ಅಂತಾರಾಷ್ಟ್ರೀಯ ಆರ್ಯಭಟ ಹಾಗೂ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಖ್ಯಾತ ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ತುಳು ಕನ್ನಡ ಭಕ್ತಿಗೀತೆಗಳ ಸಂಕಲನ ‘ನೀರಾಜನ’ ದೈವ ದೇವರ ಭಕ್ತಿ ಸುಗಿಪು ಬಿಡುಗಡೆ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಗಸ್ಟ್ 21ರಂದು ಅಂಧೇರಿ ಪಶ್ಚಿಮದ ಲಿಂಕ್ ರೋಡ್ ನ ಪ್ಯಾಪಿಲಾನ್ ಪಾರ್ಕ್ ಹೋಟೇಲ್ ಸಭಾಂಗಣದಲ್ಲಿ ಜರಗಿತು. ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಅಸೋಸಿಯೇಶನ್ ಆಫ್ ಬಂಟ್ಸ್ (ಜವಾಬ್)ನ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜವಾಬ್ ನ ಮಾಜಿ ಅಧ್ಯಕ್ಷ ಹಾಗೂ ಪ್ಯಾಪಿಲೋನ್ ಗ್ರೂಪ್ ಆಫ್ ಹೋಟೆಲ್ಸ್ ಸಿಎಂಡಿ ರಘು ಲೋಕಯ್ಯ ಶೆಟ್ಟಿ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಭಾರತ ಭಕ್ತಿ ಪರಂಪರೆಯ ದೇಶ. ಇಲ್ಲಿನ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಧಾರ್ಮಿಕ ಹಿನ್ನೆಲೆಯಿಂದ ಬೆಳೆದು ಬಂದಿದೆ. ತವರೂರ ಹೆಸರಾಂತ ಅರ್ಥಧಾರಿಯಾಗಿರುವ ಭಾಸ್ಕರ ರೈ ಕುಕ್ಕುವಳ್ಳಿಯವರು ತುಳು ಕನ್ನಡಗಳಲ್ಲಿ ಉತ್ತಮ ವಾಗ್ಮಿಗಳು ಮತ್ತು ಬರಹಗಾರರು. ಪುರಾಣ ಪ್ರವಚನಕಾರರಾಗಿ, ಲೇಖಕರಾಗಿ ಹಲವು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಅವರ ನೀರಾಜನ ಕೃತಿಯಲ್ಲಿರುವ ವಿವಿಧ ದೈವ ದೇವರುಗಳ ಬಗೆಗಿನ ತುಳು ಕನ್ನಡ ಭಕ್ತಿಗೀತೆಗಳು ಗೇಯ ರೂಪದಲ್ಲಿದ್ದು, ಭಜನೆ, ಹಬ್ಬ ಹರಿದಿನ, ದೇವಸ್ಥಾನ ಮತ್ತು ಉತ್ಸವಗಳಲ್ಲಿ ಹಾಡಲು ಹೇಳಿ ಮಾಡಿಸಿದಂತಿವೆ ಎಂದು ಶ್ಲಾಘಿಸಿದರಲ್ಲದೇ, ಇದು ಮನೆ ಮನೆಯಲ್ಲಿಯೂ ದೇವರ ಕೋಣೆಯಲ್ಲಿರಬೇಕಾದ ಪುಸ್ತಕ ಎಂದರು.
ಜವಾಬ್ ನ ಹಿರಿಯ ಟ್ರಸ್ಟಿ, ಮುಂಬಯಿಯ ಫೈಬರ್ ಫಾಲ್ಸ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ದಿವಾಕರ ಶೆಟ್ಟಿ ‘ನೀರಾಜನ’ ಭಕ್ತಿ ಸಂಕಲನವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭಧಲ್ಲಿ ಕೃತಿಕರ್ತರಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಜವಾಬ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ತಾಳಿಪಾಡಿಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ, ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಮಾತನಾಡಿ, ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ಸತತ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿರುವ ಜವಾಬ್ ಸಂಸ್ಥೆ ಮತ್ತು ಪ್ಯಾಪಿಲೋನ್ ನ ರಘು ಎಲ್ ಶೆಟ್ಟಿ ಅವರ ಬೆಂಬಲವನ್ನು ಸ್ಮರಿಸುತ್ತಾ ಕೃತಜ್ಞತೆ ಸಲ್ಲಿಸಿದರು. ಜವಾಬ್ ಸಂಸ್ಥೆಯ ಉಪಾಧ್ಯಕ್ಷ ನ್ಯಾಯವಾದಿ ಗುಣಕರ್ ಡಿ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಜವಾಬ್ನ ಗೌರವ ಪ್ರಧಾನ ಕಾರ್ಯದರ್ಶಿ ಶೈಲೇಶ್ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಸಂದೇಶ್ ಎಸ್ ಶೆಟ್ಟಿ, ಜತೆ ಕಾರ್ಯದರ್ಶಿ ವಿಕಾಸ್ ಬಿ ಶೆಟ್ಟಿ, ಜತೆ ಕೋಶಾಧಿಕಾರಿ ಯೋಗೇಶ್ ಎಚ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಖಾ ಗುಣಕರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಪಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ರೇಣುಕಾ ಕೆ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.





ಸಮಾರಂಭದ ಬಳಿಕ ಅಜೆಕಾರು ಕಲಾಭಿಮಾನಿ ಬಳಗದ ಸಂಯೋಜನೆಯಲ್ಲಿ ತವರೂರ ಪ್ರಸಿದ್ಧ ಕಲಾವಿದರಿಂದ ‘ಶಿವಪುತ್ರ ವೀರಮಣಿ’ ಪ್ರಸಂಗದ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ದೇವಿಪ್ರಸಾದ್ ಆಳ್ವ ತಲಪಾಡಿ ಭಾಗವತರಾಗಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಈಶ್ವರ), ಜಯಪ್ರಕಾಶ ಶೆಟ್ಟಿ ಪೆರ್ಮುದೆ (ವೀರಮಣಿ), ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಸದಾಶಿವ ಆಳ್ವ ತಲಪಾಡಿ (ಹನುಮಂತ), ಪ್ರಜ್ವಲ್ ಕುಮಾರ್ ಶೆಟ್ಟಿ ಗುರುವಾಯನಕೆರೆ (ಶತ್ರುಘ್ನ) ಅರ್ಥಧಾರಿಗಳಾಗಿದ್ದರು.















































































































