ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರ ಆತ್ಮಕಥೆ ‘ಚಿತ್ತ ಭಿತ್ತಿಯ ಪತ್ತಾಯ’ ಹಾಗೂ ತುಳುವರ ತಿಂಗಳುಗಳ ಮಹತ್ವದ ಬಗ್ಗೆ ರಚಿಸಿದ ತುಳುವೆರೆ ತಿಂಗೊಲ್ದ ಪೊಲಬು ಕೃತಿಗಳ ಬಿಡುಗಡೆ ಸಮಾರಂಭ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನೆರವೇರಿತು. ಆತ್ಮಕಥೆಯ ಬಗ್ಗೆ ಮಾತನಾಡಿದ ವಿದ್ವಾಂಸ, ಬರಹಗಾರ ಡಾ| ನರೇಂದ್ರ ರೈ ದೇರ್ಲ ಅವರು, ಈ ಆತ್ಮಕಥೆಯನ್ನು ರಾಜಕೀಯ, ಅಧಿಕಾರ ಎಂಬ ಕೆನೆಪದರವನ್ನು ಬಿಟ್ಟು ಆ ಮಟ್ಟಕ್ಕೆ ಬರುವುದಕ್ಕೆ ಅವರು ಅನುಭವಿಸಿದ ನೋವುಗಳು, ಎದುರಿಸಿದ ಸವಾಲುಗಳ ನೆಲೆಯಲ್ಲಿ ಓದಿಕೊಳ್ಳಬೇಕು ಎಂದರು. ಸಾರ್ವಜನಿಕ ಬದುಕಿನಲ್ಲಿ ಈಗ ನೈತಿಕತೆ ಎನ್ನುವುದೇ ತೆರೆಮರೆಗೆ ಸರಿಯುತ್ತಿರುವ ಸನ್ನಿವೇಶದಲ್ಲಿ ಚಾರಿತ್ರ್ಯವಂತರಾಗಿ ಬದುಕಿ, ಅದನ್ನು ಬಹಿರಂಗವಾಗಿ ಬರೆಯುವ ಅಪರೂಪದ ರಾಜಕಾರಣಿ ಎಂದರು.




ಕೃತಿಯ ಬಗ್ಗೆ ಮಾತನಾಡಿದ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅವರು, ರಾಜಕಾರಣಿಯಾಗಿದ್ದುಕೊಂಡು ರಾಜಕೀಯ ಭಾಷಣ ಮಾಡುತ್ತಿದ್ದ ಶಕುಂತಳಾ ಶೆಟ್ಟಿ ಅವರು ಇಲ್ಲಿ ಬರಹಗಾರ್ತಿಯಾಗಿ ರೂಪುಗೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ಆತ್ಮಕಥನ ಹಾಗೂ ತುಳುವಿನಲ್ಲಿ ಲೇಖನಗಳ ಗುಚ್ಛವನ್ನು ಕೃತಿಯಾಗಿ ಹೊರ ತಂದಿರುವುದು ಸ್ಫೂರ್ತಿದಾಯಕ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿದರು. ಸಾಹಿತಿ ಬಿ.ಎಂ ರೋಹಿಣಿ, ಕರ್ನಾಟಕ ಲೇಖಕಿಯರ ವಾಚಕಿಯರ ಸಂಘದ ಕಾರ್ಯದರ್ಶಿ ಕೃಷ್ಣವೇಣಿ ಉಪಸ್ಥಿತರಿದ್ದರು. ಬೂಬ ಪೂಜಾರಿ ಸ್ವಾಗತಿಸಿ, ವಂದಿಸಿದರು. ಪ್ರಕಾಶಕ ನಾಗೇಶ್ ಕಲ್ಲೂರು ನಿರೂಪಿಸಿದರು.


















































































































