‘ಆತ್ಮ ದೀಪ ಬೆಳಕು’ ಕೃತಿಯಲ್ಲಿ ಶಿಮುಂಜೆ ಪರಾರಿ ರಚಿಸಿದ ಸಮಗ್ರ ವಚನಗಳ ಸಂಗ್ರಹವಿದ್ದು, ವಚನಗಳು ಆದರ್ಶಪ್ರಾಯವಾಗಿವೆ. ವಚನಗಳ ತತ್ವಗಳನ್ನು ನಾವು ಜೀವನದಲ್ಲಿ ಪಾಲಿಸಿದರೆ ಒಳ್ಳೆಯ ಜೀವನ ನಡೆಸಬಹುದು. ಇಂದು ಗ್ರಂಥಾಯನ ವಿಭಾಗದವರು ಎಂ ಆನಂದ ಶೆಟ್ಟಿ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮವನ್ನು ನೀಡಿದ್ದಾರೆ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಪ್ರಶಂಸಿಸಿದರು. ಅವರು ಗೋರೆಗಾoವ್ ಕರ್ನಾಟಕ ಸಂಘದ ಗ್ರಂಥಾಯನ ವಿಭಾಗದ ವತಿಯಿಂದ ಗೋರೆಗಾoವ್ ಪಶ್ಚಿಮದ ‘ದವೇ’ ಬಿಲ್ಡಿಂಗ್ ಎರಡನೇ ಮಹಡಿಯ ಸಂಘದ ಕಛೇರಿಯಲ್ಲಿ ಜರಗಿದ ದಿ. ಡಾ. ಸುನೀತಿ ಉದ್ಯಾವರ್, ದಿ. ಶಾಂತರಾಮ್ ರಾವ್, ದಿ. ಕವಿತಾ ಕೈಲಾಜೆ ಮತ್ತು ಮನಮೋಹನ್ ಶೆಟ್ಟಿ ದತ್ತಿ ನಿಧಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ದತ್ತಿನಿಧಿ ಅಂಗವಾಗಿ ಖ್ಯಾತ ಸಾಹಿತಿ ದಿ. ಶಿಮುಂಜೆ ಪರಾರಿ ರಚಿಸಿದ ವಚನಗಳ ಡಾ| ಪೂರ್ಣಿಮಾ ಶೆಟ್ಟಿ ಸಂಪಾದಿತ ಕೃತಿ ‘ಆತ್ಮ ದೀಪದ ಬೆಳಕು’ ಇದರ ಬಗ್ಗೆ ಸಮೀಕ್ಷೆ ನಡೆಯಿತು. ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿಯವರ ಪರಿಚಯ ಹಾಗೂ ‘ಆತ್ಮದೀಪದ ಬೆಳಕು’ ಕೃತಿ ಸಮೀಕ್ಷೆಯನ್ನು ಗ್ರಂಥಾಯನ ವಿಭಾಗದ ಸಂಚಾಲಕಿ ಯಶೋಧಾ ಶೆಟ್ಟಿ ಮಾಡಿದರೆ ಅವರು ರಚಿಸಿದ ಆಯ್ದ ವಚನಗಳ ವಾಚನ ಸಂಚಾಲಕಿ ಶೋಭಾ ದಿವಾಕರ್ ಹಾಗೂ ವಿಶ್ಲೇಷಣೆಯ ವಾಚನ ಸದಸ್ಯೆ ಚಂದ್ರಕಲಾ ಶಿಂಪಿ ಮಾಡಿದರು.

ಸಭಿಕರ ಅನಿಸಿಕೆಯಲ್ಲಿ ಸಂಘದ ಸದಸ್ಯ ಪೇಟೆಮನೆ ಪ್ರಕಾಶ್ ಶೆಟ್ಟಿ ಮಾತನಾಡುತ್ತಾ, ಶಿಮುಂಜೆಯವರು ತನ್ನ ತಂದೆಯ ಉದ್ಯಮವನ್ನು ಮುಂದುವರಿಸುತ್ತಿದ್ದರೆ ಬಹುಶ: ಹಣ ಸಂಪಾದಿಸುತ್ತಿದ್ದರು. ಆದರೆ ಅವರ ಒಲವು ಸಾಹಿತ್ಯದ ಮೇಲೆ ಇತ್ತು. ಅವರು ಸೃಜಿಸಿದ ಸಾಹಿತ್ಯಕ ಸಂಪತ್ತು ಅಪಾರ ಬೆಲೆಯದ್ದು. ಆವರು ಬಿಟ್ಟು ಹೋದ ಈ ಸಂಪತ್ತನ್ನು ಪರಿವಾರದವರು ‘ಆತ್ಮ ದೀಪದ ಬೆಳಕು ಕೃತಿ’ ಮುಖಾಂತರ ಮತ್ತು ಡಾ| ಪೂರ್ಣಿಮಾ ಶೆಟ್ಟಿ ಸಂಪಾದಕತ್ವದ ಮೂಲಕ ಪುನಃ ಸಮಾಜಕ್ಕೆ ಹಂಚಿದ್ದಾರೆ ಎಂದು ಹೇಳಿದರು. ಸಂಘದ ಪಾರುಪತ್ಯಗಾರ ನಿತ್ಯಾನಂದ ಡಿ ಕೋಟ್ಯಾನ್ ಮಾತನಾಡುತ್ತಾ, ಶಿಮುಂಜೆ ಸ್ವಾಭಿಮಾನಿಯಾಗಿದ್ದರು.




ಟೀಕೆ ಟಿಪ್ಪಣಿಗಳನ್ನು ಬೆದರದೆ ಎದುರಿಸುತ್ತಿದ್ದರು ಮತ್ತು ಆ ಬಗ್ಗೆ ಚಿಂತಿತರಾಗುತ್ತಿರಲಿಲ್ಲ. ನಿತ್ಯಾನಂದ ಸ್ವಾಮಿಯ ಪರಮ ಭಕ್ತರಾಗಿದ್ದರು. ಸ್ವಾಮಿಗಳಿಂದ ಅವರಿಗಾದ ಅನುಭವಗಳನ್ನು ಹೇಳುತ್ತಿದ್ದರು. ಅವರ ಸಾಹಿತ್ಯದ ವಿಷಯದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಆಗ ನಮ್ಮಿಂದ ಸಾಧ್ಯವಾಗಲಿಲ್ಲ ಎಂಬುದು ಬೇಸರದ ಸಂಗತಿ ಎಂದು ತಿಳಿಸಿದರು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣ ಬಂಗೇರ ಮಾತನಾಡಿ, ನಮ್ಮ ಸಂಘದ ಗ್ರಂಥಾಲಯದಲ್ಲಿ ಮುಗ್ಧ ಮಗುವಿನ ಮುಖಪುಟದ ಶಿಮುಂಜೆ ಪರಾರಿ ಅವರ ಪುಸ್ತಿಕೆಗಳಲ್ಲಿದ್ದ ‘ಯಾನ್ ಪನ್ಪಿನಿ ಇಂಚ’ ಎಂಬ ತುಳು ಚುಟುಕುಗಳನ್ನು ಓದಿ ನಾನು ಪ್ರಭಾವಿತಳಾಗಿದ್ದೆ ಎಂದು ತಿಳಿಸಿದರು.

ಶಿಮುಂಜೆ ಪರಾರಿಯವರು ಮಗಳು ಅಪರ್ಣಾ ಶೆಟ್ಟಿ ತನ್ನ ಅನಿಸಿಕೆಯಲ್ಲಿ, ಇಂತಹ ಕಾರ್ಯಕ್ರಮಗಳಲ್ಲಿ ತಂದೆ ನಮ್ಮ ಜೊತೆಯಲ್ಲಿಯೇ ಸದಾ ಇದ್ದಾರೆ ಎಂದು ಭಾಸವಾಗುತ್ತದೆ ಎಂದು ತಂದೆಯ ಒಲವನ್ನು ಆತ್ಮೀಯವಾಗಿ ವ್ಯಕ್ತಪಡಿಸಿದರು. ಶಾಂತಾ ಎನ್ ಶೆಟ್ಟಿ ಮಾತನಾಡಿ, ಶಿಮುಂಜೆ ಪರಾರಿಯವರು ನಮಗೆ ಸಂಬಂಧಿಕರು. ಆದರೂ ಅವರ ಸಾಹಿತ್ಯದ ಬಗ್ಗೆ ಅಷ್ಟು ತಿಳಿದಿರಲಿಲ್ಲ. ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶಿಮುಂಜೆ ಪರಾರಿಯವರ ವಚನ ಸಂಪುಟಗಳ ಸಂಗ್ರಹ, ಡಾ| ಪೂರ್ಣಿಮಾ ಶೆಟ್ಟಿ ಸಂಪಾದಿತ ಕೃತಿ ‘ಆತ್ಮ ದೀಪದ ಬೆಳಕು’ ಬಿಡುಗಡೆಗೊಂಡಾಗ ಪರಾರಿ ಅವರ ಸಾಹಿತ್ಯ, ಅವರಿಗೆ ಲಭಿಸಿದ ಸನ್ಮಾನಗಳ ಬಗ್ಗೆ ತಿಳಿಯಿತು. ಅವರ ಪತ್ನಿ ಚಂದ್ರಿಕಾ ಶೆಟ್ಟಿ ನನ್ನ ಚಿಕ್ಕಮ್ಮ ಎಂದು ಹಳೇ ನೆನಪುಗಳನ್ನು ಸಭಿಕರ ಮುಂದೆ ಸ್ವಾರಸ್ಯಪೂರ್ಣವಾಗಿ ಹಂಚಿಕೊಂಡರು.
ದಿ. ಶಿಮುಂಜೆ ಪರಾರಿಯವರ ಪತ್ನಿ ಚಂದ್ರಿಕಾ ಶೆಟ್ಟಿ ಅವರನ್ನು ಸಂಘದ ಅಧ್ಯಕ್ಷ ವಿಶ್ವನಾಥ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ಶಾಂತಾ ಎನ್ ಶೆಟ್ಟಿ ಮತ್ತು ಗ್ರಂಥಾಯನ ವಿಭಾಗದ ನಿರ್ದೇಶಕ ಎಮ್ ಆನಂದ ಶೆಟ್ಟಿ ಹೂಗುಚ್ಛ, ಪುಸ್ತಕ ನೀಡಿ ಗೌರವಿಸಿದರು. ಶೋಭಾ ದಿವಾಕರ್ ಮತ್ತು ಚಂದ್ರಕಲಾ ಶಿಂಪಿ ಅವರ ಪ್ರಾರ್ಥನೆಯಿಂದ ದತ್ತಿನಿಧಿ ಕಾರ್ಯಕ್ರಮ ಆರಂಭವಾಯಿತು. ಗ್ರಂಥಾಯನ ವಿಭಾಗದ ನಿರ್ದೇಶಕ ಎಮ್ ಆನಂದ ಶೆಟ್ಟಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಕುರಿತು ಗೌ. ಪ್ರ ಕಾರ್ಯದರ್ಶಿ ಶಾಂತಾ ಎನ್ ಶೆಟ್ಟಿ ತಿಳಿಸಿದರು. ದತ್ತಿ ನಿಧಿಯವರ ಪರಿಚಯವನ್ನು ಗ್ರಂಥಾಯನ ವಿಭಾಗದ ಸದಸ್ಯೆ ಶೈಲಾ ನಾಯಕ್ ಮಾಡಿದರು. ವೇದಿಕೆಯಲ್ಲಿದ್ದ ಅಧ್ಯಕ್ಷರು, ಗೌ ಪ್ರಧಾನ ಕಾರ್ಯದರ್ಶಿ, ನಿರ್ದೇಶಕ, ಪಾರುಪತ್ಯಗಾರ ಹಾಗೂ ಸಂಘದ ಹಿರಿಯ ಗಣ್ಯರು ದತ್ತಿನಿಧಿಯವರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಯಶೋದಾ ಶೆಟ್ಟಿ ಮಾಡಿದರೆ, ಶೋಭಾ ದಿವಾಕರ್ ಧನ್ಯವಾದಾರ್ಪಣೆಗೈದರು.














































































































