ಮಾನವ ಸಂಘ ಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆ ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಲು ಸಂಘ, ಸಂಸ್ಥೆಗಳ ಪಾತ್ರ ಮಹತ್ವವಾಗಿದೆ ಎಂದು ಘಟಪ್ರಭಾ ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಹೇಳಿದರು. ಉಪ್ಪುಂದ ಜೆಸಿಐ ಘಟಕದ 20 ವರ್ಷಗಳ ಹೆಜ್ಜೆ ಗುರುತು ವಿಂಶತಿ ಮಹೋತ್ಸವ ಸಂಭ್ರಮದ ಸಮಾರಂಭ ಉದ್ಘಾಟಿಸಿ ಮಾತನಾಡಿಸಿದರು.
ಬದುಕಿನಲ್ಲಿ ಅವಕಾಶ ದೊರೆಯುವುದು ವಿರಳ. ಆದರೆ ದೊರೆತ ಅವಕಾಶ ಸಾರ್ಥಕ ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ಯುವಜನತೆ ಜವಾಬ್ದಾರಿ. ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಜೇಸಿ ಸಂಸ್ಥೆ ವ್ಯಕ್ತಿತ್ವ ಬೆಳೆಸುವುದರ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಿದೆ ಈ ನೆಲೆಯಲ್ಲಿ ಜೇಸಿ ಸಂಸ್ಥೆ ಯುವ ಸಮುದಾಯದ ಸಂಘಟನಾ ಪ್ರಯತ್ನ ಶ್ಲಾಘನೀಯ ಎಂದರು.
ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತಿ ಹೊಂದಿದ ಸ್ಥಳೀಯ ಯೋಧ ಹೊಳೆಕಡಿಮನೆ ವೆಂಕಟೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಹಿಂದಿನ 19 ಪೂರ್ವಾಧ್ಯಕ್ಷರ ಸೇವೆ ಗುರುತಿಸಿ ಗೌರವಿಸಲಾಯಿತು. ಜೆಸಿಐ ವಲಯಾಧ್ಯಕ್ಷ ಗಿರೀಶ ಎಸ್.ಪಿ., ವಲಯ ವಿಘನೇಶ್ ಪ್ರಸಾದ್, ಮುಂಬೈ ಉದ್ಯಮಿ ಜನಾರ್ದನ ದೇವಾಡಿಗ, ಸ್ಥಳೀಯ ಉದ್ಯಮಿಗಳಾದ ಯು.ಎ.ಮಂಜು ದೇವಾಡಿಗ, ಹೊಸಾಡು ಕೃಷ್ಣ ದೇವಾಡಿಗ ಬೈಂದೂರು, ಜೇಸಿರೇಟ್ ಅಧ್ಯಕ್ಷೆ ಸುಮನಾ ಎಂ, ಜೆಜೆಸಿ ಅಧಕ್ಷೆ ಸಂಜನಾ ಉಪ್ಪುಂದ, ನಿಕಟಪೂರ್ವಾಧ್ಯಕ್ಷ ಪ್ರದೀಪ್ ಶೆಟ್ಟಿ ಕರಿಕಟ್ಟೆ ಉಪಸ್ಥಿತರಿದ್ದರು.
ಜೆಸಿಐ ಸ್ಥಾಪಕಾಧ್ಯಕ್ಷ ಎನ್.ದಿವಾಕರ ಶೆಟ್ಟಿ ಪ್ರಾಸ್ತಾವಿಸಿ, ಕಾರ್ಯದರ್ಶಿ ನರಸಿಂದ ದೇವಾಡಿಗ ವಂದಿಸಿದರು. ಕಲಾಸಂಗಮ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಶಿವದೂತ ಗುಳಿಗ’ ನಾಟಕ ಪ್ರದರ್ಶನಗೊಂಡಿತು.