ಬ್ರಹ್ಮಾವರ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಉಡುಪಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಐಕ್ಸ್ ಜಿ.ಎಮ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಗೌತಮ್ ಶೆಟ್ಟಿ ದೀಪ ಬೆಳಗಿ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಆಟಗಾರ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಆದರೆ ಎಲ್ಲರೂ ಅತ್ಯುತ್ತಮ ವ್ಯಕ್ತಿಯಾಗಬಹುದು. ಇಂದು ಕ್ರೀಡೆಯೂ ಒಂದು ವೃತ್ತಿಯಾಗಿದೆ. ಯಾವಾಗಲೂ ಮೈದಾನದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ. ವ್ಯಾಯಾಮ, ಉತ್ತಮ ಆಹಾರದೊಂದಿಗೆ ದೈಹಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದರು. ಸಮಾರೋಪ ಸಮಾರಂಭದ ಅತಿಥಿ ಉಡುಪಿ ಐಕ್ಸಮ್ ಸ್ಪೋರ್ಟ್ಸ್ ಸೈನ್ಸ್ ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಕರಂಬಳ್ಳಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕ್ರೀಡೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಕಲಿಸುವುದರ ಜೊತೆಗೆ ಅನುಭವಗಳಿಂದ ಕಲಿಯಲು, ಸದಾ ಪ್ರಯತ್ನಿಸಲು ಸಹಾಯ ಮಾಡುತ್ತದೆ. ನಾವು ಕಠಿಣ ಪರಿಶ್ರಮ ಶಿಸ್ತಿನೊಂದಿಗೆ ಸ್ವ ಅಭಿವೃದ್ಧಿಯ ಕುರಿತು ಚಿಂತಿಸಬೇಕೆಂದರು.




ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಕ್ರೀಡೆಯು ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸುವುದರ ಜೊತೆಗೆ ಶಿಕ್ಷಣದಾಚೆಗೂ ಜೀವನಕ್ಕೆ ಅಗತ್ಯವಾದ ಅನೇಕ ಅಮೂಲ್ಯ ಪಾಠಗಳನ್ನು ಕಲಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ವಿಜೇತರಿಗೆ ಶುಭ ಹಾರೈಸಿ, ಜಿಲ್ಲೆಯ ನಾನಾ ಭಾಗಗಳಿಂದ ವಿದ್ಯಾರ್ಥಿಗಳನ್ನು ಕಳುಹಿಸಿ ಸಹಕರಿಸಿದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಧನ್ಯವಾದ ಸಲ್ಲಿಸಿದರು. ಪಂದ್ಯಾಕೂಟದಲ್ಲಿ ಉಡುಪಿ ಜಿಲ್ಲೆಯ ೨೪ ಶಾಲೆಯ ೩೦೫ ಸ್ಪರ್ಧಿಗಳು ಭಾಗವಹಿಸಿದ್ದರು. ಕಿರಿಯ ಬಾಲಕರ ವಿಭಾಗದಲ್ಲಿ ಆನಂದತೀರ್ಥ ವಿದ್ಯಾಲಯ ಉಡುಪಿ, ಬಾಲಕಿಯರ ವಿಭಾಗದಲ್ಲಿ ಮಾಧವ ಕೃಪ ಸ್ಕೂಲ್ ಮಣಿಪಾಲ ಚಾಂಪಿಯನ್ ಶಿಪ್ ಪಡೆದುಕೊಂಡಿತು. ಹಿರಿಯ ಬಾಲಕರ ವಿಭಾಗದಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಕಾರ್ಕಳ, ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಚಾಂಪಿಯನ್ ಶಿಪ್ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಪರಿಣಿತ ತೀರ್ಪುಗಾರರು, ಶಾಲಾ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















































































































