
ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಮುಂಬಯಿ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆ ಕಲಾ ಸೌರಭ ತನ್ನ 33ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮದ ಸಾಂಸ್ಕೃತಿಕ ಕಲೋತ್ಸವ ‘ಸಂಸ್ಕಾರ-2026’ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ಮಾರ್ಚ್ 27ರಂದು ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಏರ್ಪಡಿಸಿತ್ತು. ಶಿರ್ಡಿ ಶ್ರೀ ಸಾಯಿಬಾಬಾ ಸಂಸ್ಥಾನಮ್ ಆಶ್ರಯದಲ್ಲಿ ರಾಮನವಮಿ ಜಾತ್ರಾ ನಿಮಿತ್ತ ಕನ್ನಡ ತುಳು ಸೇರಿದಂತೆ ಬಹು ಭಾಷಾ ವೈವಿಧ್ಯಮಯ ಸಂಗೀತ ನೃತ್ಯ ಸಂಯೋಜನೆಯ ‘ಶ್ರೀ ಸಾಯಿ ರಾಮ ಸ್ತುತಿ ಗೀತ ಗಾನಾಮೃತ’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಜರಗಿತು. ಕಲಾ ಸೌರಭದ ನೂತನ ಪರಿಕಲ್ಪನೆಯ ಸಾಂಸ್ಕೃತಿಕ ವೈವಿಧ್ಯತೆಗಳ ಸರಣಿ ಕಾರ್ಯಕ್ರಮ ಸಂಸ್ಥೆಯ ಸಂಯೋಜಕ ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನಿರ್ದೇಶನದಲ್ಲಿ ವರ್ಷದ ಪ್ರಾರಂಭದಲ್ಲಿ ಚಾಲನೆ ಪಡೆದು ಮುಂಬಯಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಆಮಂತ್ರಿತ ಕಲಾವಿದರುಗಳಿಂದ ಬಹು ಭಾಷೀಯ ಭಕ್ತಿ ಭಾವ ಜಾನಪದ ಗೀತಾ ಸಂಗೀತ ನೃತ್ಯ ಕಲಾ ಪ್ರಕಾರಗಳು ಬಹಳ ಯಶಸ್ವಿಯಾಗಿ ನಡೆದು ಇದೀಗ ಬೇಡಿಕೆ ಮೇರೆಗೆ ಶಿರ್ಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ರಾಮ ನವಮಿ ಸಂದರ್ಭ ಮೂರು ದಿನಗಳ ಕಲೋತ್ಸವದ ಸಮಾರೋಪದ ದಿನ ‘ಸಂಸ್ಕಾರ-2026’ ರ ನಾಲ್ಕನೇ ಕಾರ್ಯಕ್ರಮವು ರಾಮ ಸ್ತುತಿಯ ಬಹುಭಾಷಾ ಶಾಸ್ತ್ರೀಯ ಜಾನಪದ ಯಕ್ಷಗಾನ ನಾಟ್ಯಗಳ ಸಂಗಮ ‘ಗೀತಾ ಗಾನಾಮೃತ’ ಸ್ವರೂಪದಲ್ಲಿ ಲಕ್ಷಾಂತರ ಸಾಯಿ ಭಕ್ತರನ್ನು ರಂಜಿಸಿತು.


ಸರಿ ಸುಮಾರು 50ಕ್ಕೂ ಹೆಚ್ಚು ಸಂಗೀತ, ನೃತ್ಯ ಕಲಾವಿದರು ಭಾಗವಹಿಸಿದ ಸಾಂಸ್ಕೃತಿಕ ಕಲೋತ್ಸವ ‘ಸಂಸ್ಕಾರ- 2026’ ಸರಣಿಯ ಈ ನಾಲ್ಕನೇ ಕಾರ್ಯಕ್ರಮವನ್ನು ಮುಂಬಯಿಯ ಖ್ಯಾತ ಉದ್ಯಮಿ, ಧಾರ್ಮಿಕ ನೇತಾರ, ಕಲಾ ಪೋಷಕ, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ಉದಯ್ ಶೆಟ್ಟಿ ಉದ್ಘಾಟಿಸಿದರು. ಮನ್ಮಾಡ್ ಕ್ಷೇತ್ರದ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೋಲೀಸ್ ಬಾಜಿರಾವ್ ಮಹಾಜನ್, ಪ್ರಿನ್ಸಿಪಾಲ್ ರಿಜಿಸ್ಟ್ರಾರ್ ಆಫ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ಮಹಾರಾಷ್ಟ್ರ ಸರ್ಕಾರದ ಸುರೇಶ್ ಜೋಶಿ, ಮುಂಬಯಿಯ ಖ್ಯಾತ ಹೋಟೆಲ್ ಉದ್ಯಮಿ ಸಾಯಿ ಭಜನ್ ಗಾಯಕ ವಿಶ್ವನಾಥ ಶೆಟ್ಟಿ, ಸಾಯಿ ಪ್ಯಾಲೇಸ್ ಹೋಟೆಲ್ ಶಿರ್ಡಿ ವಿಭಾಗದ ವ್ಯವಸ್ಥಾಪನಾ ಅಧಿಕಾರಿ ಶಶಿಧರ ಶೆಟ್ಟಿ, ಕನ್ನಡ ಕಲಾವಿದರ ಪರಿಷತ್ ಮಹಾರಾಷ್ಟ್ರ ಆಡಳಿತ ಸದಸ್ಯ ಕಾರ್ಯಕ್ರಮ ನಿರ್ವಾಹಕ ಲಯನ್ ಮುರಳೀಧರ ಹೆಗ್ಡೆ, ಅಮಿತಾ ಕಲಾ ಮಂದಿರ ನೃತ್ಯ ನಿರ್ದೇಶಕಿ ವಿದುಷಿ ಅಮಿತಾ ಜತ್ತಿನ್, ಸಂಗೀತ ಸಂಯೋಜಕಿ ಶೃದ್ಧಾ ದೇಸಾಯಿ, ಕಲಾ ಸೌರಭದ ರಂಗನಿರ್ವಾಹಕ ಜಗದೀಶ್ ಪೂಜಾರಿ ಪುಣೆ, ಹಿರಿಯ ಗಾಯಕ ಪ್ರಮೋದ್ ಕುಮಾರ್ ಹಾಗೂ ಶಿರ್ಡಿ ಸಾಯಿಬಾಬ ಸಂಸ್ಥಾನದ ಸಾಂಸ್ಕೃತಿಕ ವಿಭಾಗದ ಅಧಿಕಾರಿಗಳು, ಕಲಾ ಸೌರಭ ತಂಡದ ರೂವಾರಿ ಪದ್ಮನಾಭ ಸಸಿಹಿತ್ಲು ಜೊತೆ ಸೇರಿ ಪಂಚ ದೀಪಗಳನ್ನು ಪ್ರಜ್ವಲಿಸಿ ಶ್ರೀ ಸಾಯಿ ಪ್ರಾರ್ಥನೆಯೊಂದಿಗೆ ಸಾಯಿ ಪೂಜೆಗೈದರು. ಕಲಾ ಸೌರಭದ ಯುವ ಗಾಯಕಿ ಕು. ಸನ್ನಿಧಿ ಶೆಟ್ಟಿ ಗಣಪತಿ ಸ್ತುತಿಗೈದರು.
ಕಲಾಪೋಷಕ ಉದಯ್ ಶೆಟ್ಟಿಯವರು ಶುಭ ನುಡಿಯುತ್ತಾ, ‘ಕಲಾ ಸೌರಭ ತನ್ನ ಮೂವತ್ತಮೂರು ವರುಷದ ಸಾಂಸ್ಕೃತಿಕ ಸಾಧನೆಯಲ್ಲಿ ಅದೆಷ್ಟೋ ಸಂಗೀತ ನೃತ್ಯ ಕಲಾವಿದರುಗಳನ್ನು ಹುಟ್ಟು ಹಾಕಿ ವಿವಿಧ ವೇದಿಕೆಯಲ್ಲಿ ಅವಕಾಶ ನೀಡಿ ಬೆಳೆಸುತ್ತಾ ಬಂದಿರುವುದು ಕನ್ನಡಿಗರಾದ ನಮಗೆ ಅಭಿಮಾನ ತಂದಿದೆ. ಈ ಸಾಯಿ ನಗರಿಯಲ್ಲಿ ಮರಾಠಿ ಹಾಗೂ ಇತರ ಭಾಷಿಗರೊಂದಿಗೆ ಸೇರಿ ಕನ್ನಡ ತುಳು ಸಂಸ್ಕೃತಿಯ ಸಾರವನ್ನು ಬಿತ್ತರಿಸುವದನ್ನು ಕಂಡು ಬಹು ಸಂತಸವಾಗಿದೆ. ಮರಾಠಿಗರಿಗೆ ಕನ್ನಡ ಹಾಡು ಕಲಿಸಿ ಪ್ರಸ್ತುತ ಪಡಿಸುವುದು ಅಭಿನಂದನೀಯ. ಅದರಲ್ಲೂ ಇಂದು ಒಬ್ಬ ಕುರುಡ ಗಾಯಕ ಕನ್ನಡ ಭಜನೆಯನ್ನು ಪ್ರಸ್ತುತ ಪಡಿಸಿರುವುದು ಶ್ಲಾಘನೀಯ’ ಎಂದು ಶ್ಲಾಘಿಸಿದರು. ಅಲ್ಲದೇ ಅಂಧ ಗಾಯಕನಿಗೆ ನಗದು ಬಹುಮಾನವಿತ್ತು, ಸಾಯಿ ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಪುಷ್ಪಾಂಜಲಿ ನಾಟ್ಯ ಅಕಾಡೆಮಿ ಬೆಂಗಳೂರು ಅಮಿತಾ ಕಲಾ ಮಂದಿರ ಮುಂಬಯಿ, ನೃತ್ಯಾಂಕಿತ ಡಾನ್ಸ್ ಅಕಾಡೆಮಿ ಹಾಗೂ ಒಟ್ಟು ಸಂಘಟನೆಗೆ ಕಾರಣವಾದ ಮುಂಬಯಿ ಕಲಾ ಸೌರಭ ತಂಡಕ್ಕೆ ಶುಭ ಹಾರೈಸಿದರು.
ಕಲಾ ಸೌರಭವು ಕಳೆದ ಹಲವಾರು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಭಾರತೀಯ ಸಂಸ್ಕಾರ ಸಂಸ್ಕೃತಿಯೊಂದಿಗೆ ಕಲೆಯನ್ನು ಉಳಿಸುವ ಬೆಳೆಸುವ ಕಾಯಕದಲ್ಲಿ ತೊಡಗಿಕೊಂಡಿದ್ದು ಅದೆಷ್ಟೋ ಸಂಗೀತ ನೃತ್ಯ ಕಲಾವಿದರಿಗೆ ಬೇಕಾದ ಅವಕಾಶ ನೀಡಿ ವೇದಿಕೆಯನ್ನಿತ್ತು ಪ್ರೇರಕ ಸಂಸ್ಥೆಯಾಗಿ ಬೆಳೆದಿದೆ. ಅಶಕ್ತ ಕಲಾವಿದರಿಗೆ ಸಂದರ್ಭಾನುಸಾರ ಸಹಾಯಹಸ್ತ ನೀಡಿ ಸಹಕರಿಸುವುದನ್ನು ತಿಳಿದು ಸಂತೋಷವಾಗಿದೆ. ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಭಾಗ್ಯವೇ ಸರಿ’ ಎಂದು ಸಾಯಿ ಪ್ಯಾಲೇಸ್ ಗ್ರೂಪ್ ಹೋಟೆಲ್ ನ ಮುಖ್ಯ ಅಧಿಕಾರಿ ಶಶಿ ಶೆಟ್ಟಿಯವರು ಸಂತಸ ವ್ಯಕ್ತಪಡಿಸದರು. ಅತಿಥಿ ಪ್ರಮುಖರಾಗಿ ಶಿರ್ಡಿ ಶ್ರೀ ಸಾಯಿಬಾಬ ಸಂಸ್ಥಾನದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಅರ್ಜುನ್ ಫಟಂಗರೆ ಅವರು ಮಾತನಾಡಿ, ‘ರಾಮ ನವಮಿ ಸಾಂಸ್ಕೃತಿಕ ಉತ್ಸವದ ಸಮಾರೋಪ ಶುಭಾವಸರದಲ್ಲಿ ನಡೆದಿರುವ ಬಹುಭಾಷಾ ಸಂಗೀತ ನೃತ್ಯ ಕಾರ್ಯಕ್ರಮವನ್ನು ಸಾವಿರಾರು ಭಕ್ತರು ವೀಕ್ಷಿಸಿರುವುದಲ್ಲದೇ ಲಕ್ಷಕ್ಕೂ ಮಿಕ್ಕಿ ಸಾಯಿ ಭಕ್ತರು ಯುಟ್ಯೂಬ್ ಮತ್ತು ಶಿರ್ಡಿ ಸಾಯಿ ಚಾನೆಲ್ ಮೂಲಕ ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿರುವರು. ಈ ಸಂತೋಷವನ್ನು ಮಹಾನ್ ಕಲಾವಿದರೊಂದಿಗೆ ಹಂಚಿಕೊಳ್ಳಲೆಂದೇ ತಾನು ವೇದಿಕೆಗೆ ಬಂದಿರುವೆ’ ಎಂದರು. ನನ್ನ ಜತೆ ನಮ್ಮ ಶಿರ್ಡಿ ಸಾಯಿಬಾಬ ಸಂಸ್ಥಾನದ ಆಡಳಿತ ಮಂಡಳಿಯೂ ನೋಡಿ ಸಂತೃಪ್ತಿಗೊಂಡಿದೆ. ಭಾಗವಹಿಸಿದ ಪುಷ್ಪಾಂಜಲಿ ನಾಟ್ಯ ಅಕಾಡೆಮಿ ಬೆಂಗಳೂರು, ಅಮಿತಾ ಕಲಾ ಮಂದಿರ ಮುಂಬಯಿ ನೃತ್ಯಾಂಕಿತ ಡ್ಯಾನ್ಸ್ ಅಕಾಡೆಮಿ ಮುಂಬಯಿ ಮತ್ತು ಸಂಘಟನೆಗೆ ಕಾರಣರಾದ ಕಲಾ ಸೌರಭ ತಂಡವನ್ನು ಆದರಾಭಿಮಾನದಿಂದ ಸಂಸ್ಥಾನದ ಪರವಾಗಿ ಅಭಿನಂದಿಸುತ್ತೇನೆ ಎಂದವರು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ಸಂಸ್ಥೆಯ ರೂವಾರಿ ಪದ್ಮನಾಭ ಸಸಿಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಲಾಸೌರಭದ 33 ವರ್ಷಗಳ ಸಾಧನೆ ಹಾಗೂ ಶಿರ್ಡಿ ಸಾಯಿಬಾಬಾ ಸಂಸ್ಥಾನದ ಆಶ್ರಯ ಪಡೆದು ಸಾಯಿ ಸಾನಿಧ್ಯದ ಶ್ರೀ ಸಾಯಿಬಾಬಾ ಸಮಾಧಿ ಶತಾಬ್ದಿ ಸಭಾಂಗಣದಲ್ಲಿ ಜರಗುವ ಶ್ರೀ ರಾಮನವಮಿ ಸಂಭ್ರಮದಲ್ಲಿ ಭಾಗವಹಿಸುವುದರಿಂದ ಧನ್ಯತೆಯುಂಟಾಗಿದೆ’ ಎಂದು ನುಡಿದು ಕಲಾ ಸೌರಭಕ್ಕೆ ನೀಡಿದ ಸಂದರ್ಭಾವಕಾಶಕ್ಕಾಗಿ ಸಂಸ್ಥಾನದ ಆಡಳಿತ ಮಂಡಳಿಗೆ ಕೃತಜ್ಞತೆ ಅರ್ಪಿಸಿದರು. ಸಂಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಾಹಕರಾದ ಡಾ. ಸೋನಾಲಿ ಹರ್ದಸ್ ಅವರು ‘ಶ್ರೀ ಸಾಯಿ ರಾಮ ಸ್ತುತಿ ಸಾಂಸ್ಕೃತಿಕ ಕಲೋತ್ಸವ ಮತ್ತು ಶ್ರೀ ಸಾಯಿ ದರ್ಶನ’ದ ಕೂಲಂಕುಷ ವಿವರಣೆಯೊಂದಿಗೆ ಸಭಾಲಂಕೃತ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ನೃತ್ಯ ತಂಡದಿಂದ ವಿವಿಧ ಬಗೆಯ ನಾಟ್ಯ ಹಾಗೂ ಹಾಡುಗಾರರಿಂದ ಶ್ರೀ ಸಾಯಿ ರಾಮ ಸ್ತುತಿ ಗೀತಾ ಗಾನಾಮೃತ ನಡೆದು ಕಿಕ್ಕಿರಿದು ಸೇರಿದ ಭಕ್ತ ಸಮೂಹವನ್ನು ಮುದಗೊಳಿಸಿತು. ಕಲಾ ಸೌರಭದ ಈ ಕನ್ನಡ ತುಳು ಸಾಂಸ್ಕೃತಿಕ ಕಲರವ ಇತರ ಭಾಷೆಯೊಂದಿಗೆ ರಂಗೇರಿ ರಂಜಿಸಿತು. ಮುಂಬಯಿ ನಗರದ ಪ್ರಸಿದ್ದ ನೃತ್ಯ ನಿರ್ದೇಶಕಿ, ಸಂಘಟಕಿ ವಿದುಷಿ ಶ್ರೀಮತಿ ಅಮಿತಾ ಜತ್ತಿನ್ ನೇತೃತ್ವದ ಅಮಿತಾ ಕಲಾ ಮಂದಿರದ ಸದಸ್ಯರಿಂದ ಶ್ರೀ ಸಾಯಿ ಶ್ರೀ ರಾಮ ಸ್ತುತಿ ಗೀತೆಗಳಿಗೆ ಬಹು ಆಕರ್ಷಣೀಯ ಲಘು ಶಾಸ್ತ್ರೀಯ ಹಾಗೂ ಜಾನಪದ ನೃತ್ಯವು ಸಾದರಗೊಂಡು ಬಹುಜನ ಭಕ್ತರ ಮೆಚ್ಚುಗೆ ಪಡೆಯಿತು. ಪುಷ್ಪಾಂಜಲಿ ನಾಟ್ಯ ಅಕಾಡೆಮಿ ಬೆಂಗಳೂರು ಡಾ. ಅನುಪಮಾ ಭೂಷಣ್ ಶಿಷ್ಯ ವೃಂದದಿಂದ ವೈವಿಧ್ಯ ಪೂರ್ಣ ಸಾಯಿ ಭಕ್ತಿ ಸ್ತುತಿ ನೃತ್ಯ ರೂಪಕ ಶಾಸ್ತ್ರೀಯವಾಗಿ ಪ್ರದರ್ಶನಗೊಂಡಿತು. ನೃತ್ಯಾಂಕಿತ ಡಾನ್ಸ್ ಅಕಾಡೆಮಿ ಮುಂಬಯಿಯ ಯಕ್ಷ ನೃತ್ಯ ಕಲಾವಿದೆ ಕು. ಅಂಕಿತಾ ನಾಯಕ್ ಮತ್ತು ಸಮೂಹದಿಂದ ‘ಶ್ರೀರಾಮಾಂಜನೇಯಂ’ ಯಕ್ಷ ರೂಪಕ ಹಾಗೂ ನೃತ್ಯ ಗಾಯನವು ಅಸಂಖ್ಯಾತ ಸಾಯಿ ಭಕ್ತರ ಪ್ರಶಂಸೆಯನ್ನು ಪಡೆಯಿತು.
ಕಲಾ ಸೌರಭದ ಅನುಭವಿ ಸಂಗೀತ ಗಾಯನ ಕಲಾವಿದರಾದ ಡಾ. ಕೋಮಲ್, ಕು. ಸನ್ನಿಧಿ ಶೆಟ್ಟಿ, ಪ್ರದೀಪ್ ಸಿಂಗ್, ವಿಶ್ವನಾಥ ಶೆಟ್ಟಿ, ಪ್ರಮೋದ್ ಕಾಂಬ್ಳಿ, ಶೃದ್ಧಾ ದೇಸಾಯಿ ಮತ್ತು ಪದ್ಮನಾಭ ಸಸಿಹಿತ್ಲು ಅವರಿಂದ ಬಹು ಭಾಷೆಯ ಸಾಯಿ ಸ್ತುತಿ ಭಕ್ತಿ ರಸಮಂಜರಿ ಕಾರ್ಯಕ್ರಮದ ಅಂತ್ಯದ ವರೆಗೂ ಜರಗಿ ಭಕ್ತ ಸಮುದಾಯವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಶಾಸ್ತ್ರೀಯ ಜಾನಪದ ನೃತ್ಯ ಸಾದರ ಪಡಿಸಿದ ಅಮಿತ ಕಲಾ ಮಂದಿರದ ವಿದುಷಿ ಅಮಿತಾ ಜತ್ತಿನ್ ಮತ್ತು ಸದಸ್ಯರು, ಭರತ ನಾಟ್ಯದ ಪುಷ್ಪಾಂಜಲಿ ನಾಟ್ಯ ಅಕಾಡೆಮಿ ಬೆಂಗಳೂರು ತಂಡದ ವಿದ್ವಾನ್ ಕೋಲಾರ ರಮೇಶ್, ವಿದುಷಿ ಡಾ. ಅನುಪಮ ಬೆಂಗಳೂರು ಮತ್ತು ಬಳಗ ಸಾದರ ಪಡಿಸಿದ ಯಕ್ಷ ನಾಟ್ಯ, ನೃತ್ಯಾಂಕಿತ ಡಾನ್ಸ್ ಅಕಾಡೆಮಿಯ ಕು. ಅಂಕಿತಾ ನಾಯಕ್ ಮತ್ತು ಬಳಗದ ಎಲ್ಲಾ ಸದಸ್ಯರನ್ನು ಶ್ರೀ ಸಾಯಿಬಾಬಾ ಸಂಸ್ಥಾನಮ್ ಸಾಯಿ ಶಾಲು, ಫಲ ಮಂತ್ರಾಕ್ಷತೆ ನೀಡಿ ಗೌರವಿಸಿತು. ಅದೇ ರೀತಿ ಗಾಯನ ವಿಭಾಗದ ಪ್ರಮೋದ್ ಕಾಂಬ್ಳಿ, ಡಾ. ಕೋಮಲ್, ಸಾಯಿ ಭಜನಾ ಗಾಯಕ ವಿಶ್ವನಾಥ ಶೆಟ್ಟಿ, ಕು. ಸನ್ನಿಧಿ ಶೆಟ್ಟಿ, ಪ್ರದೀಪ್ ಸಿಂಗ್ ಶ್ರೀಮತಿ ಶೃದ್ಧಾ ದೇಸಾಯಿ ಸಂಗೀತಗಾರರಾದ ಸಂತೋಷ್, ಚಂದನ್, ಮನೀಶ್ರವರನ್ನು ಕಾರ್ಯಕ್ರಮ ನಿರ್ವಾಹಕರಾದ ಕಲಾ ಸೌರಭದ ಜಗದೀಶ್ ಪೂಜಾರಿ ಪುಣೆ, ಲ.ಮುರಳೀಧರ್ ಹೆಗ್ಡೆ ಮತ್ತು ತಾಂತ್ರಿಕ ಬಳಗದ ಸದಸ್ಯರು, ಶಿಸ್ತು ಬದ್ಧ ಸಂಘಟನೆಗೆ ಕಾರಣರಾದ ಕಲಾ ಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರನ್ನೂ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸಾಯಿ ಶಾಲು, ಫಲ ಪ್ರಸಾದ ಗೌರವದೊಂದಿಗೆ ಅಭಿನಂದಿಸಲಾಯಿತು. ಗೀತ ಗಾನಾಮೃತ ಸಂಗೀತೋತ್ಸವದ ಒಟ್ಟು ಕಾರ್ಯಕ್ರಮವನ್ನು ಶ್ರೀಮತಿ ಶ್ರದ್ದಾ ದೇಸಾಯಿ ಮತ್ತು ಪದ್ಮನಾಭ ಸಸಿಹಿತ್ಲು ನಿರ್ವಹಿಸಿದರು. ಕಲಾ ಸೌರಭದ ಗಾಯಕ ಪ್ರಮೋದ್ ಧನ್ಯವಾದ ಸಮರ್ಪಿಸಿದರು.

























































































































