ರೋಟರಿ ಮಂಗಳೂರು ಪೂರ್ವ ಇದರ 2023-24 ರ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಗರದ ಮೋತಿಮಹಲ್ ಹೋಟೆಲಿನ ಸಭಾ ಭವನದಲ್ಲಿ ಜರುಗಿತು. ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲೆ 3181 ರ 2025-26ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ರಾಮಕೃಷ್ಣರವರು ಪದಗ್ರಹಣ ನೆರವೇರಿಸಿ ಮಾತನಾಡುತ್ತಾ ರೋಟರಿ ಅತ್ಯಂತ ಶ್ರೇಷ್ಠ ಸೇವಾ ಸಂಸ್ಥೆ. ಈ ಸಂಸ್ಥೆಯ ಮುಖಾಂತರ ಸಮುದಾಯದ ಅಸಹಾಯಕರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂದು ಸದಸ್ಯರಿಗೆ ಕರೆ ನೀಡಿದರು.
ಮುಂಡಾಡಿಗುತ್ತು ಜಯರಾಮ ಶೆಟ್ಟಿ ಅಧ್ಯಕ್ಷರಾಗಿಯೂ, ಮಾಜಿ ಸಹಾಯ ಗವರ್ನರ್ ಸದಾಶಿವ ಶೆಟ್ಟಿಯವರು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷ ಸಿ.ಎ ಹರೀಶ್ ಶೆಟ್ಟಿಯವರು ಸ್ವಾಗತಿಸಿ ಕಳೆದ ವರ್ಷ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಜೋಯಲ್ ಸಲ್ದಾನ ಗತ ವರ್ಷದ ವರದಿ ಮಂಡಿಸಿದರು.
ಜಿಲ್ಲಾ ಸಹ ತರಬೇತುದಾರ ಶೇಖರ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ವಸಂತ ಶೆಟ್ಟಿ ನೂತನ ಸದಸ್ಯರನ್ನು ಪರಿಚಯಿಸಿದರು. ಕ್ಲಬ್ ವತಿಯಿಂದ ಅತ್ತಾವರ ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಡುಗೆ ನೀಡಲಾಯಿತು.
ವೇದಿಕೆಯಲ್ಲಿ ಸಹಾಯಕ ಗವರ್ನರ್ ವಿನೋದ ಕುಡ್ವ, ವಲಯ ಸೇನಾನಿ ಪ್ರಕಾಶ್, ವಿನ್ಸೆಂಟ್ ನಜರೆತ್ ಮತ್ತು ಗೋಪಾಲ ಶೆಟ್ಟಿ ಉಪಸ್ಥಿತರಿದ್ದು ಸೂಕ್ತ ಮಾರ್ಗದರ್ಶನ ನೀಡಿದರು. ಕ್ಲಬ್ ನ ನೂತನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಧನ್ಯವಾದ ಸಲ್ಲಿಸಿದರು.