
ಕಳೆದ 26 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಉಳ್ಳಾಲ ವಲಯ ಬಂಟರ ಸಂಘಕ್ಕೆ 2026 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬಂಟರ ಸಂಘ ಉಳ್ಳಾಲ ವಲಯವು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಆಡಳಿತದಿಂದ ನವೆಂಬರ್ 1 ರಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಗೌರವವನ್ನು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮಂಗಳೂರು ನಗರ ಪೊಲೀಸ್ ಕಮಿಷನರ್, ಸಂಸದರು, ಶಾಸಕರುಗಳು ಮತ್ತು ವಿವಿಧ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಉಳ್ಳಾಲ ವಲಯ ಬಂಟರ ಸಂಘದ ಪರವಾಗಿ ಅಧ್ಯಕ್ಷರಾದ ಕೆ ರವೀಂದ್ರ ರೈ ಹರೇಕಳ ಅವರು ವೇದಿಕೆಯಲ್ಲಿ ಗಣ್ಯರಿಂದ ಈ ಗೌರವವನ್ನು ಸ್ವೀಕರಿಸಿದರು.





















































































































