
ಮಂಗಳೂರಿನ ಪುರಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ (ರಿ) ಬಹಿರಂಗ ಅಧಿವೇಶನವು ಸಮಾಜದ ಹಿರಿಯರು, ಸಾಧಕರು ಮತ್ತು ಯುವ ಪೀಳಿಗೆಯ ಸಮಾಗಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಮತ್ತು ರಾಜೇಶ್ ರೈ ಕಲ್ಲಂಗಳ ಅವರು ದೀಪ ಬೆಳಗಿಸಿ ಹಾಗೂ ಕಳಸದಲ್ಲಿದ್ದ ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಸವಣೂರು ಅವರು, 118 ವರ್ಷಗಳ ಇತಿಹಾಸವಿರುವ ಈ ಸಂಘದೊಂದಿಗೆ ತಮಗೆ ವಿದ್ಯಾರ್ಥಿ ದೆಸೆಯಿಂದಲೇ ಇರುವ 40 ವರ್ಷಗಳ ಸುದೀರ್ಘ ಒಡನಾಟವನ್ನು ಸ್ಮರಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದರೂ, ಯುಪಿಎಸ್ಸಿ ಮತ್ತು ಕೆಪಿಎಸ್ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಯಾದಗಿರಿಯಂತಹ ಜಿಲ್ಲೆಗಳು ಎಸ್ಎಸ್ಎಲ್ಸಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಯುಪಿಎಸ್ಸಿಯಲ್ಲಿ ಹೆಚ್ಚು ಸಾಧನೆ ಮಾಡುತ್ತಿವೆ ಎಂದು ಉದಾಹರಿಸಿದ ಅವರು, ಬಂಟರ ಸಂಘವು ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಇಂತಹ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ ನೀಡುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.


ಮತ್ತೊಬ್ಬ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರು ಮಾತನಾಡಿ, ಸಂಸ್ಕೃತಿ ನಾಶವಾದರೆ ದೇಶವೇ ವಿಭಜನೆಗೊಳ್ಳಬಹುದು. ಆದ್ದರಿಂದ ತುಳು ಭಾಷೆ ಮತ್ತು ದೈವಾರಾಧನೆಯಂತಹ ನಮ್ಮ ಮೂಲ ಪರಂಪರೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ತುಳು ಭಾಷೆಯನ್ನು ಮಾತನಾಡುತ್ತಾ ಅದರ ಬೆಳವಣಿಗೆಗೆ ಶ್ರಮಿಸಬೇಕು ಹಾಗೂ ದೈವಗಳ ಕೋಲ ಮತ್ತು ಇತರ ಆಚರಣೆಗಳಿಗೆ ಮಕ್ಕಳನ್ನು ಕಡ್ಡಾಯವಾಗಿ ಕರೆದೊಯ್ಯಬೇಕು ಎಂದರು. ಬಂಟ ಸಮುದಾಯದವರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ. ಆದರೆ, ಇಷ್ಟೊಂದು ಶೈಕ್ಷಣಿಕ ಸೌಲಭ್ಯಗಳಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಸಮುದಾಯದವರ ಸಂಖ್ಯೆ ಕಡಿಮೆಯಾಗಿರುವುದು ಆತಂಕಕಾರಿ. ನಮ್ಮ ಯುವ ಜನರಲ್ಲಿ ಈ ಬಗ್ಗೆ ಆಸಕ್ತಿ ಇಲ್ಲವೇ ಎಂಬ ಸಂಶಯ ಕಾಡುತ್ತಿದೆ. ಆದ್ದರಿಂದ ನಮ್ಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಬಡವರಿಗೆ ಉನ್ನತ ಶಿಕ್ಷಣ ಒದಗಿಸಲು ಸರ್ಕಾರಿ ಮೀಸಲಾತಿಯ ಜೊತೆಗೆ ಸಮುದಾಯದ ಉಳ್ಳವರ ಸಹಕಾರವೂ ಅಗತ್ಯವಿದೆ ಎಂದರು.
ಸಂಘದ ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತ ಕೋರಿ, ಜನರು ಹಳ್ಳಿಯಲ್ಲಿದ್ದು ಯಾವುದೇ ಸಂಪರ್ಕ ಸಾಧನ ಇರಲಿಲ್ಲ. ಆಧುನಿಕ ಶಿಕ್ಷಣದ ಅಗತ್ಯ ಮನಗಂಡ ಬಂಟರು ಎತ್ತಿನ ಗಾಡಿಯ ಮೂಲಕ ಸಂಚರಿಸಿ, ದೋಣಿಯ ಮೂಲಕ ನದಿಗಳನ್ನು ದಾಟಿ ಕಷ್ಟಪಟ್ಟು ನಗರದಲ್ಲಿ ಆಧುನಿಕ ಶಿಕ್ಷಣ ಪಡೆದರು. ಮಕ್ಕಳು ನಗರದಲ್ಲಿ ಉಳಿದು ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ 1908ರಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಹಾಸ್ಟೆಲ್ ಮಾಡಿದರು. ಬೇರೆ ಬೇರೆ ಸ್ಥಳಗಳಲ್ಲಿ ಆಸ್ತಿ ಖರೀದಿಸಿ ಹಾಸ್ಟೆಲ್ ನಿರ್ಮಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರು. ಅಂತಹ ಹಿರಿಯರನ್ನು ಸ್ಮರಿಸುತ್ತೇವೆ ಎಂದರು. ನಮ್ಮ ಮಾತೃ ಸಂಘದಿಂದ ನಮ್ಮ ಸಮುದಾಯ ಮಾತ್ರವಲ್ಲದೇ ಬೇರೆ ಸಮಾಜದವರಿಗೂ ನೆರವು ನೀಡುತ್ತೇವೆ ಎಂದರು. ಇಂದು ಮಕ್ಕಳು ವಿದ್ಯೆ ಕಲಿತು ವಿದೇಶಕ್ಕೆ ಹೋಗುತ್ತಿದ್ದಾರೆ. ಮನೆಗಳು ಪಾಳು ಬಿದ್ದಿವೆ. ದೈವದೇವರುಗಳ ಆಚರಣೆಯ ಬಗ್ಗೆ ಮಕ್ಕಳಿಗೆ ಅರಿವಿನ ಕೊರತೆ ಇದೆ. ಅದಕ್ಕಾಗಿ ನಮ್ಮತನವನ್ನು ಬಿಡಬಾರದೆಂಬ ಉದ್ದೇಶದಿಂದ ಹೊಸ ಜನಾಂಗದವರಿಗೆ ನಮ್ಮ ಆಚಾರ ವಿಚಾರ ಸಂಸ್ಕೃತಿ ಪರಿಚಯ ಮಾಡಬೇಕೆಂಬ ಉದ್ದೇಶದಿಂದ ‘ಬಾಂಧವ್ಯ’ ಎಂಬ ಕಾರ್ಯಕ್ರಮ ರೂಪಿಸಿದ್ದು ಇದರಲ್ಲಿ ಕೂಡು ಕುಟುಂಬಗಳು ಒಟ್ಟು ಸೇರುವಂತೆ ಮಾಡಲಾಗುವುದು ಎಂದು ಘೋಷಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಅವರು, ವಿವಿಧ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಧಕರನ್ನು ಸನ್ಮಾನಿಸುವುದು ಸ್ತುತ್ಯಾರ್ಹ, ಆದರೆ ಅವರ ಸಾಧನೆಯ ಹಿಂದಿರುವ ನಿಜವಾದ ಪರಿಶ್ರಮಿಗಳನ್ನೂ ಸಮಾಜ ಗುರುತಿಸಿ ಗೌರವಿಸಬೇಕು ಎಂದರು. ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಾ. ಕೊಡ್ಮಾಣ್ ನಾಗಪ್ಪ ಆಳ್ವ ಮತ್ತು ಶ್ರೀಮತಿ ಕಲ್ಯಾಣಿ ಆಳ್ವ ಸ್ಮರಣಾರ್ಥ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ನೀಡಿ ಗೌರವಿಸಲಾಯಿತು. ಈ ಸಾಲಿನಲ್ಲಿ ಡಾ. ಸತೀಶ್ ಭಂಡಾರಿ (ವೈದ್ಯಕೀಯ), ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್ (ಶೈಕ್ಷಣಿಕ), ಕೆ. ಉಷಾ ಪಿ. ರೈ (ಸಾಹಿತ್ಯ), ಗುರುಕಿರಣ್ ಶೆಟ್ಟಿ (ಸಂಗೀತ), ವಿದುಷಿ ನಯನ ವಿ. ರೈ ಕುದ್ಕಾಡಿ (ನೃತ್ಯ), ಲೆ. ಕರ್ನಲ್ ಅಜಿತ್ ಕುಮಾರ್ ಶೆಟ್ಟಿ (ದೇಶ ಸೇವೆ), ಪ್ರಶಾಂತ್ ರೈ ಪುತ್ತೂರು ಮತ್ತು ಚಿಂತನ್ ಎಸ್. ಶೆಟ್ಟಿ (ಕ್ರೀಡೆ) ಅವರು ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ವಿವೇಕ್ ಶೆಟ್ಟಿ ಬೊಳ್ಯಗುತ್ತು ಮತ್ತು ಕರುಣಾಕರ ಶೆಟ್ಟಿ ಮದ್ಯಗುತ್ತು, ಸಾಂಸ್ಕೃತಿಕ ರಂಗದಲ್ಲಿ ಪ್ರಕಾಶ್ ಭಂಡಾರಿ, ಧಾರ್ಮಿಕ ಕ್ಷೇತ್ರದಲ್ಲಿ ಕೆ.ಕೆ ಶೆಟ್ಟಿ ಕುತ್ತಿಕಾರ್ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಆತಿಥ್ಯ ಉದ್ಯಮದಲ್ಲಿ ವೇಣುಗೋಪಾಲ್ ಎಲ್. ಶೆಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಮುಗ್ರೋಡಿ ಸುಧಾಕರ್ ಶೆಟ್ಟಿ, ಸಂಶೋಧನಾ ಕ್ಷೇತ್ರದಲ್ಲಿ ಡಾ. ನವೀನ್ ಚಂದ್ರ ಶೆಟ್ಟಿ ಮತ್ತು ದೈವಾರಾಧನೆ ಕ್ಷೇತ್ರದಲ್ಲಿ ಡಾ| ಅಶೋಕ್ ಆಳ್ವ ಅವರು ಗೌರವಕ್ಕೆ ಪಾತ್ರರಾದರು. ಸಮಾಜ ಸೇವೆಯಲ್ಲಿ ಕೆಂಚನೂರು ಸೋಮಶೇಖರ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ದಿನೇಶ್ ಆಳ್ವ, ಕೃಷಿ ಕ್ಷೇತ್ರದಲ್ಲಿ ಮುರ ಸದಾಶಿವ ಶೆಟ್ಟಿ ಎಕ್ಕಾರು, ಕೃಷಿ ಅಭಿವೃದ್ಧಿಗಾಗಿ ಡಾ. ಸರಿತಾ ಹೆಗ್ಡೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ರವೀಂದ್ರನಾಥ ಮಾರ್ಲ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಕಲೆ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪಿ. ಕಿಶನ್ ಹೆಗ್ಡೆ ಅವರಿಗೆ ವಿಶೇಷ ಗೌರವ ಸಮರ್ಪಿಸಲಾಯಿತು.
ಗೌರವ ಉಪಸ್ಥಿತರಿದ್ದ ಕೊಡ್ಮಾಣ್ ಮೋಹನದೇವ ಆಳ್ವ ಹಾಗೂ ಡಾ. ಎಂ.ಕೆ ಶೈಲಜಾ ಆಳ್ವ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ.ಎಂ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ ಅವರು ಸಮಾಜದ ಹಿನ್ನೆಲೆ ವಿವರಿಸಿ ಕಾರ್ಯಕ್ರಮ ನಿರೂಪಿಸಿದರೆ, ದಿವ್ಯ ವಿ ಶೆಟ್ಟಿ ಅವರು ಪ್ರಾರ್ಥನೆ ಸಲ್ಲಿಸಿದರು.

























































































































