ನಮ್ಮ ಹಿರಿಯರು ಆರೋಗ್ಯಯುತ ಆಹಾರ ಸೇವಿಸುವ ಮೂಲಕ ಅನಾರೋಗ್ಯದಿಂದ ದೂರವಿದ್ದರು. ನಾವೀಗ ಔಷಧಗಳೇ ತಿನಿಸುಗಳಾದ ಕಾಲದಲ್ಲಿದ್ದು, ತಿನಿಸುಗಳೇ ಮದ್ದಾಗುವ ಕಾಲ ಕೂಡಿ ಬರಬೇಕಾಗಿದೆ. ಪ್ರಕೃತಿ ಜನ್ಯ ಆಹಾರಗಳ ಮೂಲಕ ಆಟಿ ತಿಂಗಳು ದೇಹಕ್ಕೆ ಶಕ್ತಿ ತುಂಬುವ ಕಾಲವಾಗಿದೆ. ನಮಗೆ ನಮ್ಮ ತುಳು ಭಾಷೆ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಭಿಮಾನವಿರಬೇಕು ಮತ್ತು ತುಳುನಾಡಿನ ಗತವೈಭವ ಸಾರುವ ಕುರುಹುಗಳ ಬಗೆಗೆ ಬೆಳಕು ಚೆಲ್ಲುವ ಕೆಲಸಗಳಾಗಬೇಕು ಎಂದು ಕಟೀಲು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಹೇಳಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ವತಿಯಿಂದ ಕುಂತಳನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ಜರಗಿದ ಆಟಿಡೂoಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿ, ಸುಮಾರು ಒಂದು ಸಾವಿರ ಸದಸ್ಯರನ್ನೊಳಗೊಂಡಿರುವ ಸಂಘವು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವಾ ನಿರತವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮನೆ ಕಟ್ಟಲು ಸಹಾಯ, ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ, ವೃತ್ತಿ ಮತ್ತು ಔದ್ಯೋಗಿಕ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ನಾಲ್ಕು ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ಆಯೋಜಿಸಿ, ಸುಮಾರು 3,700 ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಿದೆ ಅಕ್ಟೋಬರ್ 9 ರಂದು ಐದನೇ ಉದ್ಯೋಗ ಮೇಳ ನಡೆಯಲಿದೆ ಎಂದರು. ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್. ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.






ಕರಾವಳಿ ಅಭಿವೃದ್ಧಿ ಪ್ರಾಧಿಕಾಲದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ನ್ಯಾಯವಾದಿ ಎಂ. ಶಾಂತರಾಮ ಶೆಟ್ಟಿ, ಉಡುಪಿ ಸಾಫಲ್ಯ ಟ್ರಸ್ಟ್ ನ ಪ್ರವರ್ತಕಿ ನಿರುಪಮಾ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ಗ್ರಾಮೀಣ ಬಂಟರ ಮಾಜಿ ಅಧ್ಯಕ್ಷರುಗಳಾದ ಅಲೆವೂರು ಶ್ರೀಧರ್ ಶೆಟ್ಟಿ ಹಾಗೂ ಹೇಮಂತ್ ಶೆಟ್ಟಿ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ರಂಜಿನಿ ಹೆಗ್ಡೆ ಬೆಳ್ಳೆ ಗೌರವ ಉಪಸ್ಥಿತರಿದ್ದರು. ಸಂಘದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸುಮಾರು 30 ವಿವಿಧ ಆಟಿ ತಿಂಗಳ ವಿಶೇಷ ಸಾಂಪ್ರದಾಯಿಕ ಖಾದ್ಯಗಳು, ಆಟಿದ ಊಟದ ಕೂಟ ಸಹಭೋಜನ ಜರಗಿತು. ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ ಕೊರಂಗ್ರಪಾಡಿ ಸ್ವಾಗತಿಸಿದರು. ಸಂಘದ ಕಾರ್ಯಾಧ್ಯಕ್ಷ ಪದ್ಮನಾಭ ಹೆಗ್ಡೆ ವಂದಿಸಿದರು. ನಿಟ್ಟೆ ವಿವಿಯ ಪ್ರೊ. ಡಾ| ಸುಧೀರ್ ರಾಜ್ ನಿರೂಪಿಸಿದರು.






















































































































