ಕಟಪಾಡಿ ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಟಪಾಡಿ ಎಸ್.ವಿ.ಎಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮಾರಂಭ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಂಟ ಸಮಾಜವು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಸಮಾಜವಾಗಿದೆ. ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದಿರುವ ಬಂಟ ಸಮಾಜವು ಒಗ್ಗಟ್ಟಿನ ಮೂಲಕ ತನ್ನ ಶಕ್ತಿಯನ್ನು ಮತ್ತಷ್ಟು ಪ್ರದರ್ಶಿಸಬೇಕಾಗಿದೆ ಎಂದರು. ಸಂಘದ ನೂತನ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಕುದ್ರಾಡಿ ಹಾಗೂ ಅವರ ತಂಡದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಕಟಪಾಡಿ ಬಂಟರ ಸಂಘದ ಪೂರ್ವಾಧ್ಯಕ್ಷ ದಯಾನಂದ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಜಯರಾಜ್ ಹೆಗ್ಡೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ವಿ ಶೆಟ್ಟಿ, ಇನ್ನಂಜೆ ಉಂಡಾರು ಮೂಡುಮನೆಯ ಚಂದ್ರಶೇಖರ ಶೆಟ್ಟಿ, ಕಟಪಾಡಿ ಬಂಟರ ಸಂಘದ ಗೌರವಾಧ್ಯಕ್ಷ ದಯಾನಂದ ವಿ ಶೆಟ್ಟಿ, ಸ್ಥಾಪಕಾಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ, ಮಾಜಿ ಅಧ್ಯಕ್ಷ ವೈ ರಂಜನ್ ಹೆಗ್ಡೆ, ಏಣಗುಡ್ಡೆ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವೈ ಭರತ್ ಹೆಗ್ಡೆ, ಹಿರಿಯ ವೈದ್ಯ ಡಾ. ಎ. ರವೀಂದ್ರನಾಥ ಶೆಟ್ಟಿ ಹಾಗೂ ಬಂಟರ ಸಂಘದ ಗೌರವ ಸಲಹೆಗಾರ ಡಾ. ಉದಯ ಕುಮಾರ್ ಶೆಟ್ಟಿ, ಮಹಿಳಾ ಸಂಚಾಲಕಿ ಪ್ರಭಾವತಿ ವಿ ಶೆಟ್ಟಿ, ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ಪೊಸಾರು, ಸುಭಾಷ್ ಬಲ್ಲಾಳ್ ಕಟಪಾಡಿಬೀಡು ಉಪಸ್ಥಿತರಿದ್ದರು.







ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತಲಾ ರೂ 10000 ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತಲಾ ರೂ 5000 ದಂತೆ ಒಟ್ಟು ಮೂರು ಲಕ್ಷ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು. ದಯಾನಂದ ಆರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉಮೇಶ್ ಶೆಟ್ಟಿ ಕುರ್ಕಾಲು ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.















































































































