ಕುದ್ರುಮನೆ ಶ್ರೀನಿವಾಸ ಶೆಟ್ಟರ ಹುಡುಕಿಕೊಂಡು ಸಕಲೇಶಪುರಕ್ಕೆ ಹೋಗಿ ಬಂದೆ. ಅರವತ್ತೇಳರ ವಯದಲ್ಲಿ ಮೂವ್ವತ್ತರ ಹುರುಪಿನಲ್ಲಿ ತನ್ನ ವಿಸ್ತಾರವಾದ ಬದುಕಿನ ಅನುಭವದ ಗಟ್ಟಿತನದ ಶೆಟ್ಟರ ಜೊತೆಗೆ ಹರಟಿದ್ದು ಭರ್ತಿ ಮೂರು ಗಂಟೆಗಳ ಕಾಲ. ಅವರ ಜೀವನಾನುಭವ, ಅಧ್ಯಯನ, ಸಾಮಾಜಿಕ ಪರಿಕಲ್ಪನೆ, ನ್ಯಾಯ ನಿಷ್ಠುರತೆ ನನ್ನನ್ನ ಮತ್ತೆ ಮತ್ತೆ ಕಾಡಿದ್ದು ಸುಳ್ಳಲ್ಲ. ಹಳ್ಳಿ ಮೂಲೆಯ ವಾಲಿ ಬೆಲ್ಲದಿಂದ ಹಿಡಿದು ಸ್ಟೆಮ್ ಸೆಲ್ ಬಯಾಲಜಿಯ ತನಕ ಅಪಾರವಾದ ಅವರ ಅರಿವು ಬೆರಗು ಹುಟ್ಟಿಸುತ್ತದೆ. ದೊಡ್ಡ ಮನೆತನದಲ್ಲಿ ಹುಟ್ಟಿದರೂ ದಟ್ಟ ಬಡತನ ಅನುಭವಿಸಿದ ಶೆಟ್ಟರು ಕಾಲಿಗೆ ಹಾಕಲು ಜೋಡು ಚಪ್ಪಲಿ ಇಲ್ಲದ ದಿನಗಳನ್ನ ಸಹ ಕಂಡವರು. ತನ್ನ ಹುಟ್ಟೂರು ಹಾಲಾಡಿಯಿಂದ ಕುಂದಾಪುರದ ತನಕ ಬಾಡಿಗೆ ಸೈಕಲ್ಲು ತುಳಿದು ಕಾಲೇಜು ಮುಗಿಸಿದವರು. ಮಧ್ಯಾಹ್ನದ ಊಟಕ್ಕೆ ಕ್ಯಾಂಟೀನಿಗೆ ಕೊಡಲು ಕಾಸಿಲ್ಲದೆ ವರ್ಷಾನುಗಟ್ಟಲೆ ಉಪವಾಸ ಉಳಿದವರು. ಬಿಎಂ ಸುಕುಮಾರ್ ಶೆಟ್ಟರು ಆಗ ತನಗೆ ನೆರವಾಗಿ ಬಂದದ್ದನ್ನು ಶೆಟ್ಟರು ಇಂದಿಗೂ ಕೃತಜ್ಞತೆಯಿಂದ ನೆನೆಯುತ್ತಾರೆ. ಚಪ್ಪಲಿಗೆ ಕಾಸಿಲ್ಲವೆಂದ ಮೇಲೆ ಹಾಕಲು ಪ್ಯಾಂಟೆಲ್ಲಿಂದ ತರಬೇಕು? ಮುಂಡು ಪಂಚೆ ಉಟ್ಟೇ ಕಾಲೇಜಿಗೆ ಬರುತ್ತಿದ್ದ ಶೆಟ್ಟರಿಗೆ ಆ ಕಾರಣಕ್ಕೆ ಗೆಳೆಯರು ‘ಪಂಜಿ ಶೀನ’ ಅಂತಲೇ ಕರೆಯುತ್ತಿದ್ದರಂತೆ.
ಇಂತಹ ಶೆಟ್ಟರು ಮುಂದೆ ಓದು ಮುಗಿಸಿ ಎಂಬತ್ತರ ದಶಕದಲ್ಲಿ ಮುಂಬಯಿಗೆ ತೆರಳಿ ಸಣ್ಣದೊಂದು ನೌಕರಿ ಹಿಡಿದರು. ಅಲ್ಲಿಂದ ಮುಂದೆ ಬೆಹರಿನ್ ತಲುಪಿದರು. ಅಲ್ಲಿ ದುಡಿಯುತ್ತಲೇ textile ಉದ್ಯಮಿಯಾದರು. ತೊಂಬತ್ತರ ದಶಕದಲ್ಲೇ ಶೆಟ್ಟರು ಅರಬ್ಬರ ನೆಲದಲ್ಲಿ ಬರೋಬ್ಬರಿ ಕೋಟ್ಯಾಧಿಪತಿಯಾಗಿದ್ದರು. ಅದೇಕೋ ವ್ಯವಹಾರ ಕೈ ಕೊಟ್ಟಿತು, ಶೆಟ್ಟರ ಕೈ ಕಟ್ಟಿತು. ಸೋಲು ಬರಸಿಡಿದು ಬಡಿಯಿತು. ಹಾಗಂತ ಸೋಲೊಪ್ಪದ ಶೆಟ್ಟರು ಕರಾವಳಿಗರ ಕೈ ಹಿಡಿದ ಉದ್ಯಮ ರೆಸ್ಟೋರೆಂಟ್ ಶುರು ಮಾಡಿದವರೇ ಮಾಡಿಕೊಂಡ ಸಾಲವೆಲ್ಲಾ ತೀರಿಸಿ ಮತ್ತೆ ಭಾರತಕ್ಕೆ ಮರಳುವಾಗ ಅವರ ತಲೆಯಲ್ಲಿದ್ದದ್ದು ಭವಿಷ್ಯದ ಬೃಹತ್ ಉದ್ಯಮಗಳು. ಇಂದಿಗೆ ಡಾ| ಹೆಚ್.ಎಸ್ ಶೆಟ್ಟರು ಉದ್ಯಮ ಜಗತ್ತಿನಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ನಿಜವಾದರೂ ತಾನು ನೆಮ್ಮದಿ ಹುಡುಕಿಕೊಂಡು ನೆಲೆಯೂರಿದ್ದು ದೇಸಿ ತಳಿಗಳ ಗೋಶಾಲೆ ದಂಡಿನಲ್ಲಿ, ಪ್ರೀತಿಯಿಂದ ಸಾಕಿಕೊಂಡ ಬೀದಿ ನಾಯಿಗಳ ಹಿಂಡಿನಲ್ಲಿ, ಗೌರಿ ಶಂಕರ ದೇವಳದ ಗರ್ಭಗುಡಿಯೊಳಗಿನ ನೀಲಾಂಜನದ ಪ್ರಭೆಯಲ್ಲಿ, ಅಲ್ಲಿ ಮಿರುಗುವ ಶಿವಲಿಂಗದ ಪ್ರಭಾವಲಯದಲ್ಲಿ. ಸಕಲೇಶಪುರದ ನೂರಾರು ಎಕರೆ ಕಾಫಿ ತೋಟದ ನಡುವೆ ತನ್ನಿಷ್ಟದಂತೆ ಮನೆಯೊಂದನ್ನು ಕಟ್ಟಿಕೊಂಡು ಹಸಿರು ಪ್ರಚ್ಛದ ಮಡಿಲಲ್ಲಿ ತೀರಾ ದೇಸಿ ಬದುಕು ಬದುಕುವ ಶ್ರೀನಿವಾಸ ಶೆಟ್ಟರು ಒಂದು ಮುಂಡು ಪಂಚೆಯೊಂದಿಗೆ ನಮ್ಮನ್ನ ಬರಮಾಡಿಕೊಂಡರು, ಮನೆಯ ಮಕ್ಕಳಂತೆ ಅಕ್ಕರೆಯಲ್ಲಿ ಮಾತಾಡಿದರು. ಭವಿಷ್ಯದ ಭಾರತದ ಬಗ್ಗೆ ಭರವಸೆಯ ಮಾತಾದರು. ಹೊಸ ಜಮಾನದ ನಡೆ ನುಡಿಯ ಬಗ್ಗೆ ಆತಂಕದ ದನಿಯಾದರು.



ಈ ಸಮಾಜ ತೀರಾ ಕೆಟ್ಟದಾಗಿ ನಡೆಸಿಕೊಂಡ ಕರಾವಳಿಯ ನೆಲಮೂಲದ ಅತ್ಯಂತ ಪ್ರಾಮಾಣಿಕ ಮತ್ತು ಮೂಲನಿವಾಸಿ ಸಮುದಾಯವಾದ ಕೊರಗರ ಬದುಕಿನ ಅಭಿವೃದ್ಧಿಗಾಗಿ ಬಹು ದೊಡ್ಡ ಕನಸಿನಲ್ಲಿ ಶೆಟ್ಟರು ಗಟ್ಟಿಯಾದ ಮುನ್ನುಡಿ ಬರೆದಿದ್ದಾರೆ. ತಲಾ ಹದಿನಾಲ್ಕು ಲಕ್ಷದ ಅಂದಾಜಿನಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳನ್ನ ಕೊರಗರಿಗೆ ಈಗಾಗಲೇ ಕಟ್ಟಿಸಿಕೊಟ್ಟಿರುವ ಶೆಟ್ಟರು ಕೊರಗರಿಗಾಗಿಯೇ ನೂರಾರು ಸೂರು ನಿರ್ಮಿಸಲು ಮುಂದಡಿ ಇಟ್ಟಿದ್ದಾರೆ. ಶ್ರೀ ರಾಮ ಮಂದಿರಕ್ಕೆ ದೇಣಿಗೆ ಏನೂ ಕೊಡಲಿ ಎಂದು ಶ್ರೀ ಪೇಜಾವರ ಶ್ರೀಗಳಲ್ಲಿ ಕೇಳಿಕೊಂಡಾಗ ಶ್ರೀ ರಾಮನ ಹೆಸರಲ್ಲಿ ಸಮಾಜದ ಕಟ್ಟ ಕಡೆಯ ಸಮುದಾಯಕ್ಕೆ ಅಗತ್ಯವಿರುವ ಸೂರು ಕಟ್ಟಿಕೊಟ್ಟರೆ ರಾಮ ಅಲ್ಲಿಯೂ ಸಂತೃಪ್ತನಾಗುತ್ತಾನೆ ಎಂದ ಮಾತನ್ನೇ ಪ್ರೇರಣೆಯಾಗಿ ಸ್ವೀಕರಿಸಿದ ಶ್ರೀನಿವಾಸ ಶೆಟ್ಟರು ಕೊರಗ ಸಮುದಾಯದ ಅಭಿವೃದ್ಧಿಗೆ ಮಾಡುತ್ತಿರುವ ಕಾರ್ಯಕ್ಕೆ ಸಮಸ್ತ ಸಮಾಜವೇ ಹೆಮ್ಮೆಯಿಂದ ಚಪ್ಪಾಳೆಯಾಗಿದೆ. ಇಂದು ಶ್ರೀನಿವಾಸ ಶೆಟ್ಟರನ್ನು ಗೌರವದಲ್ಲಿ ಅಭಿನಂದಿಸಿದೆ. ಶಾಲು, ಹಾರ, ಸನ್ಮಾನ ಎನ್ನುವುದೇಲ್ಲವನ್ನೂ ಒಲ್ಲದ ಶೆಟ್ಟರಿಗೆ ನಾವು ಹೇಳಿದ್ದು ಕೊರಗ ಸಮುದಾಯಕ್ಕೆ ನೀವು ಸಲ್ಲಿಸುವ ಕಾರ್ಯಕ್ಕೆ ನಾವು ನಿಮ್ಮನ್ನ ಗೌರವಿಸುವ ಧನ್ಯತಾಭಾವ ಇದು ಎಂದಾಗ ಪ್ರೀತಿಯಿಂದ ಸ್ವೀಕರಿಸಿದರು.
ಬರಹ -ವಸಂತ್ ಗಿಳಿಯಾರ್
















































































































