ ಸುಳಿಗೆ ಸಿಲುಕದೆ ಎಲ್ಲಾ ತುಳು ಕನ್ನಡಿಗರು ನಮ್ಮವರು ಎನ್ನುತ್ತಾ ಟ್ರಸ್ಟಿಯವರು ಪಾಲಕರಾದ ಶ್ರೀ ಮೆಹಬೂಬ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯೆ ಸುಕುಮಾರಿ ಶೆಟ್ಟಿಯವರನ್ನು ಸಹ ಸನ್ಮಾನಿಸಲಾಯಿತು. ಶ್ರೀಮತಿ ಜಗದೇವಿ ದಲಗಡೆ ಮತ್ತು ಶ್ರೀಮತಿ ಶೋಭಾ ಶೆಟ್ಟಿ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಆಗಮಿಸಿದ್ದರು. ಲೇಖಕಿ ಹಾಗೂ ಕನ್ನಡ ಶಿಕ್ಷಕಿಯಾದ ಶ್ರೀಮತಿ ಶೋಭಾ ಶೆಟ್ಟಿಯವರು ಮಕ್ಕಳು ಹಾಗೂ ಪಾಲಕರಿಗೆ ಸ್ಪರ್ಧೆಗಳಿಗೆ ಬೇಕಾದ ಪೂರ್ವ ತಯಾರಿಯ ಅರಿವು, ಅಭಿನಯದಲ್ಲಿ ನವರಸಗಳ ಅಭಿವ್ಯಕ್ತಿ, ತರಬೇತಿ ಕೊಡುವುದು ಮತ್ತು ಮಕ್ಕಳ ಉನ್ನತ ಭವಿಷ್ಯದಲ್ಲಿ ತಾಯಂದಿರ ಪಾತ್ರ ಬಹು ಮುಖ್ಯವಾದದ್ದು. ಅದನ್ನು ನಿಭಾಯಿಸುವ ಪರಿ ಹಾಗು ಸಂಸ್ಕಾರ ಕಲಿಸುವ ಜವಾಬ್ದಾರಿಯನ್ನು ವಿವರಿಸಿದರು.
ಕು ಸನಾಥನ್, ಕು ಚಂದನ್, ಕು ನಿತ್ಯಶ್ರೀಯವರು ನಿರೂಪಣೆ ಮಾಡಿದರು. ಸುಜಾತ ಉದಯ ಶೆಟ್ಟಿ ಮತ್ತು ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಪೂಜಾ ಬಾಲಕೃಷ್ಣ ಭಟ್ ಧನ್ಯವಾದ ಸಮರ್ಪಣೆ ಮಾಡಿದರು. ಚಿಣ್ಣರ ಬಿಂಬದ ಹಿರಿಯ ಸದಸ್ಯರು, ಶಿಕ್ಷಕಿಯರು, ಸ್ವಯಂ ಸೇವಕರು, ಪೂರ್ವ ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.