

ಭಾರತೀಯ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಫೆಡರೇಶನ್ ಜರ್ಮನಿಯಲ್ಲಿ ನಡೆದ ಜರ್ಮನಿ ಓಪನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿದೆ. ಭಾರತೀಯ ತಂಡವು ಒಟ್ಟು ಎಂಟು ಪದಕಗಳನ್ನು ಗೆದ್ದು ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿದೆ. ಈ ಅದ್ಭುತ ಸಾಧನೆಯನ್ನು ಗುರುತಿಸಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ ಅವರು ಭಾರತೀಯ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ತಂಡವನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು. ಕ್ರೀಡಾಪಟುಗಳೊಂದಿಗೆ ನಡೆದ ಸಂವಾದದಲ್ಲಿ ಡಾ. ಮಾಂಡವಿಯ ಅವರು ಭವಿಷ್ಯದ ಸ್ಪರ್ಧೆಗಳಿಗೆ ಶುಭ ಹಾರೈಸಿ ಭಾರತದಲ್ಲಿ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಕ್ರೀಡೆಯ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರದಿಂದ ನಿರಂತರ ಬೆಂಬಲ ದೊರೆಯಲಿದೆ ಎಂದು ಭರವಸೆ ನೀಡಿದರು.


ಭಾರತೀಯ ತಂಡವು ಇದೇ ವರ್ಷ ಸೆಪ್ಟೆಂಬರ್ 17ರಿಂದ 26ರವರೆಗೆ ಗ್ರೀಸ್ ನಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದೆ. 2027 ರಲ್ಲಿ ಏಷ್ಯನ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಭಾರತ ಪ್ರತಿನಿಧೀಕರಿಸಲಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಭಾರತ ಆಯೋಜಿಸಲಿರುವುದಕ್ಕೆ ಮಾಂಡವಿಯ ಸಂತಸ ವ್ಯಕ್ತಪಡಿಸಿ, ಯಶಸ್ವಿ ಆಯೋಜನೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಭಾರತೀಯ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಮತ್ತು ಅವರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವ ವಿಶ್ವಾಸ ವ್ಯಕ್ತವಾಗಿದೆ.





























































































































