


ಮುಂಬಯಿಯ ಖ್ಯಾತ ಹೋಟೆಲು ಉದ್ಯಮಿ ಮಿಜಾರು ಸುರೇಶ್ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯಮಿಯಾಗಿದ್ದರೂ ತನ್ನ ಹುಟ್ಟೂರ ಜನರಿಗೆ ಏನಾದರೊಂದು ಸಹಾಯ ಮಾಡಬೇಕೆನ್ನುವ ತುಡಿತ ಉಳ್ಳವರು. ತುಳುನಾಡ ಸೇನಾ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡು ಈ ಹಿಂದೆ ಮೂಡುಬಿದಿರೆಯಲ್ಲಿ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಮಾಡಿ, ಬಳಿಕ ಮೂಡುಬಿದಿರೆಯಲ್ಲಿ ಕಂಬಳ ಮಾಡಿ ಪ್ರೋತ್ಸಾಹಿಸಿ ಗಮನ ಸೆಳೆದವರು. ಯಾರೂ ಎಷ್ಟಿದ್ದರೂ ಸೇವೆಗೈಯ್ಯುವ ಮನಸ್ಸು ಮಾಡುವುದಿಲ್ಲ. ಆದರೆ ಮಿಜಾರು ಸುರೇಶ್ ಶೆಟ್ಟಿ ಅವರಿಗೆ ತನ್ನೂರಿನ ಮೇಲೆ ಅಭಿಮಾನ ಹಾಗೂ ಬಾಲ್ಯ ಜೀವನದ ಕಷ್ಟದ ದಿನಗಳ ಬಡತನದ ನೆನಪು ಇದೆಲ್ಲವನ್ನೂ ಅರಿತ ಅವರು ತನ್ನ ಸಂಪಾದನೆಯ ಒಂದಿಷ್ಟು ತನ್ನೂರಿನ ಬಡ ವಿದ್ಯಾರ್ಥಿಗಳಿಗಿರಲಿ ಎನ್ನುವ ಸೇವಾ ಮನೋಭಾವದಿಂದ ಒಂದು ಕಾರ್ಯಕ್ರಮ ಹಮ್ಮಿಕೊಂಡು ತನ್ನ ಪ್ರಿಯ ಮಗಳು ಝಾನ್ಸಿಯ ಹುಟ್ಟಿದ ದಿನದಂದು ಸ್ಥಳೀಯ ಶಾಸಕರ ಸಹಿತ ತನ್ನಿಷ್ಟದ ಅತಿಥಿಗಳನ್ನು ಕರೆದು, ತನ್ನ ತಂದೆ ಹರಿಯಪ್ಪ ಶೆಟ್ಟಿ, ತಾಯಿ ಮೀನಾಕ್ಷಿ ಅವರ ಸಮ್ಮುಖದಲ್ಲಿ ಮಿಜಾರು ತೋಡಾರು ಗ್ರಾಮಗಳ ಆರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 1360 ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ ವೆಚ್ಚದ ಪುಸ್ತಕಗಳನ್ನು ಅದರ ಜೊತೆಗೆ ಸ್ಕೂಲ್ ಬ್ಯಾಗ್, ಕೊಡೆಗಳನ್ನು ವಿತರಿಸಿದ್ದಾರೆ.


200 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ ಹತ್ತು ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನೂ ವಿತರಿಸಿ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಮೂಡುಬಿದಿರೆ ಪ್ರೆಸ್ ಕ್ಲಬ್ ನ ನೂತನ ಕಟ್ಟಡಕ್ಕೆ ಒಂದು ಲಕ್ಷ ರೂ ಆರ್ಥಿಕ ಸಹಾಯವನ್ನೂ ನೀಡಿದ್ದಾರೆ. ಹೀಗೆ ಸುರೇಶ್ ಶೆಟ್ಟಿ ಅದೆಷ್ಟೋ ಅಸಹಾಯಕರಿಗೆ ನೆರವಾಗಿದ್ದಾರೆ. ಇದೀಗ ಒಟ್ಟು ಹದಿನೈದು ಲಕ್ಷವನ್ನು ತನ್ನ ಹುಟ್ಟೂರ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಸೇವಾ ಮನೋಭಾವದಲ್ಲಿ ಮಾದರಿಯಾಗಿ ಮೂಡಿ ಬಂದಿದ್ದಾರೆ.
ಚಿತ್ರ, ವರದಿ : ವೈ ಟಿ ಶೆಟ್ಟಿ ಹೆಜಮಾಡಿ





























































































































