ಕರಾವಳಿಯ ತುಳು ಕನ್ನಡಿಗರು ಉದರ ಪೋಷಣೆಗಾಗಿ ಜಗತ್ತಿನ ನಾನಾ ಕಡೆಗಳಲ್ಲಿ ವಲಸೆ ಹೋದರು. ತಾವು ಹೆಜ್ಜೆಯೂರಿದ ಪ್ರತಿಯೊಂದು ಕಡೆಗಳಲ್ಲೂ ತಮ್ಮ ಬದುಕು ಕಟ್ಟಿಕೊಳ್ಳುವ ಮುಂಚೆ ನಾಡಿನ ಸಂಸ್ಕೃತಿ, ಕಲೆ, ಧರ್ಮ, ಭಾಷೆಯನ್ನು ಬೆಳೆಸುವುದಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟರು. ತುಳು ಮಣ್ಣಿನ ಸಂಸ್ಕ್ರತಿಯ ಆರಾಧಕರಾದ ಅವರುಗಳು ತಾವು ನೆಲೆಯೂರಿದ ಸ್ಥಳಗಳಲ್ಲಿ ನಮ್ಮ ಸಂಸ್ಕೃತಿಯನ್ನು ಆ ರಾಜ್ಯದ, ಆ ದೇಶದ ಜನರಿಗೆ ಪರಿಚಯಿಸಿದರು ಮಾತ್ರವಲ್ಲ, ನಮ್ಮ ಕಲೆಯನ್ನು ನಮ್ಮ ಸಂಸ್ಕ್ರತಿಯನ್ನು ಅಲ್ಲಿನವರೂ ಗೌರವಿಸುವಂತೆ ನೋಡಿಕೊಂಡರು. ಜಗದಗಲ ಇಂದು ತುಳುನಾಡಿನ ಸಂಸ್ಕ್ರತಿ ಮತ್ತು ಇಲ್ಲಿನ ಜನರು ರಾರಾಜಿಸುತ್ತಿದ್ದಾರೆ ಎಂದರೆ ಅಲ್ಲಿ ಅವರ ಛಲ, ಪರಿಶ್ರಮ ಎದ್ದು ಕಾಣುತ್ತದೆ.ಹಾಗೆಯೇ
ಶತಮಾನದ ಹಿಂದೆ ಮುಂಬಯಿ ನಗರಕ್ಕೆ ಬದುಕನ್ನು ಅರಸಿಕೊಂಡು ಬಂದ ನಮ್ಮವರು ಬೆಳೆದ ಎತ್ತರದ ಕಡೆ ಗಮನ ಹರಿಸಿದರೆ ಸೋಜಿಗವಾಗದೆ ಇರಲಾರದು.
ಶ್ರಮ ಸಂಸ್ಕ್ರತಿಯ
ಈ ನಗರದಲ್ಲಿ ತುಳುನಾಡಿನ ಸಂಸ್ಕೃತಿ ಇಂದು ನಳನಳಿಸುತ್ತಿದೆ ಅನ್ನುವಾಗ ಆ ನಾಡಿನಿಂದ ಬಂದ ನಾವುಗಳು ಭಾಗ್ಯವಂತರಲ್ಲದೆ ಮತ್ತಿನ್ನೇನು??
ಇಲ್ಲಿ ನೆಲೆಸಿದ ತುಳುವರು ಯಾವತ್ತಿಗೂ ಇಲ್ಲಿನವರಾಗಿದ್ದುಕೊಂಡೇ ಇಲ್ಲಿಯೇ ತುಳುನಾಡನ್ನು ಕಟ್ಟುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಹೌದು.. ತುಳುನಾಡಿನವರು ಬದುಕು ಮತ್ತು ಸಂಸ್ಕ್ರತಿಯನ್ನು ನಾಣ್ಯದ ಎರಡು ಮುಖ ಎಂದು ಭಾವಿಸಿದವರು. ಆ ನಿಟ್ಟಿನಲ್ಲಿ ಹೇಳುವುದಾದರೆ ತುಳುನಾಡಿನ ಮಂದಿಯಷ್ಟು ಸಂಸ್ಕ್ರತಿ ಆರಾಧಕರು ಅಪರೂಪದಲ್ಲಿಯೇ ಅಪರೂಪದವರು ಎಂದರಡ್ಡಿಯಿಲ್ಲ.
ತುಳು ನಾಡಿನ ಕಲೆಗಳಾದ ಯಕ್ಷಗಾನ, ನಾಟಕ, ಕೋಲ, ದರ್ಶನ, ನಾಗಪೂಜೆ ಒಟ್ಟಾರೆ ಕರಾವಳಿಯ ಜಾನಪದ ಮತ್ತು ಧಾರ್ಮಿಕ ವಿಧಿವಿಧಾನಗಳು ಎಷ್ಟು ಮನ ಮೋಹಕ ಅನ್ನುವುದನ್ನು ಈ ನಗರದ ಜನರಿಗೆ ಪರಿಚಯಿಸಿದರು. ತುಳು ನಾಡಿನ ಜನರು ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡುವುದರೊಂದಿಗೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡವರು. ತಮ್ಮನ್ನು ಕೇವಲ ಕುಟುಂಬಕ್ಕೆ ಸೀಮಿತವಾಗಿರಿಸದೆ ಸಮಾಜವೇ ತಮ್ಮ ಕುಟುಂಬ ಎಂದು ಭಾವಿಸಿದವರು. ಸಮಾಜದಲ್ಲಿರುವ ನೊಂದ ನಮ್ಮವರನ್ನು ಗುರುತಿಸಿಕೊಂಡು ಅವರ ಬದುಕನ್ನು ಹಸನುಗೊಳಿಸುವಲ್ಲಿ ಪಣತೊಟ್ಟರು. ಹಾಗೇಯೇ ನಾಡಿನ ಸಂಸ್ಕ್ರತಿಯ ಬೆಳವಣಿಗಾಗಿ ಮತ್ತು ಸಮಾಜಸೇವೆಗಾಗಿ ಹುಟ್ಟಿಕೊಂಡ ಒಂದು ಜಾತೀಯ ಸಂಸ್ಥೆ ಜವಾಬ್.
ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಮುಂಬಯಿಯ ಕಡಲ ಕಿನಾರೆ ಮುಂಜಾವಿನ ವಾಯುವಿಹಾರದಲ್ಲಿ ಒಂದಾಗುತ್ತಿದ್ದ ಒಂದಷ್ಟು ಸಮಾನ ಮನಸ್ಕ ಬಂಟ ಬಾಂದವರು ಒಟ್ಟಾದಾಗ ನಮ್ಮವರಿಗಾಗಿ ಏನಾದರೂ ಮಾಡಬೇಕು ನಮ್ಮೂರಿನ ಕಲೆ ಧಾರ್ಮಿಕ ಕಟ್ಟುಕಟ್ಟಲೆ, ನಮ್ಮಲ್ಲಿನ ಕೂಡುಕುಟುಂಬದ ಪದ್ದತಿ ಇವುಗಳನ್ನೆಲ್ಲಾ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ನಿಟ್ಟಿನಲ್ಲಿ ಡಿ ಎಮ್ ಶೆಟ್ಟಿ, ಶಂಕರ ಟಿ ಶೆಟ್ಟಿ, ಎನ್ ಸಿ ಶೆಟ್ಟಿ, ದಿವಂಗತ ಜಯರಾಮ ಆಳ್ವ, ಬಿ ಡಿ ಶೆಟ್ಟಿ, ಹರೀಶ್ ಶೆಟ್ಟಿ, ಸಿಎ ಶಂಕರ ಶೆಟ್ಟಿ, ಕಕ್ವ ಕರುಣಾಕರ ಶೆಟ್ಟಿ, ದಿವಂಗತ ಡಾ.ಸದಾನಂದ ವಿ ಶೆಟ್ಟಿ ಇವರುಗಳ ಮುಂದಾಳತ್ವದಲ್ಲಿ ಜುಹೂ, ಅಂಧೇರಿ, ವರ್ಸೋವಾ,
ವಿಲೇಪಾರ್ಲೆ ಪರಿಸರದ ಬಂಟ ಭಾಂದವರನ್ನು ಒಟ್ಟು ಹಾಕಿ ೧೯೯೮ ರಲ್ಲಿ ಜವಾಬ್ ಸಂಸ್ಥೆಯ ಡಿ ಎಮ್ ಶೆಟ್ಟಿಯವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಜುಹೂ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಒಂದಷ್ಟು ಸಾವಿರ ಜನರ ಸಮಕ್ಷಮದಲ್ಲಿ ಅಭೂತಪೂರ್ವ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಂಡಿತು.
ಈ ಸಂಸ್ಥೆ ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳೊಂದಿಗೆ ಜಾತಿ ಬಾಂಧವರನ್ನು ಒಟ್ಟು ಹಾಕಿಕೊಂಡು ಅಲ್ಲಿರುವ ಬಡ ಜನರ ಶಿಕ್ಷಣ, ವೈಧ್ಯಕೀಯ ಖರ್ಚು, ಕ್ರೀಡಾ ಕ್ಷೇತ್ರದಲ್ಲಿರುವವರ ಬಗ್ಗೆ ಮುತುವರ್ಜಿ ವಹಿಸಿಕೊಂಡರು. ಯಾರಿಗೆ ಯಾವುದರ ಅಗತ್ಯ ಎಷ್ಟು ಇದೆ ಅಷ್ಟನ್ನು ಒದಗಿಸಿ ನೊಂದವರ ಪಾಲಿಗೆ ಆಪದ್ಬಾಂದವನಾಗಿ ಈ ಸಂಸ್ಥೆ ದುಡಿಯಲು ಪ್ರಾರಂಬಿಸಿತು. ೨೦೦೧ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ವಿವೇಕ ಶೆಟ್ಟಿಯವರ ಮುತುವರ್ಜಿಯಿಂದ ಅಧಿಕೃತವಾಗಿ ನೋಂದಾವಣೆಯಾಯಿತು. ೨೦೧೩ರಲ್ಲಿ ಜವಾಬ್ ಸಂಸ್ಥೆ ತನ್ನ ಸ್ವಂತ ಕಾರ್ಯಾಲಯವನ್ನು ತನ್ನದಾಗಿಸಿಕೊಂಡಿತು. ಈ ಕಾರ್ಯಾಲಯಕ್ಕಾಗಿ ಸುಮಾರು ೨೨ ಸದಸ್ಯರುಗಳನ್ನು ಟ್ರಸ್ಟಿಯಾಗಿ ತಮ್ಮ ಉದಾರ ಧನ ಸಹಾಯವನ್ನು ನೀಡಿದರು. ಶ್ರೀ ದಿವಾಕರ ಎಮ್ ಶೆಟ್ಟಿ, ರಘು ಎಲ್ ಶೆಟ್ಟಿ, ಬಿ.ವಿವೇಕ ಶೆಟ್ಟಿ, ಗೀತಾ ಎಮ್ ಶೆಟ್ಟಿ, ಜಯರಾಮ್ ಎನ್ ಶೆಟ್ಟಿ, ಮಹೇಶ ಎಸ್ ಶೆಟ್ಟಿ, ರಮೇಶ ಯು ಶೆಟ್ಟಿ, ಬಿ ಆರ್ ಪೂಂಜ, ದಿವಾಕರ ಎಸ್ ಶೆಟ್ಟಿ, ಕೃಷ್ಣ ವೈ ಶೆಟ್ಟಿ, ಸುಧಾಕರ ಶೆಟ್ಟಿ, ಆನಂದ ಪಿ ಶೆಟ್ಟಿ, ಸಿಎ ರವೀಂದ್ರ ಎನ್ ಶೆಟ್ಟಿ, ರತ್ನಾಕರ ರೈ, ರಘುರಾಮ ಕೆ ಶೆಟ್ಟಿ, ಶೇಖರ ಎ ಶೆಟ್ಟಿ, ನಾಗೇಶ ಎನ್ ಶೆಟ್ಟಿ, ಪಾಂಡುರಂಗ ಎಸ್ ಶೆಟ್ಟಿ, ಸುಬ್ಬಯ್ಯ ವಿ ಶೆಟ್ಟಿ, ಮನಮೋಹನ ಆರ್ ಶೆಟ್ಟಿ, ಭರತ್ ಶೆಟ್ಟಿ, ಸತ್ಯಶಾಲಿನಿ ಎ ಶೆಟ್ಟಿ ಸಂಘ ಸ್ವಂತ ಕಛೇರಿ ಹೊಂದುವಲ್ಲಿ ಇವರೆಲ್ಲರೂ ಮಹಾದಾನಿಗಳಾದರು. ಇವರೆಲ್ಲರ ಕಳಕಳಿಯಿಂದಾಗಿ
ಜವಾಬ್ ಸಂಸ್ಥೆಯು ಸಾಮಾಜಿಕ ಚಿಂತನೆಯ ಸಂಘಟನೆಯಾಗಿ ಬೆಳೆದಿರುತ್ತದೆ. ಜವಾಬ್
ಸ್ವಚ್ಚತೆಯ ಕಡೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇವರು ಕಡಲ ಕಿನಾರೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಆಗಾಗ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು. ಸಮಯ ಸಮಯಕ್ಕೆ ಸರಿಯಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಸಮಾಜಕ್ಕೆ ತನ್ನ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ೨೦೧೬ರಲ್ಲಿ ಶಿವರಾಮ ನಾಯ್ಕ್ ಅವರು ಅಧ್ಯಕ್ಷರಾಗಿರುವ ಸಮಯ ರಾಜೇಶ ಶೆಟ್ಟಿಯವರ ಮುಂದಾಳತ್ವದಲ್ಲಿ ಸಂಸ್ಥೆಯ ವೆಬ್ ಸೈಟ್ ಉದ್ಗಾಟನೆಯಾಗಿ ಇವತ್ತು ಜವಾಬ್ ನ ಎಲ್ಲಾ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ವೀಕ್ಷಿಸಬಹುದಾಗಿದೆ.
ಇಂದಿನ ದಿನ ಮಾನಸದಲ್ಲಿ ಕ್ರೀಡೆಗೆ ಬಹಳ ಪ್ರಾಮುಖ್ಯತೆ ಇರುವುದನ್ನರಿತ ಸಂಸ್ಥೆ ತಮ್ಮ ಸಂಘಟನೆಯ ಮುಖಾಂತರ ಕ್ರಿಕೆಟ್ ಕೂಟವನ್ನು ಹಮ್ಮಿಕೊಂಡು ಒಂದಷ್ಟು ಯುವಕರನ್ನು ಸಂಘದೊಂದಿಗೆ ಸಂಪರ್ಕ ಇಟ್ಟುಕೊಳ್ಳುವಲ್ಲಿ ಗಮನ ಹರಿಸಿದರು. ಯುವ ಜನಾಂಗಕ್ಕೆ ನಮ್ಮ ಸಂಸ್ಕ್ರತಿಯ ಅರಿವನ್ನು ಮೂಡಿಸಿದಲ್ಲಿ ಅವರು ಪಾಶ್ಚಾತ್ಯ ಸಂಸ್ಕ್ರತಿಯನ್ನು ದೂರಿಕರಿಸುತ್ತಾರೆ ಎಂಬ ದೂರ ದೃಷ್ಟಿಯನ್ನಿಟ್ಟುಕೊಂಡು, ಅವರುಗಳನ್ನು ಸಂಘದೊಂದಿಗೆ ಹತ್ತಿರವಾಗಿಸಬೇಕು ಮತ್ತು ಅವರಲ್ಲಿ ನಮ್ಮ ಸನಾತನ ಧರ್ಮದ ವಿಶಿಷ್ಟತೆಯ ಪ್ರಜ್ಞೆ ಬೆಳೆಸಬೇಕು ಎನ್ನುವುದನ್ನು ಸಂಘದ ಹಿರಿಯರು ನಿಶ್ಚಯಿಸಿದರು. ಆ ನಿಟ್ಟಿನಲ್ಲಿ ಅಂದಿನ ಸಂಘದ ಡೈನಾಮಿಕ್ ಅಧ್ಯಕ್ಷ ಎಂದು ಗುರುತಿಸಿಕೊಂಡಿದ್ದ ಜಯಪ್ರಕಾಶ್ ಶೆಟ್ಟಿಯವರ ಮುಂದಾಳತ್ವ ಹಾಗು ರಾಜೇಶ ಶೆಟ್ಟಿಯವರ ಸಂಚಾಲಕತ್ವದಲ್ಲಿ ೨೦೧೭ರಲ್ಲಿ ಸಂಘದ ಯುವ ವಿಭಾಗವನ್ನು ಸ್ಥಾಪಿಸಲಾಯಿತು. ಯಾವತ್ತು ಯುವ ವಿಭಾಗ ಕಾರ್ಯನಿರತವಾಯಿತೋ ಅಂದಿನಿಂದ ವಿಲೇ ಪಾರ್ಲೆ, ವೀರದೇಸಾಯಿ ರೋಡ್, ಜುಹೂ, ವರ್ಸೋವ,
ಅಂಭೋಲಿಯ ಆಸು ಪಾಸಿನ ಯುವಕರು ಸಂಘಕ್ಕೆ ಹತ್ತಿರವಾಗುತ್ತಾ ಇಲ್ಲಿನ ಪ್ರತಿ ಕಾರ್ಯಕ್ರಮದಲ್ಲೂ ತಮ್ಮ ಇರುವಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಗುರುತಿಸಿಕೊಂಡರು. ಇಲ್ಲಿನ ಯುವ ವಿಭಾಗದ ಯುವಕರ ಸಾಮಾಜಿಕ ಕಳಕಳಿಗೆ ತಲೆಬಾಗಬೇಕು. ಇವರುಗಳು ಆಗಾಗ ರಕ್ತದಾನ ದಾನ ಶಿಬಿರವನ್ನು ಹಮ್ಮಿಕೊಂಡು ಸಾವಿರಾರು ಜನರ ಜೀವ ಉಳಿಸುವಲ್ಲಿ ಇವರ ಸೇವೆ ಅನುಪಮವಾದುದು, ಅನುಕರಣೀಯವಾದುದು.
ಮುಂಬಯಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಯ ಸಹಕಾರದೊಂದಿಗೆ ಪ್ರತಿ ವರ್ಷ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳುತ್ತಾರಲ್ಲದೆ ಇದರ ಲಾಭವನ್ನು ಯಾವುದೇ ಜಾತಿ ಧರ್ಮಕ್ಕೆ ಮೀಸಲಾಗಿಡದೆ ಎಲ್ಲರಿಗೂ ಇದರ ಪ್ರಯೋಜನ ಸಿಗುವಂತೆ ಮುತುವರ್ಜಿ ವಹಿಸುತ್ತಾರೆ. ಈ ಬಹುಜನ ಪ್ರಯೋಜನ ಪಡೆಯುವ ಕಾಯಕದಲ್ಲಿ ಧೀರುಬಾಯಿ ಅಂಬಾನಿ ಆಸ್ಪತ್ರೆಯ ತಾಂತ್ರಿಕ ವರ್ಗದ ಸಲಹೆಗಾರರಾಗಿರುವ ಡಾ.ಸಂತೋಷ ಶೆಟ್ಟಿ ಹಾಗು ಆಸ್ಪತ್ರೆಯ ಸಿಇಓ ಆಗಿರುವ ಡಾ.ಎನ್ ಆರ್ ಶೆಟ್ಟಿಯವರ ಸಹಕಾರ ಶ್ಲಾಘನೀಯ. ನಿರಂತರ ಕೆಲಸದ ಒತ್ತಡದಲ್ಲಿ ಸಿಲುಕಿ ಮಾನಸಿಕ ಸ್ಥೈರ್ಯ ಕಳೆದುಕೊಂಡವರಿಗೆ ಹಾಗು ಆರೋಗ್ಯವನ್ನು ಕಾಪಾಡಿಕೊಂಡು ಬರುವವರಿಗಾಗಿ ಮುಂಬಯಿಯ ಪ್ರಸಿದ್ದ ಮನೋರೋಗ ತಜ್ಞರಾದ ಡಾ.ಹರೀಶ್ ಶೆಟ್ಟಿಯವರಿಂದ ಉಪಯುಕ್ತ ಸಲಹೆಗಾಗಿ ಆಗಾಗ ಅವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೂ ಸಹ ಯುವ ವಿಭಾಗದ ಮುಖ್ಯ ಕಾರ್ಯಕ್ರಮಗಳಲ್ಲೊಂದು.
ಮುಂಬಯಿಯ ಮತ್ತೋರ್ವ ತಜ್ಞ ರಾಧಾಕೃಷ್ಣ ಹೋಟೇಲಿನ ಮಾಲಕರಾಗಿರುವ ಹರೀಶ ಶೆಟ್ಟಿಯವರಿಂದಲೂ ಆರೋಗ್ಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮಹಿಳೆಯರು ಒಂದುಗೂಡಿದಲ್ಲಿ ಯಾವುದೇ ಸಂಘಟನೆಯ ತಳಹದಿ ಗಟ್ಟಿಯಾಗಿ ಬೆಳೆಯುತ್ತೆ ಅನ್ನುವುದಕ್ಕೆ ಸಾಕ್ಷಿ ಜವಾಬ್ ಸಂಸ್ಥೆ. ನಿಕಟ ಪೂರ್ವ ಅಧ್ಯಕ್ಷರಾದ ಸಿಎ ಐ ಆರ್ ಶೆಟ್ಟಿಯವರ ನೀಲಿ ನಕಾಶೆಯ ಸಂಪೂರ್ಣ ಸಹಕಾರದೊಂದಿಗೆ ಪ್ರಸ್ತುತ ಅಧ್ಯಕ್ಷರಾಗಿರುವ ರಮೇಶ ಎನ್ ಶೆಟ್ಟಿಯವರ ಮುಂದಾಳತ್ವದಲ್ಲಿ ೨೦೨೧ರಲ್ಲಿ ಮಹಿಳಾ ವಿಭಾಗ ಉದಯವಾಯಿತು. ಸಂಘದ ಪ್ರಾರಂಭದಿಂದಲೂ ಮಹಿಳೆಯರು ಸಂಘದ ಬೆನ್ನೆಲುಬಾಗಿ ನಿಂತವರು. ಮಹಿಳಾ ವಿಭಾಗ ಜವಾಬ್ ಸಂಸ್ಥೆಯ ಆಧಾರ ಸ್ತಂಭವಾಗಿ ವರ್ಷಂಪ್ರತಿ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಸಂಘದ ಉನ್ನತಿಗೆ ಶ್ರಮಿಸುತ್ತಿದೆ. ಸಂಘದ ಸದಸ್ಯರ ಮಕ್ಕಳು ಹಾಗು ಹಿರಿಯರಿಗಾಗಿ ಕೊರೋಕೆ ಸಂಗೀತ ಕಲಿಕೆಯನ್ನು ಬಹಳ ಆಸಕ್ತಿಯಿಂದ ನಡೆಸಿಕೊಂಡು ಬರುತ್ತದೆ. ಈ ವ್ಯವಸ್ತಿತವಾದ ಕಾರ್ಯಕ್ರಮದ ಪ್ರಯೋಜನವನ್ನು ಹಲವಾರು ಸದಸ್ಯರು ಯೋಗ್ಯ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
ತುಳು ನಾಡಿನ ಸಂಸ್ಕ್ರತಿಯ ಒಂದು ಅಂಗದಂತಿರುವ ಆಟಿಡೊಂಜಿ ಕೂಟವನ್ನು ಹಮ್ಮಿಕೊಂಡು ಸಂಘದ ಮಹಿಳೆಯರು ಹಾಗು ಮಕ್ಕಳನ್ನು ಒಂದೇ ಸೂರಿನಡಿಯಲ್ಲಿ ಆಹ್ವಾನಿಸಿ ನಮ್ಮೂರಿನ ತಿಂಡಿ ತಿನಿಸುಗಳನ್ನು ಪರಿಚಯಿಸುವ ಸಾಂಸ್ಕ್ರತಿಕ ಕಾರ್ಯಕ್ರಮ ವರ್ಷ ವರ್ಷವೂ ನಡೆಸಿಕೊಂಡು ಬರುತ್ತಿದೆ. ಈ ನಾಡಿನ ಪವಿತ್ರತೆಯನ್ನು ಸಾರುವ ಹಳದಿ ಕುಂಕುಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಮಾತ್ರವಲ್ಲ ಸಮಯ ಸಂಧರ್ಭಕ್ಕನುಸಾರವಾಗಿ ಧಾರ್ಮಿಕ ವಿದ್ವಾಂಸರನ್ನು ಬರುಮಾಡಿಕೊಂಡು ಅವರಿಂದ ಧರ್ಮ ಸಂಸ್ಕ್ರತಿಯ ಕುರಿತು ಭೋದನೆಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ. ಆಗಾಗ ಮಹಿಳೆಯರು ವಿಷೇಶವಾದ ಸ್ನೇಹ ಸಮ್ಮಿಲನವನ್ನು ಹಮ್ಮಿಕೊಳ್ಳುವುದು ಅಲ್ಲಿ ಒಬ್ಬರಿಂದೊಬ್ಬರಿಗೆ ಬೇಕಾಗುವ ಸಹಾಯ, ಸಹಾಕಾರಕ್ಕೆ ಸ್ಪಂಧಿಸುವುದು ಇಲ್ಲಿನ ಮಹಿಳಾ ವಿಭಾಗದ ಕಾರ್ಯಕ್ರಮಗಳು.
ಕರಾವಳಿ ಕರ್ನಾಟಕದ ಬಹುಮುಖ್ಯ ಜಾನಪದ ಕಲೆಯಾದ ಯಕ್ಷಗಾನ ಹಾಗು ತಾಳಮದ್ದಳೆಯನ್ನು ಹಮ್ಮಿಕೊಂಡು ಯಕ್ಷಗಾನದ ಉಳಿವಿಗಾಗಿ ಶ್ರಮಿಸುವುದು ಸಹ ಪ್ರಶಂಸಾರ್ಹ. ಮೂರು ವರ್ಷಗಳ ಹಿಂದೆ ಆವರಿಸಿ ಬಂದ ಕೊರೋನ ಮಹಾಮಾರಿಯ ಹೊತ್ತಲ್ಲಿ ಜವಾಬ್ ಸಂಸ್ಥೆಯ ಹೆಚ್ಚಿನ ಸದಸ್ಯರು ಸಾಮಾಜಿಕ ಕಳಕಳಿ ಮನುಷ್ಯನಲ್ಲಿ ಹೇಗಿರಬೇಕು ಎಷ್ಟಿರಬೇಕು ಎನ್ನುವುದನ್ನು ತೋರಿಸಿಕೊಟ್ಟವರು. ಸಂಸ್ಥೆಯ ಅನೇಕ ಸದಸ್ಯರುಗಳು ಸಂಕಟದಲ್ಲಿ ಸಿಲುಕಿರುವವರಿಗಾಗಿ ಯಥೇಚ್ಛವಾಗಿ ತನು ಮನದ ಸಹಾಕಾರ ನೀಡಿ ನೊಂದವರ ಪಾಲಿಗೆ ಸಾಂತ್ವನ ನೀಡಿದರು. ಸಾವಿರಾರು ಜನರಿಗೆ ಅನ್ನ, ವಸ್ತ್ರ , ವೈದ್ಯಕೀಯ ಸಹಕಾರ ಎಲ್ಲದಕ್ಕೂ ಸಹಕರಿಸಿದರು ಮಾತ್ರವಲ್ಲ ಯಾವುದೇ ಪ್ರಶಂಸೆ ಮತ್ತು ಪ್ರಚಾರದ ಆಡಂಬರಕ್ಕೆ ಸಿಲುಕದೆ ಜನ ಸೇವೆಯೇ ಜನಾರ್ದನ ಸೇವೆ ಎನ್ನುವುದನ್ನು ಸತ್ಯ ಎಂದು ತೋರಿಸಿಕೊಟ್ಟರು. ದೇಶದ ಪ್ರಧಾನ ಮಂತ್ರಿ ಮೋದಿಯವರ ಸ್ವಚ್ಚ ಭಾರತದ ಕಲ್ಪನೆಗೆ ಜವಾಬ್ ಸಂಸ್ಥೆ ಹೆಚ್ಚಿನ ಮಟ್ಟದಲ್ಲಿ ಸ್ಪಂದಿಸಿದೆ. ಇಲ್ಲಿನ ಸದಸ್ಯರು ಅವರ ಮಕ್ಕಳು ನಗರದ ಹಾಗು ಸಮುದ್ರ ಕಿನಾರೆಯ ಸ್ವಚ್ಚತೆಯಲ್ಲಿ ತಮ್ಮನ್ನು ತೊಡಗಿಸಿರುವುದು ಅಭಿನಂದನಾರ್ಹ ಎಂದರೆ ಅತಿಶಯೋಕ್ತಿ ಖಂಡಿತಾ ಅಲ್ಲ. ಕೇವಲ ಮಾಧ್ಯಮದ ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡುವುದು ಒಂದು ಕಡೆಯಾದರೆ, ಒಂದಷ್ಟು ಸಮಾಜ ಮುಖಿ ಕಾರ್ಯಕ್ರಮ ಮಾಡಿಕೊಂಡು ಯಾವುದೇ ಪ್ರಚಾರವನ್ನು ಬಯಸದ ಜವಾಬ್ ಸಂಸ್ಥೆ ಮುಂಬಯಿಯ ಪ್ರತಿಷ್ಠಿತ ಸಂಸ್ಥೆ ಅಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಆಗರ್ಭ ಶ್ರೀಮಂತರ ಸಂಸ್ಥೆ ಎಂಬ ಹಣೆಪಟ್ಟಿ ಇದ್ದರೂ ಸಾಮಾನ್ಯರ ಸಂಸ್ಥೆಯಾಗಿ ಬಡಜನರ ಸೇವೆಗಾಗಿ ತನ್ನನ್ನು ಮುಡಿಪಾಗಿಟ್ಟಿಸಿಕೊಂಡಿದೆ ಎನ್ನುವುದು ಸಂತಸದ ಸುದ್ದಿ. ಇಂತಹ ಹೃದಯ ಶ್ರೀಮಂತಿಕೆಯ ಸಂಘಟನೆಗಳು ಸಾವಿರವಾಗಿ ದೇಶದ, ಸಮಾಜದ ಉನ್ನತಿಗಾಗಿ ಶ್ರಮಿಸಿದಲ್ಲಿ ಸನಾತನ ಧರ್ಮ, ಧಾರ್ಮಿಕ ಕಟ್ಟು ಕಟ್ಟಲೆ, ಸಾಮಾಜಿಕ ಚಿಂತನೆಗಳು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದು ದೇಶದ ಉತ್ತರೋತ್ತರ ಅಭಿವೃದ್ಧಿಗೆ ಸಹಾಯ ಆಗುತ್ತೆ ಅನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
ಜವಾಬ್ ಸಂಘಟನೆ ಪ್ರಾರಂಭವಾಗಿ ಇದೀಗ ಇಪ್ಪತೈದರ ರಜತ ಮಹೋತ್ಸವದ ಹೊಸ್ತಿಲಲ್ಲಿದೆ. ಮುಂಬಯಿ ಮಹಾನಗರದ ಖ್ಯಾತ ಉದ್ಯಮಿ ಬಂಟರ ಸಂಘದ ಮಾಜಿ ಅಧ್ಯಕ್ಷ ಬಿ.ವಿವೇಕ ಶೆಟ್ಟಿಯವರ ರಜತ ಮಹೋತ್ಸವದ ಗೌರವ ಅಧ್ಯಕ್ಷತೆಯೊಂದಿಗೆ
ದಿನಾಂಕ ೭-೧-೨೦೨೩ರಂದು ಮಧ್ಯಾಹ್ನ ಮೂರು ಗಂಟೆಯಿಂದ ಬಂಟರ ಭವನ ಕುರ್ಲಾದ ಸಭಾಗೃಹದಲ್ಲಿ ಜವಾಬ್ ಸಂಸ್ಥೆಯ ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿರುವ ಮುಂಬಯಿಯ ಖ್ಯಾತ ನ್ಯಾಯವಾದಿ ಗುಣಕರ ಶೆಟ್ಟಿಯವರ ಮುಂದಾಳತ್ವದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಬಹು ವಿಜೃಂಭಣೆಯಿಂದ ನೆರವೇರಲಿದೆ. ಗುಣಕರ ಶೆಟ್ಟಿಯವರ ಹೆಗಲಿಗೆ ಹೆಗಲಾಗಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿರುವ ಶ್ರೀಮತಿ ಶ್ವೇತಾ ಹೆಗ್ಡೆ ಹಾಗು ಯುವ ವಿಭಾಗದ ಕಾರ್ಯಧ್ಯಕ್ಷೆ ರೇಶ್ಮಾ ಶೆಟ್ಟಿ ಅವರುಗಳು ಶ್ರಮಿಸಿರುವರು. ಈ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಕಾರಣೀಕರ್ತರಾದ ಸಂಸ್ಥೆಯ ಮಾಜಿ ಅಧ್ಯಕ್ಷರುಗಳ ಕೊಡುಗೆ ಅಪಾರವಾದುದು. ಅವರೆಲ್ಲರೂ ಸಂಸ್ಥೆಯ ಪ್ರೀತಿಪಾತ್ರರು.
ಈ ಹೊತ್ತಲ್ಲಿ ಸಂಸ್ಥೆಯ ಆದಾರಸ್ತಂಬಗಳನ್ನು ನೆನಪಿಸುವುದು ಸಹ ಅಗತ್ಯಗಳಲ್ಲೊಂದು. ಅವರೆಂದ ರೆ ಶ್ರೀ ಬಿ ಡಿ ಶೆಟ್ಟಿ, ಶ್ರೀ ವಿಶ್ವನಾಥ ಹೆಗ್ಡೆ, ಶ್ರೀ ಬಿ ವಿವೇಕ ಶೆಟ್ಟಿ,ಶ್ರೀ ಶಂಕರ ಟಿ ಶೆಟ್ಟಿ, ಶ್ರೀರಮೇಶ ಯು ಶೆಟ್ಟಿ, ಶ್ರೀ ಎನ್ ಸಿ ಶೆಟ್ಟಿ,
ಶ್ರೀ ಆನಂದ ಪಿ ಶೆಟ್ಟಿ, ಶ್ರೀ ರಘು ಎಲ್ ಶೆಟ್ಟಿ, ಶ್ರೀನಾಗೇಶ ಎನ್ ಶೆಟ್ಟಿ,ಶ್ರೀ ಶಿವರಾಮ ನಾಯಕ್,ಶ್ರೀ ಜಯಪ್ರಕಾಶ್ ಶೆಟ್ಟಿ, ಶ್ರೀಸಿಎ ಐ ಆರ್ ಶೆಟ್ಟಿ ಹಾಗೆಯೇ ಪ್ರಸ್ಥುತ ಸಂಘದ ಅಧ್ಯಕ್ಷರಾಗಿರುವ ರಮೇಶ ಎನ್ ಶೆಟ್ಟಿ ಸಂಸ್ಥೆಯ ಉನ್ನತಿಯೇ ನನ್ನ ಉಸಿರು ಎಂಬಂತೆ ದುಡಿಯುತ್ತಿದ್ದಾರೆ. ಹಾಗೆಯೇ ಸಂಘದ ಸ್ಥಾಪಕ ಸದಸ್ಯರಾದ ಡಾ ಪ್ರಭಾಕರ ಶೆಟ್ಟಿ ಬೋಳರವರು ಸಂಘದ ಕಾನೂನು ಚೌಕಟ್ಟನ್ನು ನೆರೆವೇರಿಸುವಲ್ಲಿ ಹಾಗು ಸಂಸ್ಥೆಗೆ ಬೇಕಾಗುವ ಸಲಹೆ ಸಹಕಾರವನ್ನು ಹೊತ್ತು ಹೊತ್ತಿಗೆ ನೀಡುತ್ತಾ ಬಂದಿರುವರು.ಅವರ ಸೇವೆ ಅಪಾರವಾದುದು ಅವರನ್ನೂ ಸಂಸ್ಥೆ ಬಹಳ ಆತ್ಮೀಯವಾಗಿ ನೆನಪಿಸುತ್ತದೆ.
✍🏻
ಪೇತ್ರಿ ವಿಶ್ವನಾಥ ಶೆಟ್ಟಿ