ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್.ಎಸ್ ಕಿಲ್ಲೆಯವರ 125ನೇ ಜನ್ಮ ವರ್ಷ ಸಂಭ್ರಮದ ಅಂಗವಾಗಿ ರಾಷ್ಟ್ರದ 80ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶಭಕ್ತ ಎನ್.ಎಸ್ ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಕಿಲ್ಲೆ ಸಂಸ್ಮರಣೆ, ಮಾಜಿ ಸೈನಿಕರಿಗೆ ಗೌರವ ಸನ್ಮಾನ, ರಂಗಕಲಾ ಸನ್ಮಾನ ಕಾರ್ಯಕ್ರಮವು ಸಿರಿಕಡಮಜಲು ಕೃಷಿ ಕ್ಷೇತ್ರ ಕಿಲ್ಲೆ ನಿವಾಸದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಮೇಶ್ ರೈ ಬೋಳೋಡಿಯವರಿಗೆ ಸನ್ಮಾನ ನಡೆಯಿತು. ಸನ್ಮಾನಕ್ಕೆ ಉತ್ತರಿಸಿದ ರಮೇಶ್ ರೈ ಅವರು, ಈ ಪರಿಸರ ನಮಗೆ ಅತ್ಯಂತ ಹತ್ತಿರದ ಒಡನಾಟದ ಪರಿಸರವಾಗಿದೆ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದಾಗ ಇಲ್ಲಿನ ನನ್ನ ಒಡನಾಡಿಗಳ ಗೌರವ ದೊರೆತಿರುವುದು ಬಹಳ ಖುಷಿಯಾಗಿದೆ. ಕಿಲ್ಲೆಯವರ ಕುಟುಂಬಿಕರು, ಸಂಬಂಧಿಕರ ಜೊತೆ ಸೇರಲು ದೊರೆತಿರುವುದು ನನ್ನ ಭಾಗ್ಯ. ಈ ಸನ್ಮಾನ ನನಗೆ ತೃಪ್ತಿ ತಂದಿದೆ ಎಂದು ಹೇಳಿ ತಮ್ಮ ಅನುಭವ ಹಂಚಿಕೊಂಡರು.
ಕಿಲ್ಲೆಯವರ ಮೊಮ್ಮಗ ಎಲ್.ಐ.ಸಿ ಅಭಿವೃದ್ದಿ ಅಧಿಕಾರಿ ರಾಜೇಶ್ ಹೆಗ್ಡೆಯವರ ಪುತ್ರಿ ಭರತನಾಟ್ಯ ರಂಗಕಲಾ ಪ್ರವೀಣೆ ಕು. ರಾಶಿ ಆರ್. ಹೆಗ್ಡೆಯವರಿಗೆ ರಂಗಕಲಾ ಸನ್ಮಾನ ನಡೆಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ರಾಶಿ ಹೆಗ್ಡೆಯವರು, ಭರತನಾಟ್ಯ ಒಂದು ಭಾವ ರಾಗದ ಸಂಗಮ. ಆಧುನಿಕ ಜಗತ್ತಿನಲ್ಲಿ ಎಷ್ಟು ಮುಂದುವರಿದರೂ ಸಂಸ್ಕೃತಿ ಪರಂಪರೆಯನ್ನು ಮರೆಯಲು ಸಾಧ್ಯವಿಲ್ಲ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು. ಭಾರತೀಯ ಭೂಸೇನೆಯ ಮಾಜಿ ಸೈನಿಕ ಸಂಪಿಲ ರಾಮಯ್ಯ ಶೆಟ್ಟಿಯವರನ್ನು ಈ ಸಂಧರ್ಭ ಗೌರವಿಸಲಾಯಿತು. ವೀಣಾ ಎಸ್ ಶೆಟ್ಟಿ ಪ್ರಾರ್ಥಿಸಿ, ಅರುಣಾ ಶಶಿಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೀತಿ ಎಸ್ ರೈ ಕಡಮಜಲು ಸತ್ಕರಿಸಿದರು.


















































































































