
ದಾನ ಮತ್ತು ಧರ್ಮ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಿವಾಯ ಫೌಂಡೇಶನ್ ದಾನ ಮಾಡುವುದರ ಜೊತೆಗೆ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಿ ತಮ್ಮ ಧರ್ಮವನ್ನು ಕಾಪಾಡಿಕೊಂಡು ಬಂದಿವೆ. ನಿರ್ಗತಿಕರಿಗೆ, ಸಂಕಷ್ಟದಲ್ಲಿರುವವರಿಗೆ ಸಹಾಯ, ದಾನ ಮಾಡುವುದು ನಮ್ಮ ಧರ್ಮ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ಸಾತ್’ ‘ಸಬ್ ಕಾ ವಿಕಾಸ್’ ಎಂಬ ಯೋಚನೆಗೆ ಪೂರಕವಾಗಿ ಶಿವಾಯ ಫೌಂಡೇಶನ್ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದೆ ಎನ್ನಲು ತುಂಬಾ ಸಂತೋಷವಾಗುತ್ತದೆ. ಸೇವಾ ಮನೋಭಾವನೆಯುಳ್ಳ ಯುವ ತಂಡ ರಚನೆ ಮಾಡಿ ಶಿವಾಯ ಫೌಂಡೇಶನ್ ಬಡ ಜನರಿಗೆ, ಕಷ್ಟದಲ್ಲಿರುವವರಿಗೆ ವಿವಿಧ ರೀತಿಯಲ್ಲಿ ಸೇವೆಯನ್ನು ಮಾಡುತ್ತಿರುವುದು ಎಲ್ಲರಿಗೂ ಮಾದರಿ. ಮಾನವೀಯತೆಯಿಂದ ಶಿವಾಯ ಫೌಂಡೇಶನ್ ಮಾಡುತ್ತಿರುವ ದಾನ ಧರ್ಮದ ಕಾರ್ಯಕ್ಕೆ ನಾವೆಲ್ಲಾ ಜೊತೆಯಾಗೋಣ ಎಂದು ನವಿಮುಂಬಯಿ ಕಾರ್ಪೊರೇಟರ್ ಸುರೇಶ್ ಜಿ ಶೆಟ್ಟಿ ನುಡಿದರು. ಅವರು ಮಾರ್ಚ್ 15 ರಂದು ನವಿಮುಂಬಯಿ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ನಿರ್ಮಿತ ಶ್ಯಾಮ ಎನ್ ಶೆಟ್ಟಿ ಮತ್ತು ಶಾರದಾ ಎಸ್ ಶೆಟ್ಟಿ ವೇದಿಕೆಯಲ್ಲಿ ಜರಗಿದ ಶಿವಾಯ ಫೌಂಡೇಶನ್ ಮುಂಬಯಿ ಇದರ ಎಂಟನೇ ವಾರ್ಷಿಕೋತ್ಸವ, ‘ಶಿವಾಯ ಪ್ರೇರಣಾ’ ಪ್ರಶಸ್ತಿ ಮತ್ತು ಸಾಧಕರಿಗೆ ಸನ್ಮಾನ ಇದರ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.





ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿಯವರಿಗೆ ‘ಶಿವಾಯ ಪ್ರೇರಣಾ -2026’ ಪ್ರಶಸ್ತಿ ಪ್ರಧಾನಿಸಲಾಯಿತು. ಅಲ್ಲದೇ ಸಮಾಜ ಸೇವಕರಾದ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಬೊಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಪದ್ಮಶಾಲಿ ಸೇವಾ ಸಮಾಜ ಇದರ ಅಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು. ಅಲ್ಲದೇ ಶಿವಾಯ ಫೌಂಡೇಶನ್ ಸದಸ್ಯ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವೀನ್ ಪೂಜಾರಿ ಪಡು ಇನ್ನಾ ಹಾಗೂ ಇನ್ನೋರ್ವ ಸದಸ್ಯ ಛಾಯಾ ಚಿತ್ರಗಾರ ಮಹೇಶ್ ದೇವಾಡಿಗ ಇವರನ್ನಲ್ಲದೇ ಗಾನವೈಭವವನ್ನು ನೆರವೇರಿಸಿ ಕೊಟ್ಟ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ ಹಾಗೂ ತಂಡದವರನ್ನು ಗೌರವಿಸಲಾಯಿತು. ಸಾಕ್ಷ್ಯ ಚಿತ್ರದ ಮೂಲಕ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಲಾಯಿತು. ಗೌರವ ಅತಿಥಿ ಬೊಂಬೆ ಬಂಟ್ಸ್ ಅಸೋಸಿಯೇಷನ್ ಇದರ ಮಾಜಿ ಅಧ್ಯಕ್ಷ ಶ್ಯಾಮ ಎನ್ ಶೆಟ್ಟಿ ಮಾತನಾಡಿ, ಸಾಮಾಜಿಕವಾಗಿ ನಾನು ಸಕ್ರಿಯವಾಗಿ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಹಲವಾರು ಸಂಘ ಸಂಸ್ಥೆಗಳಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದೇನೆ. ಆದರೆ ಇಂದಿನ ವೇದಿಕೆಗೆ ನನ್ನ ಹಾಗೂ ಪತ್ನಿ ಶಾರದಾ ಶೆಟ್ಟಿ ಅವರ ಹೆಸರನ್ನು ಇಟ್ಟು ಗೌರವ ಸಲ್ಲಿಸಿದ್ದಕ್ಕೆ ಮನ ತುಂಬಿ ಬಂದಿದೆ. ಶಿವಾಯ ಫೌಂಡೇಶನ್ ಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಎಲ್ಲರ ಪ್ರೋತ್ಸಾಹ, ಸಹಾಯದೊಂದಿಗೆ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಈ ಯುವ ಸದಸ್ಯರನ್ನು ಒಳಗೊಂಡ ಶಿವಾಯ ಫೌಂಡೇಶನ್ ನಿರಂತರ ಮಾಡುತ್ತಿರಲಿ. ಸಮಾಜಪರ ಸೇವೆ ಮುಖೇನ ಈ ಸಂಸ್ಥೆ ವಿಶ್ವವಿಖ್ಯಾತಿಯನ್ನು ಪಡೆಯಲಿ ಎಂದರು.


ಬೊಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಐಕಳ ಕಿಶೋರ್ ಕೆ. ಶೆಟ್ಟಿ ಮಾತನಾಡಿ, ಸಮಾಜಕ್ಕೆ ಏನಾದರೂ ಕಿಂಚಿತ್ ಸೇವೆಯನ್ನು ಸಲ್ಲಿಸಬೇಕೆಂಬ ಸದುದ್ದೇಶದಿಂದ 11 ಮಂದಿ ಯುವ ಮನಸ್ಕರು ಸೇರಿ ಆರಂಭಿಸಿದ ಈ ಸಂಸ್ಥೆಯಲ್ಲಿ ಸದ್ಯ ನೂರಕ್ಕೂ ಮಿಕ್ಕಿ ಸದಸ್ಯರು ಜೊತೆಯಾಗಿದ್ದಾರೆ. ಈ ಶಿವಾಯ ಫೌಂಡೇಶನ್ ನಲ್ಲಿ ಸದಸ್ಯರ ಸಂಖ್ಯೆ ಅಲ್ಪವಾಗಿದೆ. ಆದರೆ ಇದ್ದ ಸದಸ್ಯರೆಲ್ಲರೂ ಒಳ್ಳೆಯ ಗುಣವಂತರು, ಸೇವಾ ಮನೋಭಾವನೆಯುಳ್ಳವರಾಗಿದ್ದಾರೆ. ನಿರ್ಗತಿಕರಿಗೆ, ಕಷ್ಟದಲ್ಲಿರುವವರಿಗೆ ಸೇವೆಯನ್ನು ಸಲ್ಲಿಸುವ ಆಸಕ್ತಿಯುಳ್ಳವರು ಈ ಶಿವಾಯ ಫೌಂಡೇಶನ್ನಿನ ಜೊತೆ ಸೇರಿ ಅದಕ್ಕೆ ಮತ್ತಷ್ಟು ಬಲ ಬರುವಂತೆ ಸಹಕರಿಸಬೇಕು. ದೊಡ್ಡ ದೊಡ್ಡ ಸಂಘ ಸಂಸ್ಥೆಗಳಿಗಿಂತ ಹೆಚ್ಚಿನ ಮಟ್ಟದ ಸಾಮಾಜಿಕ ಸೇವೆಯನ್ನು ಶಿವಾಯ ಫೌಂಡೇಶನ್ ಮಾಡುತ್ತಿರುವುದಕ್ಕೆ ತುಂಬಾ ಅಭಿಮಾನವಾಗುತ್ತದೆ. ಸಮಾಜಕ್ಕೆ ಒಳ್ಳೆಯ ಸೇವಾ ಕಾರ್ಯದ ಮೂಲಕ ಶಿವಾಯ ಫೌಂಡೇಶನ್ ಮತ್ತಷ್ಟು ಪ್ರಸಿದ್ಧಿಯನ್ನು ಪಡೆಯಲಿ ಎಂದರು. ನವಿಮುಂಬಯಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ ಶೆಟ್ಟಿ ಮಾತನಾಡಿ, ಶಿವಾಯ ಫೌಂಡೇಶನ್ ಮಾಡುತ್ತಿರುವ ವಿವಿಧ ರೀತಿಯ ಸೇವೆಗಳ ಬಗ್ಗೆ ತಿಳಿದು ತುಂಬಾ ಸಂತೋಷವಾಯಿತು. ಇವರು ಮಾಡುತ್ತಿರುವ ಸಮಾಜಪರ ಸೇವೆಗಳು ಎಲ್ಲರಿಗೂ ಸ್ಪೂರ್ತಿ. ನವಿಮುಂಬಯಿ ಹೋಟೆಲ್ ಅಸೋಸಿಯೇಷನ್ ಶಿವಾಯ ಫೌಂಡೇಶನ್ ಮಾಡುವ ಎಲ್ಲಾ ಸೇವಾ ಕಾರ್ಯಗಳಿಗೆ ಪ್ರೋತ್ಸಾಹವನ್ನು ನೀಡಲಿದೆ ಎಂದರು.



ತುಳು ಕೂಟ ಐರೋಲಿಯ ಗೌರವಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ ಮಾತನಾಡಿ, ಶಿವಾಯ ಫೌಂಡೇಶನ್ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಬಹಳ ವಿಶೇಷವಾದುದು. ನಾವು ಜೀವನದಲ್ಲಿ ಸಂತೋಷದಲ್ಲಿ ಇರಬೇಕಾದರೆ ಅದಕ್ಕೆ ಕಷ್ಟ ಸಮಸ್ಯೆಯಲ್ಲಿದ್ದವರಿಗೆ ಸಹಾಯವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಶಿವಾಯ ಫೌಂಡೇಶನ್ ಸದಸ್ಯರು ತನ್ನ ಕಷ್ಟ ಸಮಸ್ಯೆಗಳನ್ನು ಲೆಕ್ಕಿಸದೆ ಸಂಪಾದನೆಯ ಅಲ್ಪಾಂಶವನ್ನು ಕಷ್ಟದಲ್ಲಿರುವವರ, ಆರೋಗ್ಯ ಪೀಡಿತರ ಸಂತೋಷಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಸಮಾಜ ಸೇವೆ ಮಾಡುವವರಿಗೆ ಶಿವಾಯ ಫೌಂಡೇಶನ್ ಪ್ರೇರಣಾದಾಯಕ ಸಂಸ್ಥೆಯಾಗಿದೆ. ಸಮಾಜ ಪರ ಚಿಂತನೆಯೊಂದಿಗೆ ಒಳ್ಳೆಯ ಸಂಸ್ಕಾರ, ಮಾನವೀತೆಯೊಂದಿಗೆ ನಾವು ಬದುಕನ್ನು ಕಟ್ಟಿಕೊಳ್ಳೋಣ. ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸೋಣ. ಜಾತಿ ಭೇದ ಇಲ್ಲದೆ ಒಗ್ಗಟ್ಟಿನಿಂದ ಸಮಾಜಕ್ಕೆ ಸೇವೆಯನ್ನು ಸಲ್ಲಿಸೋಣ ಎಂದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಇದರ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಬಂಟರ ಸಂಘ ಮುಂಬಯಿ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮಾಳ, ಶಿವಾಯ ಫೌಂಡೇಶನ್ ನ ಗೌರವ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಪಂಜ, ಶಿವಾಯ ಫೌಂಡೇಶನ್ ನ ಉಪಾಧ್ಯಕ್ಷರಾದ ಮಧುಸೂಧನ್ ಶೆಟ್ಟಿ, ಗೌರವ ಸಲಹೆಗಾರರಾದ ತಾರನಾಥ ರೈ ಪುತ್ತೂರು, ಹರೀಶ್ ಕೋಟ್ಯಾನ್ ಪಡು ಇನ್ನ ಇವರೆಲ್ಲಾ ಉಪಸ್ಥಿತರಿದ್ದರು. ಶುಭ ಕೋಟೆ ಪ್ರಾರ್ಥನೆಗೈದರು. ಶಿವಾಯ ಫೌಂಡೇಶನ್ ನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿವಾಯ ಫೌಂಡೇಶನ್ ನ ವೈದ್ಯಕೀಯ ಸಲಹೆಗಾರ್ತಿ ಡಾ. ಸ್ವರ್ಣ ಶೆಟ್ಟಿ ಮತ್ತು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು. ಕೊನೆಗೆ ಕುಣಿತ ಭಜನೆ ಹಾಗೂ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶಿವಾಯ ಫೌಂಡೇಶನ್ ನ ಎಲ್ಲಾ ಸದಸ್ಯರು ಸಹಕರಿಸಿದರು.
ಚಿತ್ರ, ವರದಿ : ನವೀನ್ ಇನ್ನ


























































































































