


ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಿಂದ ಬೃಹತ್ ಹೊರೆ ಕಾಣಿಕೆ ನೀಡುವ ಸಂಕಲ್ಪ ಮಾಡಿದ್ದೇವೆ. ಅಮ್ಮನ ಸನ್ನಿಧಾನದಿಂದ 99 ವಾಹನಗಳ ಮೂಲಕ ಹೊರೆಕಾಣಿಕೆಯನ್ನು ಪಡುಬಿದ್ರಿ ಉಳ್ಳಾಯನ ಸನ್ನಿಧಾನಕ್ಕೆ ಸಮರ್ಪಿಸಬೇಕೆನ್ನುವುದು ನಮ್ಮೆಲ್ಲರ ಆಶಯ. ಈ ಹಿಂದೆ ಅಮ್ಮನ ಸನ್ನಿದಾನದಲ್ಲಿ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಡಾ| ಕೆ ಪ್ರಕಾಶ್ ಶೆಟ್ಟಿ ಮತ್ತು ಹೊರೆ ಕಾಣಿಕೆ ಸಮರ್ಪಣಾ ಸಮಿತಿಯ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಸೇವೆ ಸಲ್ಲಿಸಿದ್ದು, ಇದೀಗ ಪಡುಬಿದ್ರಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ನಾವೆಲ್ಲಾ ಅವರ ಜೊತೆಗೂಡಬೇಕಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಹೇಳಿದರು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ನಾನು ಶಾಸಕನಾಗಿರುವುದು ನನ್ನ ಭಾಗ್ಯ. ಕಾಪು ಹೊಸ ಮಾರಿಗುಡಿ ದೇವಸ್ಥಾನ, ನನ್ನೂರಿನ ಕಳತ್ತೂರು ಬ್ರಹ್ಮಬೈದರ್ಕಳ ಗರಡಿ, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಹೀಗೆ ಇನ್ನೂ ಅನೇಕ ದೇವಸ್ಥಾನ, ದೈವಸ್ಥಾನಗಳು ನನ್ನ ಅವಧಿಯಲ್ಲಿ ಜೀರ್ಣೋದ್ಧಾರಗೊಂಡು, ಲೋಕಾರ್ಪಣೆಯಾಗುತ್ತಿರುವುದು ಬಹಳಷ್ಟು ಸಂತೋಷವಾಗುತ್ತಿದೆ. ರಾಜಕೀಯ, ಜಾತಿ, ಧರ್ಮಗಳನ್ನ ಮೀರಿ ನಾವೆಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಒಂದಾಗಿ ಶ್ರಮಿಸಬೇಕಿದೆ, ಕಾಪುವಿನ ಜನತೆಯ ಸಹಕಾರದಿಂದ ಹೊರೆ ಕಾಣಿಕೆಯನ್ನು ಯಶಸ್ವಿಯಾಗಿಸೋಣ ಎಂದರು.
ಈ ಸಂದರ್ಭದಲ್ಲಿ ಆನೆಗುಂದಿ ಸಂಸ್ಥಾನದ ಉಪಾಧ್ಯಕ್ಷ ನಾಗರಾಜ್ ಆಚಾರ್ಯ, ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ ರವಿರಾಜ್ ಶೆಟ್ಟಿ ಪಂಜಿತ್ತೂರು ಗುತ್ತು, ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ್ ಎಸ್ ಶೆಟ್ಟಿ, ವಿಶ್ವಕರ್ಮ ಸಮಾಜದ ಮುಂದಾಳು ಗಣೇಶ್ ಆಚಾರ್ಯ, ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ತಂತ್ರಿ, ಎಲ್ಲೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯ ನಿರಂಜನ್ ಶೆಟ್ಟಿ, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರುಗಳಾದ ಪ್ರಕಾಶ್ ಶೆಟ್ಟಿ ಪಡುಹಿತ್ಲು ಮತ್ತು ಸುಕುಮಾರ್ ಶ್ರೀಯಾನ್, ಕಾಪು ಭಾಗದ ಹೊರೆಕಾಣಿಕೆ ಆಯೋಜಕರಾದ ಅರುಣ್ ಶೆಟ್ಟಿ ಪಾದೂರು ಹಾಗೂ ಶ್ರೀಕರ ಶೆಟ್ಟಿ ಕಲ್ಯ, ವ್ಯವಸ್ಥಾಪನ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಯೋಗೀಶ್ ವಿ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಗೀತಾಂಜಲಿ ಸುವರ್ಣ ಧನ್ಯವಾದಗೈದರು.

























































































































