ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಆಯ್ಕೆಯೂ ಬಲು ಕ್ಲಿಷ್ಟಕರ ವಿಷಯ. ತಮ್ಮ ಆಯ್ಕೆ ತಪ್ಪಿದರೆ ಹೂಡಿದ ಬಂಡವಾಳ ಕಳೆದುಕೊಂಡು ಜೊತೆಗೆ ನಷ್ಟ ಸಂಕಷ್ಟಗಳನ್ನು ಅನುಭವಿಸಿ ಬದುಕು ದುಸ್ತರವಾಗಬಹುದು. ಈ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸಿ ತಾನು ಆಯ್ದುಕೊಂಡ ಉದ್ಯಮ ಕ್ಷೇತ್ರದಲ್ಲಿ ಸತತ ಪ್ರಗತಿ ಕಂಡು ಇಂದು ಓರ್ವ ಯಶಸ್ವಿ ಉದ್ಯಮಿ ಎಂದು ಗುರುತಿಸಿಕೊಂಡವರು ಮಂಜರಿ ಆಗ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಲಯನ್ ಪಿ ರಮೇಶ್ ಶೆಟ್ಟಿ ಕಲ್ಕಾರ್ ಅವರು. ಕೇಬಲ್ ವ್ಯವಸ್ಥೆ ನಿರ್ವಹಣೆ ಸಂಬಂಧಿ ವ್ಯವಹಾರ ಮೂಲಕ ಅಪಾರ ಗ್ರಾಹಕರನ್ನು ಸಂಪಾದಿಸಿಕೊಂಡ ಇವರು ನಂತರದ ದಿನಗಳಲ್ಲಿ ಗೃಹೋಪಯೋಗಿ ಮಸಾಲ ಪದಾರ್ಥಗಳ ಉತ್ಪಾದನೆ ಹಾಗೂ ಗೃಹಿಣಿಯರು, ಮಕ್ಕಳು ಇಷ್ಟಪಡುವ ಮಸಾಲ ಖಾದ್ಯ ಪದಾರ್ಥಗಳ ತಯಾರಿ, ವಿತರಣೆ ಮೂಲಕ ಉತ್ತಮ ಮಾರುಕಟ್ಟೆ ಸಂಪಾದಿಸಿಕೊಂಡಿದ್ದಾರೆ. ಇವರ ಮಂಜರಿ ಫುಡ್ ಬ್ರಾಂಡ್ ಅಡಿಯಲ್ಲಿ ಬರುವ ಆಹಾರೋತ್ಪನ್ನ ಮಸಾಲ ಖಾದ್ಯಗಳು, ಬೇಕ್ ವೆಲ್ ಹಾಗೂ ಇತರ ಲೇಬಲ್ ಪ್ಯಾಕ್ ಗಳನ್ನು ಕ್ಯಾಟರಿಂಗ್ ಉದ್ಯಮಿಗಳೂ ತರಿಸಿಕೊಳ್ಳುತ್ತಿದ್ದು ಈಗ ಬೇಡಿಕೆ ಹೆಚ್ಚಾದ ಕಾರಣ ಉತ್ಪನ್ನಗಳ ಪ್ರಮಾಣದಲ್ಲಿ ವೃದ್ಧಿ ಹಾಗೂ ಮಾರುಕಟ್ಟೆಯೂ ವಿಸ್ತರಣೆಗೊಂಡು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಪ್ರಾಂಚೈಸ್ ದಾಸ್ತಾನುದಾರರನ್ನೂ ನಿಯೋಜಿಸಲಾಗುತ್ತದೆ.
ಆರಂಭದ ದಿನಗಳಲ್ಲಿ ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ಬೇಡಿಕೆ ಇದ್ದ ಆಹಾರ ಖಾದ್ಯಗಳು, ಮಸಾಲ ಪದಾರ್ಥಗಳು ಈಗ ಕರ್ನಾಟಕದ ಪ್ರಮುಖ ನಗರಗಳಲ್ಲಿ ಉಪಲಬ್ಧವಿದೆ. ಇಂದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸೂಪರ್ ಸ್ಟೋರ್ ಗಳನ್ನು ಹೊಂದಿದ್ದು, ಅಲ್ಲಿನ ವ್ಯವಹಾರವನ್ನು ಹೊಂದಿಕೊಂಡು ಅನೇಕ ಸಹವಿತರಕರನ್ನೂ ನಿಯೋಜಿಸಿದ್ದಾರೆ. ಇವರ ಉದ್ಯಮ ಕ್ಷೇತ್ರದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಸಹ ವಿತರಕರು ಹಾಗೂ ಅರುವತ್ತಕ್ಕೂ ಹೆಚ್ಚು ಮುಖ್ಯ ಸಿಬ್ಬಂದಿಗಳು ಅನೇಕ ಪರಿಶ್ರಮಿ ಕಾರ್ಮಿಕರಿದ್ದಾರೆ. ಪ್ರತೀ ವಿಭಾಗದಲ್ಲೂ ಪಳಗಿದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಕೇಬಲ್ ಟಿವಿಯಿಂದ ಆಹಾರೋತ್ಪನ್ನ ತಯಾರಿ ಉದ್ಯಮದವರೆಗೆ ಅವರ ಪರಿಶ್ರಮದ ಯಾತ್ರೆ ನಿಜಕ್ಕೂ ರೋಚಕವಾದುದು. ತನ್ನ ಉದ್ಯಮದ ಕಾರ್ಯಕ್ಷೇತ್ರ ವಿಸ್ತರಣೆಗೆ ಪ್ರಾದೇಶಿಕ ಘಟಕಗಳೂ ಸತತ ಕ್ರಿಯಾಶೀಲವಾಗಿದ್ದು, ಜನರ ಬೇಡಿಕೆಗೆ ಅನುಗುಣವಾಗಿ ಆಹಾರ ಪದಾರ್ಥ, ಖಾದ್ಯ ವಸ್ತುಗಳು ಹಾಗೂ ದಿನೋಪಯೋಗಿ ಮಸಾಲ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.






ರಮೇಶ್ ಶೆಟ್ಟಿ ಅವರು ದಿವಂಗತ ಪಾವಲ ಗುತ್ತು ಮಂಜಪ್ಪ ಶೆಟ್ಟಿ ಹಾಗೂ ಹರಿಣಾಕ್ಷಿ ಶೆಟ್ಟಿ ಕಲ್ಕಾರ್ ದಂಪತಿಗಳ ಸುಪುತ್ರರು. ಪತ್ನಿ ಚೇತನಾ ಆರ್ ಶೆಟ್ಟಿ ಅವರು ವಾಣಿಜ್ಯ ಪದವೀಧರೆ. ಮಗ ರಚನ್ ಆರ್ ಶೆಟ್ಟಿ ಬಿಬಿಎ ಪದವಿಧರ, ಮಗಳು ರಕ್ಷಣಾ ಆರ್ ಶೆಟ್ಟಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ತನ್ನ ಉದ್ಯಮದ ಜೊತೆಗೆ ಸಂಘಟನೆ, ಸಮಾಜ ಸೇವೆ, ಕ್ರೀಡೆ, ಕಲೆ ಮೊದಲಾದ ವಿಭಾಗಗಳಲ್ಲಿ ಆಸಕ್ತರು ಹಾಗೂ ಸೇವಾ ನಿರತರಾಗಿದ್ದಾರೆ. ಪರಿಸರದ ಬಂಟ ಸಂಘಟನೆ ಜೊತೆಗೆ ಅನೇಕ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸದಸ್ಯರಾಗಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ದೇವಾಲಯಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸೇವೆಗೆ ಇವರ ಪರಿಶ್ರಮ ಮತ್ತು ಉದಾರ ದಾನ ಸಂದಾಯವಾಗಿದೆ.


ಹೀಗೆ ತನ್ನ ಔದ್ಯೋಗಿಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಂಪಾದಿಸುವ ಜೊತೆಗೆ ಸಾಮಾಜಿಕ ಸಾಂಘಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿರುವ ಇವರು ಬಂಟ ಸಮುದಾಯದ ಓರ್ವ ಸರಳ ವ್ಯಕ್ತಿತ್ವದ ಸವಿನಯ ನಡೆ ನುಡಿಯ ಪ್ರತಿಷ್ಠಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕ ಸೇವಾ ವಲಯದಲ್ಲಿ ಲಯನ್ ರಮೇಶ್ ಶೆಟ್ಟಿ ಎಂದು ಗುರುತಿಸಲ್ಪಡುವ ಇವರ ಉದ್ಯಮ ವ್ಯವಹಾರ ಇನ್ನಷ್ಟು ಪ್ರಗತಿ ಕಾಣಲಿ. ಬದುಕಿನಲ್ಲಿ ಆರೋಗ್ಯ ನೆಮ್ಮದಿ ಸಮೃದ್ಧಿ ಇರಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್















































































































