ತುಳು ರಂಗಭೂಮಿಯಲ್ಲಿ ದಾಖಲೆ ಬರೆದ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ’ ತುಳು ನಾಟಕ ಈಗ ಸೀಮೋಲ್ಲಂಘನಕ್ಕೆ ಅಣಿಯಾಗಿದೆ. ಕರಾವಳಿಯಾದ್ಯಂತ ಜನಮೆಚ್ಚುಗೆ ಪಡೆದಿದ್ದ “ಶಿವದೂತೆ ಗುಳಿಗೆ’ ನಾಟಕ ಬಳಿಕ ರಾಜ್ಯದ ವಿವಿಧ ಭಾಗಗಳು, ಇತ್ತೀಚೆಗೆ ಹೊರರಾಜ್ಯದಲ್ಲಿಯೂ ಯಶಸ್ವಿಯಾಗಿದ್ದು, ಈಗ ವಿದೇಶದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.
2020 ಜ. 2ರಂದು ಮೊದಲ ಪ್ರದರ್ಶನ ಕಂಡ ಈ ನಾಟಕದ 423 ಹಾಗೂ 424ನೇ ಪ್ರದರ್ಶನ ಮಾ. 19ರಂದು ಅಪರಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ದುಬಾೖಯ ಅಲ್ ನಸರ್ ಲಿಸರೆಲ್ಯಾಂಡ್ ನಲ್ಲಿ ನಡೆಯಲಿದೆ. ಜತೆಗೆ ಕುವೈತ್, ಕತಾರ್, ಬಹ್ರೈನ್ನಲ್ಲಿಯೂ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ.
ಮಸ್ಕತ್ನಲ್ಲಿ 480ನೇ ಪ್ರದರ್ಶನ
ನಾಟಕ ಮೇ 12ರಂದು ಮಸ್ಕತ್ನ ರೂಮಿಯ ಅಲ್ ಫಲಾಜ್ ಹೊಟೇಲ್ನ ಗ್ರಾÂಂಡ್ ಹಾಲ್ನಲ್ಲಿ ಕನ್ನಡ ಹಾಗೂ ತುಳುವಿನಲ್ಲಿ 2 ಪ್ರದರ್ಶನ ಕಾಣಲಿದೆ. ಇದು 479 ಹಾಗೂ 480ನೇ ಪ್ರದರ್ಶನ.
“ಕಾಂತಾರ’ ಸಿನೆಮಾದಲ್ಲಿ “ಗುರುವ’ ನಾಗಿ ಮಿಂಚಿರುವ ಸ್ವರಾಜ್ ಶೆಟ್ಟಿ ಶಿವದೂತೆ ಗುಳಿಗೆ ನಾಟಕದಲ್ಲಿ “ಗುಳಿಗ’ನಾಗಿ ಅಭಿನಯಿಸಿದ್ದಾರೆ.
ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಶೋ
ತುಳು ರಂಗಭೂಮಿಯಲ್ಲಿ ದಾಖಲೆ ಮೇಲೆ ದಾಖಲೆ ಬರೆದ ನಾಟಕ ಇದಾಗಿದ್ದು, ಒಂದೇ ದಿನದಲ್ಲಿ ಎರಡು ಶೋ ನಡೆದ ಖ್ಯಾತಿಯನ್ನು ಪಡೆದಿದೆ. ಇತ್ತೀಚೆಗೆ ಮುಂಬಯಿ, ಪುಣೆ, ಗುಜರಾತ್ನಲ್ಲಿ 16 ದಿನದಲ್ಲಿ 17 ಪ್ರದರ್ಶನ ನಡೆದಿತ್ತು. ಸೆ. 29ರಿಂದ ಅ. 14ರ ವರೆಗೆ ಮತ್ತೆ ಮುಂಬಯಿ, ಪುಣೆ ಹಾಗೂ ಬರೋಡದಲ್ಲಿ 20 ಪ್ರದರ್ಶನ ಕಾಣಲಿದೆ.
ಕಡಿಮೆ ಅವಧಿ- ಹೆಚ್ಚು ಪ್ರದರ್ಶನ !
“ಶಿವದೂತೆ ಗುಳಿಗೆ’ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ಹಾಗೂ ಅತೀ ಹೆಚ್ಚು ಪ್ರದರ್ಶನ ಕಂಡ ತುಳುವಿನ ಮೊದಲ ನಾಟಕ. ಜತೆಗೆ ವಿದೇಶದಲ್ಲಿಯೂ ದಾಖಲೆಯ ಪ್ರದರ್ಶನ ಕಾಣುತ್ತಿದೆ.
ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡ ನಾಟಕ ಬೆಂಗಳೂರಿನಲ್ಲಿಯೂ ದಾಖಲೆಯ 6 ಪ್ರದರ್ಶನ ಕಂಡಿದೆ. ದಾವಣಗೆರೆ, ಶಿವಮೊಗ್ಗ, ಕೊಪ್ಪ, ಕಳಸ, ಮೂಡಿಗೆರೆ, ಬಿಜಾಪುರ, ಚಿತ್ರದುರ್ಗ, ಮೈಸೂರು ಸಹಿತ ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನ ಶೀಘ್ರ ನಡೆಯಲಿದೆ.