ಜ್ಞಾನವು ಅಹಂಕಾರಕ್ಕೆ ಕಾರಣವಾಗಬಾರದು. ಜ್ಞಾನದೊಂದಿಗೆ ವಿನಯವೂ ಇರಬೇಕು. ಇಲ್ಲವಾದಲ್ಲಿ ಅದು ವಿಷವಾಗಿ ವ್ಯಕ್ತಿ ಮತ್ತು ಸಮಾಜವನ್ನು ನಾಶಮಾಡುತ್ತದೆ. ಇಂದಿನ ಕ್ಷಿಣಿಸುತ್ತಿರುವ ಸಂಬಂಧಗಳ ಮತ್ತು ಯಾಂತ್ರಿಕ ಜೀವನದ ನಡುವೆ ಇಂತಹ ಸಾಹಿತ್ಯ ಕೃತಿಗಳು ಸಮಾಜವನ್ನು ಒಗ್ಗೂಡಿಸುವ ಮತ್ತು ಮೌಲ್ಯಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿವೆ. ಸಾಹಿತ್ಯವು ಸಮಾಜವನ್ನು ತಿದ್ದುವ ಕನ್ನಡಿಯಾಗಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಬದಲಾಗುವ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬ ಜಿಜ್ಞಾಸೆಯಲ್ಲಿರುವುದು ಬೇಸರದ ಸಂಗತಿ. ಕನ್ನಡ ಸಾಹಿತ್ಯದಲ್ಲಿ ವಚನಗಳು ಸಾಮರಸ್ಯದ ಕೊಂಡಿಯಾಗಿವೆ. ಶಿಮುಂಜೆ ಅವರ ನಿತ್ಯ ಆನಂದ ವಚನಗಳು ಅನುಭವದ ಸಾರಗಳಾಗಿವೆ. ಇಂತಹ ಕೃತಿಗಳು ನೈಜ್ಯ ದಾರ್ಶನಿಕ ಚಿಂತೆಗಳ ಚಿಂತನೆಗಳನ್ನು ಒಳಗೊಂಡಿದ್ದು, ಓದುಗರಿಗೆ ಬದುಕಿನ ದಾರಿದೀಪವಾಗಬಲ್ಲದು. ಆದ್ದರಿಂದ ಆತ್ಮದೀಪದ ಬೆಳಕು ಎನ್ನುವ ಕೃತಿಯ ಹೆಸರು ಕೂಡಾ ಅರ್ಥಪೂರ್ಣವಾಗಿದೆ. ಅದು ಭಗವಂತನ ಸಾಕ್ಷಾತ್ಕಾರದ ಹಾದಿಯನ್ನು ಸೂಚಿಸುತ್ತದೆ. ಶಿಮುಂಜೆ ಪರಾರಿ ಅವರು ತಮ್ಮನ್ನು ತಾವು ತಿದ್ದಿಕೊಂಡು ನಂತರ ಸಮಾಜಕ್ಕೆ ಒಳ್ಳೆಯ ವಿಚಾರಗಳನ್ನು ವಚನಗಳ ಮೂಲಕ ನೀಡಿದ್ದಾರೆ. ಆ ಮೂಲಕ ಅವರು ಇತರರಿಗೂ ಮಾದರಿಯಾಗಿದ್ದಾರೆ.
ಸ್ವಯಂ ಪರಿವರ್ತನೆ ಸಮಾಜದ ಬದಲಾವಣೆಗೆ ಮೊದಲ ಮೆಟ್ಟಿಲು. ಆನಂದ ಎನ್ನುವಂಥದ್ದು ಒಂದು ಸ್ಥಿತಿ. ಪಂಚಕೋಶಗಳಾದ ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಪರಿಕಲ್ಪನೆಯಂತೆ ಶಿಮುಂಜೆ ಅವರ ಅನ್ನಮಯದಿಂದ ಆರಂಭಿಸಿ ಆನಂದಮಯವನ್ನು ತಲುಪಿದ್ದಾರೆ. ದಾಸ ಸಾಹಿತ್ಯ ವಚನ ಸಾಹಿತ್ಯಗಳಲ್ಲಿ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಶಿಮುಂಜೆಯವರು ಕೂಡಾ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಅವರ ವಚನಗಳನ್ನು ಜೋಡಿಸಿ ಪುಸ್ತಕ ರೂಪದಲ್ಲಿ ಹೊರತಂದಿರುವ ಕನ್ನಡ ವಿಭಾಗದ ಕೆಲಸ ಅಭಿನಂದನೀಯ ಎಂದು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಅವರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಜುಲೈ 25 ರಂದು ಮುಂಬಯಿ ವಿಶ್ವವಿದ್ಯಾಲಯದ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ ಶಿಮುಂಜೆ ಸಂಸ್ಮರಣೆ, ನಿತ್ಯ ಆನಂದ ವಚನಗಳ ಸಮಗ್ರ ಸಂಪುಟ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿದರು.



ಶಿಮುಂಜೆ ಸಂಸ್ಮರಣೆಯ ಅಂಗವಾಗಿ ನಿತ್ಯ ಆನಂದ ವಚನಗಳ ಮಹತ್ವ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್ ಉಪಾಧ್ಯ ಅವರು ಮಾತನಾಡುತ್ತಾ, ಕವಿ ಕಲಾವಿದರು ನಾಡಿನ ಆಸ್ತಿ. ಸಾಹಿತ್ಯ ನಮ್ಮ ನಿಜವಾದ ಸಂಪತ್ತು. ಶಿಮುಂಜೆ ಅವರು ಮುಂಬಯಿಯಲ್ಲಿ ಹುಟ್ಟಿ ಬೆಳೆದರೂ ತುಳು ಮತ್ತು ಕನ್ನಡ ಭಾಷೆಗಾಗಿ ಅಪಾರ ಸೇವೆ ಸಲ್ಲಿಸಿದ ಸಾಂಸ್ಕೃತಿಕ ನೇತಾರ. ಅವರು ಸರಸ್ವತಿ ಪುತ್ರರಾಗಿ ಎಳವೆಯಿಂದಲೇ ಬರೆಯುವ ಕಾಯಕದಲ್ಲಿ ನಿರತರಾದವರು. ಸದಾನಂದ ಸುವರ್ಣ ಅವರ ಗುಡ್ಡದ ಭೂತದಲ್ಲಿ ಅಭಿನಯಿಸಿದರು. ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ದದ ಕಟೀರನ ಪಾತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಶಿಮುಂಜೆ ಅವರು ನಿತ್ಯಾನಂದ ಭಕ್ತರು. ಅವರ ನಿತ್ಯ ಆನಂದ ವಚನಗಳು ದಾರ್ಶನಿಕ ಚಿಂತನೆಗಳನ್ನು ಸರಳವಾಗಿ ಮನಮುಟ್ಟುವಂತೆ ಮತ್ತು ಪರಿಣಾಮಕಾರಿಯಾಗಿ ತಿಳಿಸುತ್ತವೆ. ಶಿಮುಂಜೆ ಅವರ ವಚನಗಳು ಆಧುನಿಕ ಸಂವೇದನೆಯನ್ನು ಹೊಂದಿದ್ದು, ಬದುಕಿನ ನೈಜತೆಯನ್ನು ಪ್ರತಿಬಿಂಬಿಸುತ್ತವೆ. ವಚನಗಳು ಕೇವಲ ಆಧ್ಯಾತ್ಮಿಕ ಮಾತ್ರವಾಗಿರದೆ ಮನುಷ್ಯನ ಬದುಕು ತಾಳ್ಮೆಯ ಕುರಿತು ಪ್ರೇರಣೆ ನೀಡುವಂತಿದೆ. ಅಂತಹ ಸಮಗ್ರ ವಚನಗಳ ಸಂಪುಟವನ್ನು ಬಿಡುಗಡೆಗೆ ಯೋಗಾನುಯೋಗವೋ ಎಂಬಂತೆ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಗಮಿಸಿರುವುದು ಸಂತೋಷದ ಸಂಗತಿ ಎಂದು ನುಡಿದರು. ಆಧುನಿಕ ಸಂವೇದನೆಗಳನ್ನು ತಮ್ಮ ವಚನಗಳಲ್ಲಿ ಮೂಡಿಸಿದ ಹೆಗ್ಗಳಿಕೆ ಶಿಮುಂಜೆ ಅವರದು. ಒಂದು ರೀತಿಯಲ್ಲಿ ಸ್ಥಿತಪ್ರಜ್ಞ ಸಮಚಿತ್ತದ ವ್ಯಕ್ತಿತ್ವ ಶಿಮುಂಜೆ ಅವರದು ಎಂದು ನಿತ್ಯ ಆನಂದ ವಚನಗಳ ವಿಶ್ಲೇಷಣೆಯನ್ನು ಮಾಡಿದರು.

ಸಾಧ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡುತ್ತಾ , ಶಿಮುಂಜೆ ಅವರನ್ನು ನಾವು ಹತ್ತಿರದಿಂದ ಬಲ್ಲೆವು. ಗುರೂಜಿ ಅವರು ಮುಂಬಯಿಗೆ ಬಂದಾಗಲೆಲ್ಲಾ ಅವರು ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದರು. ಇಂದು ಈ ಕಾರ್ಯಕ್ರಮದಲ್ಲಿ ಅವರ ಸಂಪೂರ್ಣ ವ್ಯಕ್ತಿತ್ವದ ಪರಿಚಯವಾಯಿತು. ಸಂಸ್ಕೃತಿಯ ಜೀವಾಳವೇ ಸಂಸ್ಕಾರ. ಜೀವನದಲ್ಲಿ ಮೂರು ಋಣಗಳಿರುತ್ತವೆ. ದೇವ ಋಣ, ಆಚಾರ್ಯ ಋಣ, ಪಿತೃ ಋಣ. ಈ ಎಲ್ಲಾ ಋಣಗಳಲ್ಲಿ ಪಿತೃ ಋಣವನ್ನು ಸಂದಾಯ ಮಾಡುವುದು ಸಾಧ್ಯವಿಲ್ಲ. ಇಂದು ಶಿಮುಂಜಿ ಅವರ ಮಕ್ಕಳು ಸಾಹಿತ್ಯದ ಪ್ರಕಟಣೆಯ ಮೂಲಕ ಜ್ಞಾನ ಪ್ರಸಾರ ಮಾಡುವ ಮೂಲಕ ಪಿತೃ ಋಣವನ್ನು ತೀರಿಸಿದ್ದಾರೆ. ಉಸಿರು, ಹೆಸರು, ಹಸಿರು ಈ ಎಂಬ ಮೂರು ಅಂಶಗಳಲ್ಲಿ ಉಸಿರು ಇರುವಾಗ ಒಳ್ಳೆಯ ಕಾರ್ಯ ಮಾಡಿ ಹೆಸರು ಮಾಡುವುದು. ಅವರು ಹೋದ ಮೇಲೂ ಹಸಿರಾಗಿರುವುದು ಅವರ ಸಾಹಿತ್ಯ ಕೈಂಕರ್ಯ. ಆ ಕೆಲಸವನ್ನು ಮಾಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಅಭಿನಂದನೆ ಸಲ್ಲಿಸಿದರು.

ನವೋದಯ ಕನ್ನಡ ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಅವರು ಮಾತನಾಡುತ್ತಾ, ಶಿಮುಂಜೆ ಪರಾರಿ ತನ್ನ ತಾಯಿಯ ಮನೆ. ಶಿಮುಂಜೆ ಅವರು ತನ್ನ ಮಾರ್ಗದರ್ಶಕರೂ ಆಗಿದ್ದರು. ನಾನು ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆ ಅವರಿಗಿತ್ತು. ಯೋಗಾನುಯೋಗವೆಂಬಂತೆ ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಸಾಹಿತಿಯಾಗಿ, ಕಲಾವಿದರಾಗಿ, ಸ್ನೇಹಸೇತುವಾಗಿ, ಅನುವಾದಕರಾಗಿ ಹೆಸರಾದ ಶಿಮುಂಜೆ ಅವರು ತಮ್ಮ ಮನೆತನವನ್ನು ಬೆಳಗಿದವರು. ಅವರು ಹೋಟೆಲ್ ಉದ್ಯಮಿಯ ಮಗನಾದರೂ ಅವರನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಿದರು. ಮುಂದೆ ಅವರು ಪದವೀಧರರಾಗಿ ಎಷ್ಟೋ ಜನರಿಗೆ ರಾತ್ರಿ ಶಾಲೆಯಲ್ಲಿ ಉಚಿತವಾಗಿ ಕಲಿಸಿದರು. ಅವರ ಎಲ್ಲಾ ಉತ್ತಮ ಕಾರ್ಯಗಳು ನಮ್ಮ ಕುಟುಂಬಕ್ಕೂ ಹೆಮ್ಮೆ ಎಂದು ಅವರೊಂದಿಗಿನ ಒಡನಾಟದ ಸವಿನೆನಪುಗಳನ್ನು ಸವಿ ನೆನಪುಗಳನ್ನು ತೆರೆದಿಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ, ಶಿಮುಂಜೆ ಪರಾರಿ ಅವರ ಸಾಹಿತ್ಯಿಕ ಕೊಡುಗೆ ಅಪಾರವಾದದ್ದು. ಅವರು ಬರೆದ ನಿತ್ಯ ಆನಂದ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಅವರ ನಂತರ ಅದು ಅಳಿದು ಹೋಗಬಹುದು ಎನ್ನುವ ಭಯ ಇತ್ತು. ಆದರೆ ಅವರ ಮಕ್ಕಳು ಆ ಆಸ್ತಿಯನ್ನು ಸ್ಥಿರವಾಗಿ ಉಳಿಯುವಂತೆ ಮಾಡಿದ್ದಾರೆ. ನಿತ್ಯಾನಂದ ಅವರ ಭಕ್ತರಾಗಿದ್ದ ಶಿಮುಂಜೆ ಅವರ ಸಮಗ್ರ ವಚನಗಳನ್ನು ಬಿಡುಗಡೆಗೊಳಿಸಲು ಗುರುದೇವಾನಂದ ಸ್ವಾಮೀಜಿಯವರು ನಿತ್ಯಾನಂದರ ಅವತಾರವಾಗಿ ಬಂದಂತೆ ಭಾಸವಾಗುತ್ತಿದೆ ಎಂದು ನುಡಿದರು. ಶಿಮುಂಜೆ ಅವರ ಸಹೋದರನ ಮಗಳಾದ ಶೌರಿ ಶೆಟ್ಟಿ ಅವರು ಶಿಮುಂಜೆ ಕುರಿತ ಕವಿತೆ ವಾಚನ ಮಾಡಿದರು.

ಶಿಮುಂಜೆ ಅವರ ಹಿರಿಯ ಪುತ್ರಿ ಅರ್ಚನಾ ಪ್ರಭಾತ್ ಶೆಟ್ಟಿ ಅವರು ಮಾತನಾಡುತ್ತಾ, ನಾವು ನಮ್ಮ ತಂದೆಯಿಂದ ಕಲಿತಾ ಪಾಠವೆಂದರೆ ಸಂಬಂಧಗಳನ್ನು ನಿರ್ವಹಿಸುವ ಕಲೆ. ಅವರು ಸಮಾಜಕ್ಕೆ ಹೆಚ್ಚು ಸಮಯವನ್ನು ಮೀಸಲಾಗಿಟ್ಟಿದ್ದರು. 37 ವರ್ಷಗಳ ಕಾಲ ಚಿಕಾ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಲೇ ವಾರಂತ್ಯಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅವರ ಈ ಕೊಡುಗೆಗಳಲ್ಲಿ ಅಮ್ಮ ಚಂದ್ರಿಕಾ ಶೆಟ್ಟಿ ಅವರ ಪಾತ್ರ ಬಹಳ ದೊಡ್ಡದು. ಈ ಕೃತಿಯನ್ನು ಹೊರ ತರಬೇಕು ಎನ್ನುವ ನಮ್ಮ ಆಸೆಗೆ ಪೂರಕವಾಗಿ ಕಷ್ಟಪಟ್ಟು ಸುಂದರವಾದ ಪುಸ್ತಕ ಸಿದ್ಧಮಾಡಿ ಕೊಟ್ಟ ಡಾ| ಪೂರ್ಣಿಮಾ ಶೆಟ್ಟಿ ಅವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಅದೇ ರೀತಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್ ಉಪಾಧ್ಯ ಅವರು ಪ್ರೀತಿಯಿಂದ ಈ ಪುಸ್ತಕ ಮಾಡಲು ಒಪ್ಪಿಕೊಂಡು ಸಹಕರಿಸಿದ್ದಾರೆ. ಅವರಿಗೂ ನಮ್ಮ ಧನ್ಯವಾದಗಳು ಎಂದು ಸಹಕಾರ, ಪ್ರೋತ್ಸಾಹ ನೀಡಿದವರಿಗೆ ಸಭೆಯಲ್ಲಿ ನೆರೆದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ವೇದಿಕೆಯಲ್ಲಿ ಶಿಮುಂಜೆ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಶೆಟ್ಟಿ, ಕಿರಿಯ ಮಗಳು ಅಪರ್ಣಾ ಅನೂಪ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ ಅವರ ಅಭಿಮಾನಿಗಳು, ಸಾಹಿತ್ಯಾಸ್ತಕರು, ಶಿಮುಂಜೆ ಪರಾರಿ ಕುಟುಂಬಸ್ಥರು, ಕನ್ನಡ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಶಿಮುಂಜೆ ಪರಾರಿ ಅವರ ಆಯ್ದ ವಚನಗಳನ್ನು ಪ್ರಸ್ತುತಪಡಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಶಿಮುಂಜೆ ಅವರ ನಿತ್ಯ ಆನಂದ ವಚನಗಳನ್ನು ಸಂಪಾದಿಸಿ ಕೊಡುವ ಅವಕಾಶವನ್ನು ಒದಗಿಸಿದ ಕನ್ನಡ ವಿಭಾಗಕ್ಕೆ, ಶಿಮುಂಜೆ ಪರಿವಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ಕಾರ್ಯಕ್ರಮ ನಿರೂಪಿಸಿದರು.




















































































































