ಪುತ್ತೂರಿನ ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶು ಮಂದಿರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ನಡೆಯುವ 28 ನೇ ವರ್ಷದ ‘ಶ್ರೀ ಕೃಷ್ಣ ಲೋಕ’ ಕಾರ್ಯಕ್ರಮವು ಸೆಪ್ಟೆಂಬರ್ 4ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ನಡೆಯಲಿದೆ ಎಂದು ಕೃಷ್ಣಲೋಕ ಸಮಿತಿ ಅಧ್ಯಕ್ಷ ಡಾ| ಹರ್ಷಕುಮಾರ್ ರೈ ಮಾಡಾವು ಅವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ವಿವೇಕಾನಂದ ಶಿಶು ಮಂದಿರದಲ್ಲಿ ಕಳೆದ 27 ವರ್ಷಗಳಿಂದ ಶ್ರೀ ಕೃಷ್ಣಲೋಕ ಕಾರ್ಯಕ್ರಮವು ಸಾವಿರಾರು ಮಂದಿ ರಾಧೆ, ಕೃಷ್ಣ, ಯಶೋದೆ ವೇಷಧಾರಿ ಮಕ್ಕಳೊಂದಿಗೆ ವಿಶೇಷ ಶೋಭಾಯಾತ್ರೆಯ ಮೂಲಕ ಅದ್ದೂರಿಯಾಗಿ ನಡೆಯುತ್ತಾ ಬಂದಿರುತ್ತದೆ ಎಂದರು. ವಿವೇಕಾನಂದ ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಜಗೋಪಾಲ್ ಭಟ್ ಅವರು ಮಾತನಾಡಿ, ವಿವೇಕಾನಂದ ಶಿಶುಮಂದಿರದ 38 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಮಕ್ಕಳಿಗೆ ಬಾಲ್ಯದಲ್ಲಿ ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ವೈಜ್ಞಾನಿಕ ಶಿಕ್ಷಣವನ್ನು ಕೊಡುತ್ತಾ ಸಾವಿರಾರು ಮಕ್ಕಳನ್ನು ಈ ದೆಸೆಯಲ್ಲಿ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಸಾವಿರಾರು ಮಕ್ಕಳ ಮೂಲಕ ಸಾವಿರಾರು ಮನೆಗಳಿಗೂ ಕೂಡಾ ವಿವೇಕಾನಂದ ಶಿಶುಮಂದಿರದ ಶಿಕ್ಷಣವನ್ನು ತಲುಪಿಸಿದ ಒಂದು ಸಂತೃಪ್ತಿ ನಮ್ಮೆಲ್ಲಾ ಕಾರ್ಯಕರ್ತ ಬಂಧುಗಳಿಗೆ ಇದೆ ಎಂದರು.




ಬೆಳಿಗ್ಗೆ 9 ಗಂಟೆಗೆ ಶಿಶು ಮಂದಿರದ ಆವರಣದಲ್ಲಿ ಕೃಷ್ಣ, ರಾಧೆ, ಯಶೋದೆಯರ ನೋಂದಾವಣೆಯು ಪ್ರಾರಂಭಗೊಳ್ಳಲಿದೆ. ನಂತರ ಮಕ್ಕಳಿಂದ ಪ್ರಾರ್ಥನೆ, ಭಜನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ತೊಟ್ಟಿಲ ಸಂಭ್ರಮದಲ್ಲಿ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ನೀಡಲಾಗುವುದು. ನಂತರ ಮಗುವನ್ನು ತೊಟ್ಟಿಲಲ್ಲಿ ತೂಗುವ ಸಂಭ್ರಮವು ನಡೆಯಲಿದೆ. ಮಾತೆಯರು ಬಾಲಕೃಷ್ಣನಿಗೆ ಬೆಣ್ಣೆ ತಿನ್ನಿಸಿ, ಜೋಗುಳ ಹಾಡಲಿದ್ದಾರೆ. ಬಳಿಕ ಶೋಭಾಯಾತ್ರೆ ನಡೆಯಲಿದೆ ಎಂದು ಹರ್ಷಕುಮಾರ್ ರೈ ಮಾಡವು ಹೇಳಿದರು. ಶೋಭಾ ಯಾತ್ರೆ ಸಂಪನ್ನಗೊಂಡ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಆಡಳಿತ ನಿರ್ದೇಶಕ ಡಾ. ಚೇತನ್ ಪ್ರಕಾಶ್ ಕಜೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪೂರ್ಣಾತ್ಮರಾಮ ಈಶ್ವರ ಮಂಗಲ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹರ್ಷ ಕುಮಾರ್ ರೈ ಮಾಡಾವು ಅವರು ತಿಳಿಸಿದರು.
ಪ್ರತಿವರ್ಷದಂತೆ ಶಿಶುಮಂದಿರದ ಆವರಣದಿಂದ ರಾಧೆ ಕೃಷ್ಣ ಭವ್ಯ ಶೋಭಾ ಯಾತ್ರೆಯು ಬೆಳಿಗ್ಗೆ 9:30 ಗಂಟೆಗೆ ಪ್ರಾರಂಭಗೊಳ್ಳಲಿದೆ. ಶೋಭಾಯಾತ್ರೆಯ ದಾರಿಯನ್ನು ಈ ಬಾರಿ ಬದಲಾವಣೆ ಮಾಡಿದ್ದು, ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದ ಬಳಿಯಿಂದ ಹೊರಟ ಶೋಭಾಯಾತ್ರೆಯು ಚೇತನ ಆಸ್ಪತ್ರೆ ರಸ್ತೆಯ ಮೂಲಕ ಸಾಗಿ ಕೋರ್ಟ್ ರಸ್ತೆಯಾಗಿ ಮುಖ್ಯ ರಸ್ತೆಯ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಳ್ಳಲಿದೆ. ರಾಧೆ- ಕೃಷ್ಣರ ವೇಷಧಾರಿ 1500 ಪುಟಾಣಿಗಳು ಶೋಭಾ ಯಾತ್ರೆಯಲ್ಲಿ ಮೆರಗು ತರಲಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ರೈ ಸಣಂಗಳ ಅವರು ಹೇಳಿದರು. ಪ್ರತಿಕಾಗೋಷ್ಠಿಯಲ್ಲಿ ವಿವೇಕಾನಂದ ಶಿಶುಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಯಸ್, ಶ್ರೀ ಕೃಷ್ಣಲೋಕ ಸಮಿತಿ ಜೊತೆ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.















































































































