ಮಂಗಳೂರಿನ ಖ್ಯಾತ ಪಶು ವೈದ್ಯಕೀಯ ತಜ್ಞ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರಿಗೆ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ಯಿಂದ ಪ್ರತಿಷ್ಠಿತ ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಗೌರವ ನೀಡಿ ಸನ್ಮಾನಿಸಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಡಿಯಲ್ಲಿ ಬರುವ ದೇಶದ ಅತ್ಯುನ್ನತ ಪಶು ವೈದ್ಯಕೀಯ ಸಂಸ್ಥೆಯಾದ IVRI, ಡಾ. ಬೆಳ್ಳಿಪ್ಪಾಡಿ ಅವರ ಡೈರಿ ಮತ್ತು ಕೋಳಿ ಸಾಕಣೆ ಕ್ಷೇತ್ರದಲ್ಲಿನ ದೀರ್ಘಕಾಲದ ಸೇವೆ, ಆಧುನಿಕ ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮ ಅಭಿವೃದ್ಧಿಯಲ್ಲಿನ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಿದೆ. ಉತ್ತರ ಪ್ರದೇಶದ ಬರೇಲಿಯ ಇಝತ್ನಗರದಲ್ಲಿರುವ ICAR-IVRI ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ICAR ನ ಉಪ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್, IVRI ನಿರ್ದೇಶಕ ಡಾ. ಎಸ್.ಕೆ ಮೆಂದಿರಟ್ಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ಬೆಳ್ಳಿಪ್ಪಾಡಿ ಅವರು ಮಂಗಳೂರಿನ ರೈಸನ್ಸ್ ನ್ಯೂಟ್ರಿಷನ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದು, ಕರ್ನಾಟಕ ಕೋಳಿ ರೈತರು ಮತ್ತು ತಳಿಗಾರರ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಅವರು ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯರಾಗಿ ಮತ್ತು ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFSU) ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗೌರವವು ಅವರ ವೃತ್ತಿಪರ ಜ್ಞಾನ ಮತ್ತು ಪ್ರಾಯೋಗಿಕ ಅನುಭವವನ್ನು ಶೈಕ್ಷಣಿಕ ಕ್ಷೇತ್ರಕ್ಕೆ ತರುವ ಮಹತ್ವದ ಹೆಜ್ಜೆಯಾಗಿದೆ.















































































































