ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ‘ಸಂಪನ್ನಮ್’ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ, ಆಯುರ್ವೇದವು ಇಂದು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಸುಮಾರು 17 ರಾಷ್ಟ್ರಗಳಿಗೆ ಇದರ ವಿಸ್ತರಣೆ ಆಗಿದ್ದು, 25ಕ್ಕೂ ಹೆಚ್ಚು ಯುರೋಪಿನ ರಾಷ್ಟ್ರಗಳಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆಯುತ್ತಿರುವುದು ಈ ವೈದ್ಯ ಪದ್ಧತಿಯ ಬೆಳವಣಿಗೆಯ ಸೂಚಕವಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ರೂ. 3,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರತ್ಯೇಕ ಆಯುಷ್ ಸಚಿವಾಲಯ ಮತ್ತು ಸಚಿವರ ವ್ಯವಸ್ಥೆಯೂ ಇರುವುದರಿಂದ ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಮಹತ್ವ ಸ್ಪಷ್ಟವಾಗುತ್ತದೆ ಎಂದರು. ಆಯುರ್ವೇದದಲ್ಲಿ ಔಷಧ, ಚಿಕಿತ್ಸಾ ವಿಧಾನ ಹಾಗೂ ಸಂಶೋಧನೆ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಂಡು ಬಂದಿದ್ದು, ವೈದ್ಯರು ನಿರಂತರವಾಗಿ ಹೊಸ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಇತರ ವೈದ್ಯಕೀಯ ಪದ್ಧತಿಗಳ ಬೆಳವಣಿಗೆಯನ್ನೂ ಗಮನಿಸಬೇಕೆಂದು ಅವರು ತಿಳಿಸಿದರು.
ಅಲೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ ಇಂದು ಅತ್ಯಂತ ನಿಖರತೆಯೊಂದಿಗೆ ನಡೆಯುತ್ತಿದೆ. ದಂತ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯೂ ಗಮನಾರ್ಹವಾಗಿದೆ. ಹಿಂದೆ ನಾವು ಹೆಚ್ಚು ಗಮನ ನೀಡದ ಫಿಸಿಯೋಥೆರಪಿ ಇಂದು ಸ್ವತಂತ್ರ ಮತ್ತು ವೈಜ್ಞಾನಿಕ ಚಿಕಿತ್ಸಾ ವಿಭಾಗವಾಗಿ ಬೆಳೆಯುತ್ತಿದೆ. ವಿವಿಧ ವೈದ್ಯಕೀಯ ಪದ್ಧತಿಗಳ ಉತ್ತಮ ಅಂಶಗಳನ್ನು ಪರಸ್ಪರ ಸಂಯೋಜಿಸುವ ಸಮಗ್ರ ವೈದ್ಯಕೀಯ ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಪ್ರಕೃತಿ ಚಿಕಿತ್ಸೆ ಹಾಗೂ ಹೋಮಿಯೋಪಥಿ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳ ಕುರಿತು ಅರಿವು ಹೊಂದಿರುವುದು ವೈದ್ಯರಿಗೆ ಹೆಚ್ಚುವರಿ ಸಾಮರ್ಥ್ಯ ನೀಡುತ್ತದೆ ಎಂದು ಹೇಳಿದರು. ವೈದ್ಯಕೀಯ ಕ್ಷೇತ್ರದಲ್ಲಿ ಕೊಡು-ಕೊಳ್ಳುವ ಮನೋಭಾವ ಅಗತ್ಯವಾಗಿದ್ದು, ಪರಸ್ಪರ ಜ್ಞಾನ ವಿನಿಮಯದ ಮೂಲಕ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ಸಂಕುಚಿತ ದೃಷ್ಟಿಕೋನದಿಂದ ದೂರವಿರಿ. ಆಯುರ್ವೇದದ ಮೂಲ ತತ್ವಗಳನ್ನು ಭದ್ರವಾಗಿ ಉಳಿಸಿಕೊಂಡೇ ವೈದ್ಯಕೀಯ ಸೇವೆ ಸಲ್ಲಿಸಿ. ನಿರಂತರವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಿ. ಪ್ರಾಯೋಗಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡರೆ ವೈದ್ಯಕೀಯ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ, ಪಿಜಿ ಡೀನ್ ಮಂಜುನಾಥ್ ಭಟ್, ಯುಜಿ ಡೀನ್ ಡಾ. ಸ್ವಪ್ನ ಕುಮಾರಿ, ಸಂಯೋಜಕರಾದ ಡಾ ವಿಜಯಲಕ್ಷ್ಮಿ, ಡಾ. ಸುರಭಿ ಕೃಷ್ಣ ಇದ್ದರು. ವಿದ್ಯಾರ್ಥಿಗಳು ಅನುಭವವನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಗೀತಾ ಮಾರ್ಕೆಂಡೇಯ ನಿರೂಪಿಸಿ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ ಶೆಟ್ಟಿ ಸ್ವಾಗತಿಸಿ, ಡಾ. ಸ್ವಪ್ನ ವಂದಿಸಿದರು.




















































































































