ಕಡಲು ಅಲೆಗಳ ಅಬ್ಬರದ ಹಿಮ್ಮೆಳದ ತೆಂಗಿನ ಮರಗಳ ಸಾಲು ಸಾಲು, ಭತ್ತದ ಪೈರಿನಿಂದ ನಳ ನಳಿಸುವ ಗದ್ದೆ , ಪಶ್ಚಿಮ ಘಟ್ಟದ ಗುಡ್ಡ ಕಾಡುಗಳಿಂದ ಆವೃತವಾದ ಹಸಿರು ಸಿರಿಯ ಕಡಲು ನದಿಗಳ ಸುಂದರ ಸಂಗಮದ ಕುಂದಾಪುರದ ಆಸುಪಾಸಿನ ಊರುಗಳ ಮನೆಯಲ್ಲಿ ಶ್ರಾವಣ ತಿಂಗಳಲ್ಲಿ ಹೊಸ್ತಿಲು ಪೂಜಿಸುವ ವಿಶೇಷ ಸಂಪ್ರದಾಯದೊಂದಿಗೆ ಹೊಸ್ಲಜ್ಜಿ ಓಡಿಸುವ ಜನಪದ ಹಿನ್ನಲೆಯ ವಿಶಿಷ್ಟ ಆಚರಣೆಯೊಂದು ತನ್ನ ಅಸ್ತಿತ್ವ ಕಳೆದುಕೊಳ್ಳದೆ ಇಂದಿಗೂ ಸರಳ ಶೈಲಿಯಲ್ಲಿ ಆಚರಣೆಯಲ್ಲಿದೆ.
ಶ್ರಾವಣ ಸಂಕ್ರಮಣದಿಂದ ತಿಂಗಳಿಡಿ ಮನೆಯಲ್ಲಿ ಹೊಸ್ತಿಲು ಪೂಜೆ ಮಾಡಿ ಅಜ್ಜಿಯನ್ನು ಆಹ್ವಾನಿಸಲಾಗುತ್ತದೆ. ಹೊಸ್ತಿಲಿಗೆ ಸೇಡಿ ಬರೆದು ಅಂದರೆ ರಂಗೋಲಿ ಹಾಕಿ ಸೋಣೆ ಹೂ ಹಾಗೂ ಅಜ್ಜಿ ಹೂ ಒಳ ಮುಖವಾಗಿರಿಸಿ, ಹಲಸಿನ ಎಲೆಯಲ್ಲಿ ಅರಶಿನ, ಶ್ರೀ ಗಂಧ ತೇಯ್ದುದನ್ನು ಹೊಸ್ತಿಲಿಗೆ ಇಟ್ಟು, ಹೊಸ್ತಿಲಿಗೆ ನಮಿಸಿ ದೀಪ ದೂಪ ಹಾಕಿ ಅಜ್ಜಿಯನ್ನು ಮನೆ ಒಳಗೆ ಬರ ಮಾಡಿಕೊಳ್ಳವುದು ವಾಡಿಕೆ. ಅಜ್ಜಿಯೇ ಚಿನ್ನದ ಬಟ್ಟಲನ್ನು ಬೆಳ್ಳಿಯ ಕೋಲಿನಲ್ಲಿ ಬಾರಿಸುತ್ತಾ ಗಂಟೆ ನಿನಾದದೊಂದಿಗೆ ಬಾ.. ಎಂದು ಅಜ್ಜಿಯನ್ನು ಮನೆ ಒಳಗೆ ಬರ ಮಾಡಿಕೋಳ್ಳುತಾರೆ. ಪ್ರತಿ ದಿನ ಅಜ್ಜಿಯನ್ನು ಹೊಸ್ತಿಲು ಪೂಜೆಯೊಂದಿಗೆ ಪೂಜಿಸಲಾಗುತ್ತದೆ. ಹೀಗೆ ಮನೆಗೆ ಬಂದ ಅಜ್ಜಿಯನ್ನು ಶಾಶ್ವತವಾಗಿ ಇರಿಸಿಕೊಳ್ಳುವಂತಿಲ್ಲ. ಅವಳನ್ನು ಕಳುಹಿಸಬೇಕು. ಅಜ್ಜಿ ಓಡಿಸುವ ದಿನ ಅಜ್ಜಿಯ ಪಾತ್ರವನ್ನು ಒಬ್ಬಳು ಹುಡುಗಿ ಮಾಡುತ್ತಾಳೆ. ಆದರೆ ಹೆಣ್ಣೆ ಮಾಡಬೇಕೆಂದಿಲ್ಲ. ಗಂಡು ಮಕ್ಕಳು ಮಾಡಬಹುದು ಇದಕ್ಕೆ ತನ್ನದೇ ಆದ ಚೌಕಟ್ಟಿದೆ ಕ್ರಮಗಳಿವೆ ಹಾಗೆ ಜಾತಿಯಿಂದ ಜಾತಿಗೆ ಊರಿಂದ ಊರಿಗೆ ಈ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ಅಜ್ಜಿ ಓಡಿಸುವುದು ಮಾತ್ರ ರಾತ್ರಿ. ಎಂದಿನಂತೆ ದಿನದಲ್ಲಿ ಹೊಸ್ತಿಲು ಪೂಜೆ ಮಾಡಿ ಆ ದಿನ ರಾತ್ರಿ ಪುನಃ ಹೊಸ್ತಿಲು ಪೂಜೆ ಮಾಡಿ ಹೊಸ್ತಿಲಿಗೆ ದೋಸೆ , ಮೀನಿನ ಸಾರು, ಬೆಲ್ಲ, ತೆಂಗಿನ ಕಾಯಿ, ಕಬ್ಬು ಹಾಗೂ ಕೊಚ್ಚಲು ಅಕ್ಕಿಯನ್ನು ದಪ್ಪ ಕಡೆದು ಸಣ್ಣ ಸಣ್ಣ ಉಂಡೆ ಕಟ್ಟಿ ಎಣ್ಣೆಯಲ್ಲಿ ಕಾಯಿಸಿ ಮಾಡಿದ ತಿನಿಸು ಉಂಡ್ಲಕಾಯಿಯನ್ನು ಬಾಳೆ ಎಲೆಯಲ್ಲಿ ಅಜ್ಜಿಗೆ ಮಿಸಲು ಇಡುತ್ತಾರೆ. ನಂತರ ಅಜ್ಜಿಗೆ ಪ್ರಾರ್ಥನೆ ಸಲ್ಲಿಸಬೇಕು. “ನಿನಗೆ ಇದ್ದು ಇಲ್ಲದೆಯೂ ಉದ್ದಿನ ದೋಸೆಯ ಅಟ್ಟಿ ಇಟ್ಟು ಮೀನು ಸಾರು ಮಾಡಿ, ಸಿಹಿಕಡಬು, ತೆಂಗು, ಬೆಲ್ಲ ಇಟ್ಟಿದ್ದೇವೆ. ನೀನು ಇಲ್ಲಿಂದ ನಿರ್ಗಮಿಸುವಾಗ ನಿನ್ನ ಕೈಯಲ್ಲಿ ಇದ್ದ ಚಿನ್ನದ ಬಟ್ಟಲು ಬೆಳ್ಳಿ ಕೋಲನ್ನು ಇಟ್ಟು ಎಲ್ಲಾ ತಿಂಡಿ ತಿನಿಸು ಕೊಂಡು ಹೋಗು ಅಜ್ಜಿ” ಎಂದು ಅವಳನ್ನು ನರಿ ಕಬ್ಬಿನ ಕೋಲು ಹಿಡಿದು ಅಜ್ಜಿ ಓಡ್.. ಅಜ್ಜಿ ಓಡ್ ಎಂದು ಓಡಿಸುತ್ತಾರೆ. ಅದರಲ್ಲಿ ಕೆಲವರು ಅಜ್ಜಿ ಓಡ್ತ್ , ಅಜ್ಜಿ ಓಡ್ತ್ ಅನ್ನುತ್ತಾ ಹೊಸ್ತಿಲ ಮೇಲೆ ಇರಿಸಿದ ದೋಸೆ ಎಳೆದುಕೊಳ್ಳುತ್ತಾರೆ.
ಕನ್ಯಾ ಸಂಕ್ರಮಣದ ಮೊದಲೇ ಹೊಸ್ಲಜ್ಜಿ ಓಡಿಸಬೇಕು. ಕೆಲವೆಡೆ ಗಣೇಶ ಚತುರ್ಥಿಗಿಂತ ಮೊದಲು ಅಜ್ಜಿ ಓಡಿಸಬೇಕು ಎಂಬ ಕ್ರಮವಿದೆ. ಮಂಗಳವಾರ ಮತ್ತು ಶುಕ್ರವಾರ ಅಜ್ಜಿಯನ್ನು ಕಳುಹಿಸುವುದಿಲ್ಲ. ಅಜ್ಜಿ ಓಡಿಸಿದ ಮೇಲೆ ಚೆನ್ನೆ ಮಣಿ ಆಡಬಾರದು ಎನ್ನುತ್ತಾರೆ ಹಿರಿಯರು. ಇತಂಹ ಆಚರಣೆಗಳ ಹಿಂದಿನ ಆಶಯಗಳನ್ನು ಗುರುತಿಸುವ ಅದರ ಬಗ್ಗೆ ಅರಿಯುವ ಅಗತ್ಯ ಇದೆ.
ಈಗ ತನ್ನಂತಾನೆ ಮೂಡುವ ಪ್ರಶ್ನೆ ಅಂದರೆ ಮನೆ ಒಳಗೆ ಕರೆಸಿ ನಂತರ ಓಡಿಸುವ ಈ ಅಜ್ಜಿ ಯಾರು ಎಂಬ ಕುತೂಹಲ ಇದ್ದೆ ಇರುತ್ತದೆ. ಅವಳೇ ಬಲಿಯೇಂದ್ರನ ಅಜ್ಜಿಯಂತೆ. ಬಲಿಯೆಂದ್ರನನ್ನು ಭೂಲೋಕದಲ್ಲಿ ಆಹ್ವಾನಿಸಿ ಪೂಜೆ ಸಲ್ಲಿಸಿ ಹಾಡಿ, ಹೊಗಳಿ ದೀಪಾವಳಿ ಆಚರಿಸಿದ್ದನ್ನು ಭೂಲೋಕದಲ್ಲಿ ಎಂತಹ ಸಂಭ್ರಮ ಎಲ್ಲೆಲ್ಲಿಯೂ ತಳಿರು ತೋರಣ ಶೃಂಗಾರ ದೀಪದ ಜಗಮಗ ತಿಂಡಿ ತಿನಿಸು ಆಹಾ ಎಲ್ಲೆಡೆ ಬಾ… ಬಲೀಂದ್ರ ಅಂತ ಕರೆಯುತ್ತಾರೆ. ಅಂತಹ ಭೂಲೋಕದಲ್ಲಿನ ಸೊಬಗ ಮನದಣಿಯೇ ಹೊಗಳಿದ ಮೊಮ್ಮಗನ ಮಾತಿನ ಸತ್ಯಸತ್ಯೆ ತಿಳಿಯಲು ಅಜ್ಜಿ ಬರುವುದು ಎಂಬ ನಂಬಿಕೆ. ಅವಳು ಭೂಲೋಕಕ್ಕೆ ಬರುವಾಗ ಇಲ್ಲಿ ಬಡತನದ ದಿನಗಳು ಮಳೆಗಾಲ. ಆದರೂ ಬಲಿಯೇಂದ್ರನ ಅಜ್ಜಿ ಬಂದಿದ್ದಾಳೆ ಎಂದು ಅವಳಿಗೆ ಬಗೆ ಬಗೆಯ ತಿಂಡಿಯೊಂದಿಗೆ ಸತ್ಕರಿಸುತ್ತಾರೆ. ಧಾರ್ಮಿಕತೆಯ ದಂತಕತೆಯೊಳಗೆ ಗ್ರಾಮೀಣ ಜನರು ಬದುಕನ್ನು ಅಡಿಪಾಯವಾಗಿ ಹಾಕಿಕೊಂಡಿದ್ದಾರೆ. ಜನಪದ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಆರಾಧನೆಯ ಮೂಲಕ ಅನಾವರಣಗೊಳ್ಳುವ ಈ ತರದ ಆಚರಣೆಗಳು ಉಳಿಯಲೇಬೇಕು. ಜೀವನ ಶೈಲಿ ಬದಲಾದಂತೆ ಹಬ್ಬದ ಆಚರಣೆಯ ಪ್ರಾಮುಖ್ಯತೆಗೆ ಕುಂದು ಬರಬಾರದು. ಹಿರಿಯರ ಪ್ರತಿಯೊಂದು ಸಂಪ್ರದಾಯದ ಹಿಂದೆ ಬದುಕನ್ನು ಗಟ್ಟಿಗೊಳಿಸುವ ತತ್ವವಿರುತ್ತದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.