ಜೀವನೋಪಾಯಕ್ಕಾಗಿ ಮರದ ಕೆಲಸವನ್ನೇ ನಂಬಿಕೊಂಡು ಬದುಕುತ್ತಿದ್ದ ಪಣಪಿಲ ಗ್ರಾಮದ ಸುರೇಶ್ ಅವರ ಬದುಕಿನಲ್ಲಿ ಸಂಭವಿಸಿದ ದುರ್ಘಟನೆ ಅವರನ್ನು ಸಂಕಷ್ಟಕ್ಕೆ ದೂಡಿದೆ. ಮರದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರ ಕತ್ತರಿಸುವ ಯಂತ್ರ ತಾಗಿ ಗಂಭೀರವಾಗಿ ಗಾಯಗೊಂಡ ಸುರೇಶ್ ಅವರ ಒಂದು ಕೈ ತನ್ನ ಬಲವನ್ನು ಕಳೆದುಕೊಂಡಿದ್ದು,
ಇದೀಗ ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಅಪಘಾತದ ಬಳಿಕ ಸುರೇಶ್ ಅವರು ಪ್ರತಿದಿನ ಫಿಜಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯ ವೆಚ್ಚದ ಜೊತೆಗೆ ಕುಟುಂಬದ ದೈನಂದಿನ ಜೀವನ ನಿರ್ವಹಣೆಯ ಜವಾಬ್ದಾರಿಯೂ ಸವಾಲಾಗಿ ಪರಿಣಮಿಸಿದೆ. ಈ ಕಷ್ಟದ ಸಂದರ್ಭದಲ್ಲಿ ರುದ್ರಾಂಶ್ ಕನ್ಸ್ಟ್ರಕ್ಷನ್ ಮಾಲಕ ಅಜಯ್ ದೀಕ್ಷಿತ್ ಶೆಟ್ಟಿಯವರು ಸುರೇಶ್ ಅವರ ನೆರವಿಗೆ ಧಾವಿಸಿ ತನ್ನ ರುದ್ರಾಂಶ ಸೇವಾ ಫೌಂಡೇಶನ್ ಮೂಲಕ ಧನಸಹಾಯ ನೀಡಿದರು.
ಕಷ್ಟದ ಸಮಯದಲ್ಲಿ ಕೈ ಹಿಡಿಯುವ ಮನಸ್ಸೇ ನಿಜವಾದ ಮಾನವೀಯತೆ ಎಂಬುದನ್ನು ಸಾರುವ ರೀತಿಯಲ್ಲಿ ನಡೆದ ಈ ನೆರವು ಸುರೇಶ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯದ ಜೊತೆಗೆ ಆತ್ಮಸ್ಥೈರ್ಯವನ್ನೂ ನೀಡಿದೆ. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಯೋಜಕ ಹರಿಶ್ಚಂದ್ರ ಕೆ.ಸಿ., ಶಿರ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ವೇದ ಪ್ರಕಾಶ್ ಮಡಿವಾಳ್ ಉಪಸ್ಥಿತರಿದ್ದರು. ಸುರೇಶ್ ಅವರ ಚಿಕಿತ್ಸೆಗೆ ಹಾಗೂ ಮುಂದಿನ ಬದುಕಿಗೆ ಇನ್ನಷ್ಟು ನೆರವು ದೊರೆಯಲಿ ಎಂಬುವುದು ಸ್ಥಳೀಯರ ಆಶಯವಾಗಿದೆ.

















































































































