ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2026ನೇ ಸಾಲಿನ ಸಂಸ್ಮರಣಾ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ದಿ. ಡಾ| ಮಧುಕರ ಶೆಟ್ಟಿ ಐಪಿಎಸ್ ಸಂಸ್ಮರಣಾ ಪ್ರಶಸ್ತಿಗೆ ಕರ್ನಾಟಕ ಸರಕಾರ ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮನೋಜ್ ರಾಜನ್, ದಿ. ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ದಿ. ಬಸ್ರೂರು ಅಪ್ಪಣ್ಣ ಹೆಗ್ಡೆ ಸಂಸ್ಮರಣಾ ಪ್ರಶಸ್ತಿಗೆ ಉದ್ಯಮಿ ಮತ್ತು ಸಮಾಜ ಸೇವಕ ಎಸ್.ಎಸ್ ಹೆಗ್ಡೆ, ದಿ. ಗಿಳಿಯಾರು ಕುಶಲ ಹೆಗ್ಡೆ ಶತಮಾನೋತ್ಸವ ಪ್ರಶಸ್ತಿಗೆ ಹಿರಿಯ ವಕೀಲರಾದ ಎ.ಬಿ ಶೆಟ್ಟಿ ಹಾಗೂ ದಿ. ಎಂ ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣಾ ಪ್ರಗತಿಪರ ಕೃಷಿಕ ಪ್ರಶಸ್ತಿಗೆ ಅರುಣ್ ಕುಮಾರ್ ಶೆಟ್ಟಿ ಗುಡ್ಡಮ್ಮಾಡಿ ಅವರನ್ನು ಆಯ್ಕೆ ಮಾಡಲಾಗಿದೆ.



ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರು ಮತ್ತು ಹಿರಿಯರನ್ನು ಗುರುತಿಸಿ ಗೌರವಿಸುವುದು ನಮ್ಮ ಸಂಘದ ಸಾಮಾಜಿಕ ಜವಾಬ್ದಾರಿಯಾಗಿದೆ. ದಶಮ ಸಂಭ್ರಮವನ್ನೂ ಒಳಗೊಂಡಂತೆ ಕಳೆದ 12 ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚಿನ ಸಾಧಕ ಸಾಧಕಿಯರನ್ನು ವಿವಿಧ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ. ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಹಿರಿಯರ ಸಾಧನೆ ಮತ್ತು ಕೊಡುಗೆಗಳು ಇಂದಿನ ಯುವ ತಲೆಮಾರಿಗೆ ಸ್ಫೂರ್ತಿಯ ಸೆಲೆಯಾಗಬೇಕು ಎಂಬುವುದು ಸಂಘದ ಆಶಯ ಎಂದು ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಆಗಸ್ಟ್ 9 ರಂದು ಭಾನುವಾರ ಪೂರ್ವಾಹ್ನ 9:30ಕ್ಕೆ ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂಬುದಾಗಿ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















































































































