
ಬ್ರಹ್ಮಾವರ ಜೂ. ೨೨: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಯೋಗ ಶಿಕ್ಷಕರಾದ ಬಿ ಕೆ ಪೂರ್ಣೇಶ್ ಶರ್ಮಾರವರು ಆಗಮಿಸಿದ್ದು. ಅವರು ಮಾತನಾಡಿ ವರ್ಷದಲ್ಲಿ ಜೂನ್ ೨೧ ಹಗಲು ಹೆಚ್ಚು ಇರುವ ದಿನವಾಗಿದ್ದು, ಈ ದಿನವನ್ನು ನಾವು “ಅಂತರರಾಷ್ಟ್ರೀಯ ಯೋಗ ದಿನ” ವನ್ನಾಗಿ ಆಚರಿಸುತ್ತೇವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವು ಅಷ್ಟಾಂಗ ಯೋಗಗಳು. ಡಯಾಬಿಟಿಸ್ನಂತಹ ಖಾಯಿಲೆಯ ನಿರ್ಮೂಲನೆಗೆ ದಿನನಿತ್ಯ ಪ್ರಾಣಾಯಾಮ ಮಾಡಬೇಕು. ಯೋಗದಿಂದ ದೊಡ್ಡ ದೊಡ್ಡ ಖಾಯಿಲೆಗಳು ಗುಣಮುಖವಾಗುತ್ತದೆ.


ನಮ್ಮ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾವು ಭೂಮಿಯ ಮೇಲೆ ನೆಮ್ಮದಿಯಿಂದ ಬದುಕಬಹುದೆಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ದಿನನಿತ್ಯ ಜೀವನಕ್ಕೆ ಯೋಗ ಅತ್ಯಗತ್ಯ, ಸಹಪಠ್ಯ ಚಟುವಟಿಕೆಗಳಲ್ಲಿ ಯೋಗ ಅತ್ಯಂತ ಪ್ರಮುಖವಾದ ವಿಷಯವಾಗಿದೆಯೆಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ವಿದ್ಯಾರ್ಥಿಗಳಿಂದ ಯೋಗಾಭ್ಯಾಸದ ಪ್ರತಿಜ್ಞೆಯನ್ನು ಸ್ವೀಕರಿಸಿ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ಶಾಲಾ ವಿದ್ಯಾರ್ಥಿಗಳು ಯೋಗದ ಮಹತ್ವದ ಕುರಿತು ಮಾತನಾಡಿದರು ಮತ್ತು ಯೋಗ ಪ್ರದರ್ಶನ ಮಾಡಿದರು. ಸಂಸ್ಥೆಯ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅತಿಥಿಗಳ ನಿರ್ದೇಶನದಲ್ಲಿ ಯೋಗಾಸನಗಳನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು





























































































































