ಕತಾರ್ನಲ್ಲಿರುವ ಸಮುದಾಯದ ಪ್ರತಿಷ್ಠಿತ ಸಂಘಟನೆಯಾದ ಬಂಟ್ಸ್ ಕತಾರ್ (Bunts Qatar) ವತಿಯಿಂದ ಅಕ್ಟೋಬರ್ 9ರಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಾಂಸ್ಕೃತಿಕ ಮತ್ತು ಸಂಗೀತ ರಸಸಂಜೆ ಕಾರ್ಯಕ್ರಮ “ತರಂಗ್ – 2026” (Tarang – 2026) ದೋಹಾದ ಆಲ್ ವಕ್ರಾದಲ್ಲಿರುವ ಡಿಪಿಎಸ್ ಆಡಿಟೋರಿಯಂನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಪ್ರವಾಸಿ ಕನ್ನಡಿಗರು ಹಾಗೂ ಬಂಟ ಬಾಂಧವರ ಸಮ್ಮುಖದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿದೆ. ಇದೇ ಭವ್ಯ ವೇದಿಕೆಯಲ್ಲಿ ಪ್ರಸಿದ್ಧ ಉದ್ಯಮಿ ಹಾಗೂ ಸಮಾಜ ಸೇವಕರಾದ, ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಶೆಟ್ಟಿಯವರಿಗೆ ಅವರ ಗಣನೀಯ ಸಮಾಜ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಬಂಟ್ಸ್ ಕತಾರ್ ಸಮಿತಿಯ ವತಿಯಿಂದ ‘ಸೇವಾಜ್ಯೋತಿ ಪುರಸ್ಕಾರ’ ಪ್ರಶಸ್ತಿ ನೀಡಿ ಭವ್ಯವಾಗಿ ಸನ್ಮಾನಿಸಲಾಯಿತು.




ದೋಹಾ ಕತಾರ್ ನ ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್, ಬಂಟ್ಸ್ ಕತಾರ್ನ ಅಧ್ಯಕ್ಷರಾದ ಸುಖರಾಮ ಶೆಟ್ಟಿ ಸೌಕೂರು, ಸ್ಥಾಪಕ ಅಧ್ಯಕ್ಷರಾದ ಡಾ| ರವಿ ಶೆಟ್ಟಿ, ಉಪಾಧ್ಯಕ್ಷರಾದ ಮನೋಜ್ ಶೆಟ್ಟಿ ಪೆರ್ವತೋಡಿ ಗುತ್ತು ಹಾಗೂ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು, ಹಿರಿಯ ಸದಸ್ಯರು ಮತ್ತು ನೂರಾರು ಅನಿವಾಸಿ ಭಾರತೀಯರು ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


















































































































