

ರಾಜ ಮಹಾರಾಜರ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಸಿಸಲಾಗುತ್ತಿತ್ತು. ಇದೇ ಪ್ರತೀಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವಂತಹ ಈ ಯೋಗಾಭ್ಯಾಸವನ್ನು ಎಲ್ಲರೂ ಮಾಡುತ್ತಿರಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಡಿ ಶೆಟ್ಟಿ ಬಳ್ಕುಂಜೆ ಗುತ್ತುರವರು ಅಭಿಪ್ರಾಯಪಟ್ಟರು. ಅವರು ಜೂನ್ 21 ರಂದು ಮೀರಾ ಭಯಂದರ್ ರೋಡಿನ ಪಯ್ಯಡೆ ರೆಸಿಡೆನ್ಸಿ ಹೊಟೇಲ್ ನ ಸಭಾಂಗಣದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ವಿಶ್ವಯೋಗ ದಿನಾಚರಣೆಯು ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ವರ್ಷಂಪ್ರತಿ ನಡೆಯುವ ಯೋಗ ದಿನಾಚರಣೆ ವಿಶ್ವದಲ್ಲೆಲ್ಲಾ ಪಸರಿಸಬೇಕೆಂಬ ಹಂಬಲದಿಂದ ಇದೀಗ ಪ್ರತಿ ವರ್ಷವೂ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ದಿನಚರಿಯಂತೆ ಮಾಡುತ್ತಿರಬೇಕು. ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯೋಗಾಭ್ಯಾಸವನ್ನು ಮಾಡುತ್ತಿರುವುದರಿಂದ ನಮ್ಮ ಶರೀರವು ಮಾತ್ರವಲ್ಲದೇ ಮನಸ್ಸಿನ ಏಕಾಗ್ರತೆಯ ಸ್ಥಿರತೆಯನ್ನು ಕೂಡಾ ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ. ಮಹಿಳಾ ವಿಭಾಗವು ಇಂದು ನಮ್ಮ ಪ್ರಾದೇಶಿಕ ಸಮಿತಿಯವರೇ ಆದ ಸಂಧ್ಯಾ ಶೆಟ್ಟಿ, ನಳಿನಿ ಶೆಟ್ಟಿ, ಶೋಭಾ ಶೆಟ್ಟಿ ಈ ಮೂರು ಜನ ಯೋಗ ಗುರು ಕಣ್ಮಣಿಯವರನ್ನು ಹೊಂದಿದೆ. ಇದು ನಮಗೆ ಹೆಮ್ಮೆಯ ವಿಷಯ. ಇವರಂತೆ ಎಲ್ಲರೂ ಯೋಗವನ್ನು ಅಭ್ಯಸಿಸುವ ಕ್ರಮವನ್ನು ದಿನಂಪ್ರತಿ ಅಳವಡಿಸಿಕೊಳ್ಳಬೇಕು. ಆರೋಗ್ಯ ಸಂಪನ್ಮೂಲವನ್ನು ವೃದ್ದಿಪಡಿಸಲು ಯೋಗಭ್ಯಾಸವು ಎಲ್ಲರಲ್ಲೂ ದಿನನಿತ್ಯದ ಚೇತನವಾಗಿ ಮೂಡಿ ಬರಲಿ ಎಂದು ಅವರು ಹಾರೈಸಿದರು.



ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ಸ್ ಫೋರಮ್ ಮೀರಾ ಭಾಯಂದರ್ ಇದರ ಕಾರ್ಯಾಧ್ಯಕ್ಷರಾದ ಉದಯ ಎಮ್ ಶೆಟ್ಟಿ ಮಲಾರ ಬೀಡು ಸಂದರ್ಭೋಚಿತವಾಗಿ ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್ ಶೆಟ್ಟಿಯವರು ತನ್ನ ಅನಿಸಿಕೆಯಲ್ಲಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ, ನಮ್ಮ ಮಹಿಳಾ ವಿಭಾಗವು ಸತತವಾಗಿ ಮೂರನೇ ವರ್ಷ ಈ ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ಯೋಗ ದಿನಾಚರಣೆಗೆ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿದರು.
ಪ್ರಾರಂಭದಲ್ಲಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್ ಶೆಟ್ಟಿಯವರು ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್ ಶೆಟ್ಟಿಯವರು ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ವಂದನಾ ಡಿ ಶೆಟ್ಟಿ, ಅಶ್ವಿನಿ ಶೆಟ್ಟಿ, ಅಶೋಕ್ ಶೆಟ್ಟಿ, ಉದಯ ಎಂ ಶೆಟ್ಟಿ ಮಲಾರ ಬೀಡು, ಗುತ್ತಿನಾರ್ ರವೀಂದ್ರ ಡಿ ಶೆಟ್ಟಿ, ವಸಂತಿ ಎಸ್ ಶೆಟ್ಟಿ, ಕಿಶೋರ್ ಶೆಟ್ಟಿ ಕುತ್ಯಾರು, ರಮೇಶ್ ಶೆಟ್ಟಿ ಸಿದ್ದಕಟ್ಟೆ, ಸಂಪತ್ ಬಿ ಶೆಟ್ಟಿ, ಸುಮಂಗಳಾ ಎ ಕಣಂಜಾರು, ಅಮಿತಾ ಕೆ ಶೆಟ್ಟಿ, ನಳಿನಿ ಶೆಟ್ಟಿ, ಸಂಧ್ಯಾ ಡಿ ಶೆಟ್ಟಿ, ಶೋಭಾ ಎಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಅಶ್ವಿನಿ ಶೆಟ್ಟಿಯವರು ನಿರೂಪಿಸಿ, ವಂದಿಸಿದರು.
ಚಿತ್ರ, ವರದಿ : ವೈ ಟಿ ಶೆಟ್ಟಿ ಹೆಜಮಾಡಿ





























































































































