ಬಾಂಬೆ ಬಂಟ್ಸ್ ಅಸೋಷಿಯೇಶನ್ನಿನ ಮಹಿಳಾ ವಿಭಾಗದ ವತಿಯಿಂದ “ನಾರಿ ಉತ್ಸವ” ಕಾರ್ಯಕ್ರಮವು ಪ್ರತಿಭಾವಂತ ಮಹಿಳೆಯರಿಂದ ಡ್ಯಾನ್ಸ್, ಕಿರು ರೂಪಕ ಹಾಗೂ ಅನೇಕ ವೈವಿದ್ಯಮಯ ಕಾರ್ಯಕ್ರಮಗಳು ಮಾರ್ಚ್ 9 ರಂದು ಶನಿವಾರ ಜುಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಿಎ ಸುರೇಂದ್ರ ಕೆ ಶೆಟ್ಟಿ ಅವರು ಮಾತನಾಡುತ್ತಾ ನಮಗೆ ಜನ್ಮ ನೀಡಿದ ತಾಯಿ, ಜನ್ಮ ತೆತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎನ್ನಲಾಗುತ್ತಿದೆ. ಮಹಿಳೆಯನ್ನು ಗೌರವ, ಪ್ರೀತಿ, ವಾತ್ಸಲ್ಯದಿಂದ ಕಾಣುವ ಅಂತಹ ಸಂಸ್ಥೆ ಮತ್ತು ಮನೆ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಇಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ ಎಲ್ಲಾ ಮೂವರು ಮಹಿಳಾ ಶಕ್ತಿಗಳು ನಮ್ಮ ಸಂಸ್ಥೆಗೆ ವಿಶೇಷ ಶೋಭೆಯನ್ನು ತಂದಿದ್ದಾರೆ. ಆರಂಭದಿಂದಲೇ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ತಾಯಿಯನ್ನು ಗೌರವಿಸುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ನಮ್ಮ ಅಸೋಸಿಯೇಷನ್ ಗೆ ಮಹಿಳಾ ವಿಭಾಗದ ಕೊಡುಗೆ ಅಪಾರ. ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಶಕ್ತಿಯುತವಾಗಿರುವ ಸಂಘವು ಉನ್ನತ ಮಟ್ಟಕ್ಕೇರುವುದರಲ್ಲಿ ಸಂದೇಹವಿಲ್ಲ. ನಮ್ಮ ಸಂಘಟನೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮೆಲ್ಲರ ಸಹಕಾರ ಈ ಸಂಸ್ಥೆಗೆ ಇರಲಿ, ಸ್ತ್ರೀ ಕುಲವನ್ನು ಗೌರವಿಸುವ ಕ್ಷೇತ್ರವೆಲ್ಲವೂ ಅಭಿವೃದ್ಧಿಯ ಪಥದತ್ತ ಸಾಗುತ್ತದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಮಾತನಾಡುತ್ತಾ, ನಾರಿ ಉತ್ಸವದಲ್ಲಿ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮನ್ನು ನೋಡಲು ಆನಂದವಾಗುತ್ತಿದೆ. ಇದೇ ರೀತಿ ನಾರಿಯರು ಉತ್ಸವವನ್ನು ಮಾಡುತ್ತಲೇ ಇರಬೇಕು. ನಾರಿಯರ ಪೂಜೆ ನಡೆಯುವಲ್ಲಿ ದೇವರು ನೆಲೆಯಾಗುತ್ತಾರಂತೆ. ಆದುದರಿಂದ ನಾರಿಯರಿಗೆ ತಕ್ಕ ಸ್ಥಾನಮಾನ ಸಿಗಬೇಕು ಅಂತಹ ಮನೆಯೂ ವ್ಯವಸ್ಥಿತವಾಗಿ ನಡೆಯಲು ಸಾಧ್ಯ. ಹೆಣ್ಣು ಮಕ್ಕಳು ವಿದ್ಯಾವಂತರಾದಲ್ಲಿ ಪರಿವಾರವೇ ವಿದ್ಯಾವಂತರಾಗುತ್ತಾರೆ. ಮಹಿಳೆ ಪುರುಷರನ್ನು ಮೀರಿ ನಡೆಯಬಾರದು. ಮಹಿಳೆಯರಷ್ಟೇ ಪುರುಷರೂ ಪ್ರಮುಖರು ಎಂದರು.
ಗೌರವ ಅತಿಥಿ ರೋನಕ್ ಕಿಚನ್ ಇಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕಿ ಶೋಭಾ ಶಂಕರ್ ಶೆಟ್ಟಿ ಮಹಿಳಾ ದಿನಾಚರಣೆ ಬಗ್ಗೆ ಮಾತನಾಡುತ್ತಾ, ಶತಮಾನದ ಹಿಂದೆ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಆ ಸಮಯದಲ್ಲಿ ಕ್ರಾಂತಿಕಾರಿ ಮಹಿಳೆಯರು ಬೀದಿಗಿಳಿದು ಹಕ್ಕಿಗಾಗಿ ಚಳವಳಿ ನಡೆಸಿದರು. ಅದು ಮುಂದುವರಿದು ೧೯೭೫ ರಿಂದ ಮಹಿಳಾ ದಿನಾಚರಣೆ ಆರಂಭಗೊಂಡಿತು. ಈ ದಿನದಂದು ಸಮಾಜದ ದುರ್ಬಲ ನಾರಿಯರ ಪರಿಸ್ಥಿತಿಯನ್ನು ಸುಧಾರಿಸುವ ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿದೆ. ಇಂದು ಬಾಂಬೆ ಬಂಟ್ಸ್ ಅಸೋಷಿಯೇಶನ್ ಮೂವರು ಸಾಧಕ ಮಹಿಳೆಯರಿಗೆ ಅವಕಾಶ ನೀಡಿದೆ. ಜನವರಿ ೨೬ ರಂದು ದೆಹಲಿಯ ಪರೇಡ್ ನಲ್ಲಿ ನಾರಿಯರಿಗೆ ಅವಕಾಶ ನೀಡಿದ್ದು ನಾರಿ ಶಕ್ತಿ ಪ್ರಭಲವಾಗುತ್ತಿದೆ. ಮಹಿಳೆಯರ ಸಾಧನೆ ಬಗ್ಗೆ ಉದಾಹರಣೆ ಸಹಿತ ತಿಳಿಸುತ್ತಾ ಛಲವಿದ್ದಲ್ಲಿ ಸಾಧನೆ ಸಾಧ್ಯ ಎಂಬುದನ್ನು ಮಹಿಳೆಯರು ತೋರಿಸಿ ಕೊಟ್ಟಿದ್ದಾರೆ ಎಂದರು.
ಉದ್ಯಮಿ ಸಮಾಜ ಸೇವಕಿ ಶಾಲಿನಿ ಸತೀಶ್ ಶೆಟ್ಟಿ ಮಾತನಾಡುತ್ತಾ, ನಾರಿಯರಿಗೆ ಗೌರವ ಇದ್ದಲ್ಲಿ ದೇವರ ಅನುಗ್ರಹ ಸಾಧ್ಯ. ಮಹಿಳೆ ಜೀವನದಲ್ಲಿ ಮಗಳಾಗಿ, ಸೊಸೆಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಅತ್ತೆಯಾಗಿ ಹಲವಾರು ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಕುಟುಂಬಕ್ಕೆ ಬರುವ ಎಲ್ಲಾ ಕಷ್ಟವನ್ನು ಆಕೆ ಎದುರಿಸಬಲ್ಲಳು. ಮಹಿಳೆಯ ಹೊರನೋಟ ಮುಖ್ಯವಲ್ಲ. ಒಂದು ಮನೆಯನ್ನು ಬೆಳೆಗಿಸುವ ಆಕೆಯ ಅಂತರಾತ್ಮದ ಸೌಂದರ್ಯಕ್ಕೆ ಮಹತ್ವವನ್ನು ನೀಡಬೇಕು ಎಂದು ಪುರುಷರಿಗೆ ಕಿವಿಮಾತನ್ನು ಹೇಳಿದರು. ಅಸೋಸಿಯೇಷನ್ ಉಪಾಧ್ಯಕ್ಷ ಅಡ್ವಕೇಟ್ ಡಿ. ಕೆ. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪುರುಷರಿಗೆ ಮಹಿಳೆಯರಿಂದ ಕಲಿಯಬೇಕಾದ ಹಲವು ವಿಷಯಗಳಿವೆ. ಅವರಿಗೆ ಮನೆಯನ್ನು ಜೋಡಿಸಲು ಹಾಗೂ ಬೇರ್ಪಡಿಸಲು ಸಾಧ್ಯವಿದೆ. ಪುರುಷರು ಅದಕ್ಕೆ ಅವಕಾಶ ನೀಡದೆ ಮಹಿಳೆಯರಿಗೆ ಸೂಕ್ತ ಗೌರವವನ್ನು ನೀಡಬೇಕಾಗಿದೆ. ಈಗ ಕಾಲ ಬದಲಾಗಿದ್ದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿದ್ದು ಅನೇಕ ಬದಲಾವಣೆಯನ್ನು ನಾವು ಕಾಣಬಹುದು ಎಂದರು.
ಅಸೋಸಿಯೇಷನ್ ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ ಮಾತನಾಡುತ್ತಾ, ನಾರಿ ಉತ್ಸವವನ್ನು ಉತ್ತಮವಾಗಿ ಆಯೋಜಿಸಲಾಗಿದೆ. ಬಂಟರ ಸಮಾಜದಲ್ಲಿ ಮೊದಲಿಂದಲೇ ಮಹಿಳೆಯರಿಗೆ ಪ್ರಾಮುಖ್ಯತೆ ಇತ್ತು. ಆದುದರಿಂದ ಬಂಟ ಸಮಾಜದಲ್ಲಿ ಹುಟ್ಟಿದ ಮಹಿಳೆಯರು ಭಾಗ್ಯವಂತರು. ಉತ್ತರ ಭಾರತದಲ್ಲಿ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಈಗ ಸರಕಾರವೂ ಮಹಿಳೆಯರಿಗೆ ಮೀಸಲಾತಿಯನ್ನು ನೀಡುತ್ತಿದ್ದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ ಎಂದರು. ಈ ಸಂದರ್ಭದಲ್ಲಿ ಕೃಷ್ನಿ ಮುರಳಿ ಶೆಟ್ಟಿ, ಹರಿಣಿ ಎಚ್. ಶೆಟ್ಟಿ, ವಸಂತಿ ಶೆಟ್ಟಿ, ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಾಂಬೆ ಬಂಟ್ಸ್ ಅಸೋಷಿಯೇಶನ್ನಿನ ಉಪಾಧ್ಯಕ್ಷ ಅಡ್ವಕೇಟ್ ಡಿ. ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ, ಐಕಳ ಕಿಶೋರ್ ಕೆ ಶೆಟ್ಟಿ, ಜೊತೆ ಕೋಶಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶಾಂತ ಎನ್. ಶೆಟ್ಟಿ, ಕಾರ್ಯದರ್ಶಿ ಸಹಾನಿ ವಿ. ಶೆಟ್ಟಿ, ಕೋಶಾಧಿಕಾರಿ ಉಷಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಲಲಿತ ಬಿ ಶೆಟ್ಟಿ, ಜೊತೆ ಕೋಶಾಧಿಕಾರಿ ಮಾಯಾ ಎಸ್ ಆಳ್ವ ಉಪಸ್ಥರಿದ್ದರು. ಶುಭ ಶೆಟ್ಟಿ ಪ್ರಾರ್ಥನೆ ಮಾಡಿದರು. ಪತ್ರಕರ್ತ ದಯಾಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಮತ್ತು ನಂತರ ಮಹಿಳೆಯರಿಂದ ವಿಭಿನ್ನ ನೃತ್ಯ ಕಾರ್ಯಕ್ರಮಗಳು, ಕಿರು ನಾಟಕ ಪ್ರೇಕ್ಷಕರನ್ನು ಮನರಂಜಿಸಿತು.