


ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಇಲ್ಲಿನ ಗುರುಗಳಾದ ಯು.ಕೆ ಪ್ರವೀಣ್ ಅವರ ಶಿಷ್ಯೆ ರಾಶಿ ಆರ್ ಹೆಗ್ಡೆ ಅವರ ಭರತನಾಟ್ಯ ರಂಗ ಪ್ರವೇಶವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನೆರವೇರಿತು. ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮುಖ್ಯಸ್ಥ ಶರವು ರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ ಅಧ್ಯಕ್ಷತೆ ವಹಿಸಿದ್ದರು. ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇದರ ಪ್ರಾಂಶುಪಾಲೆ ಪ್ರೊ. ಡಾ. ಮಿತ್ರ ಹೆಗ್ಡೆ, ಉಡುಪಿ ಜೀವವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಗಣಪತಿ ಎನ್ ಭಟ್ ಉಪಸ್ಥಿತರಿದ್ದರು. ಭರತನಾಟ್ಯ ಮಾರ್ಗ ಪದ್ಧತಿಯ ನೃತ್ಯಗಳಾದ ಪುಷ್ಪಾಂಜಲಿ, ಜತಿಸ್ವರ, ವರ್ಣಂ, ದೇವಿ ಸ್ತುತಿ, ಪದಂ ಹಾಗೂ ತಿಲ್ಲಾನಗಳನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರದರ್ಶಿಸಿದರು. ಪರಾಶಕ್ತಿಯ ವಿವಿಧ ರೂಪಗಳಾದ ಚಂಡಿ, ಚಾಮುಂಡಿ, ಮಹಿಷಮರ್ದಿನಿ, ಭಗಲ, ಚಿನಮಸ್ಥ, ಕಾಳಿ, ಕಮಲ, ಧೂಮಾವತಿ, ಬೈರವಿ ಮುಂತಾದ ದೇವಿಯರ ಹುಟ್ಟು, ಶತ್ರುಗಳನ್ನು ನಾಶಪಡಿಸಿದ ರೀತಿ ಇದನ್ನೆಲ್ಲಾ ವಿವರಿಸಲಾಗಿತ್ತು.



ನಟುವಾಂಗದಲ್ಲಿ ಗುರುಗಳಾದ ಯು.ಕೆ ಪ್ರವೀಣ್, ಹಾಡುಗಾರಿಕೆಯಲ್ಲಿ ಉಷಾ ಪ್ರವೀಣ್, ಆರಾಧನಾ, ಮೃದಂಗದಲ್ಲಿ ಜಿತೇಶ್ ಎ.ಜಿ ನೀಲೆಶ್ವರಂ, ಪಿಟೀಲಿನಲ್ಲಿ ಶ್ರೀಧರಾಚಾರ್ಯ ಪಾಡಿಗಾರು, ಕೊಳಲಿನಲ್ಲಿ ರಾಜಗೋಪಾಲ್ ಪಿ.ವಿ ಕಾಂಜ್ಞಗಾಡ್, ಖಂಜರದಲ್ಲಿ ವಿ.ಯು.ಪಿ ಶರಣ್ ಸಹಕರಿಸಿದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ರಾಶಿ ಅವರ ಪಾಲಕರಾದ ಮೊಗರುಗುತ್ತು ರಾಜೇಶ್ ಕುಮಾರ್ ಹೆಗ್ಡೆ ಹಾಗೂ ಮೂಡಂಬೈಲು ಶುಭ ಆರ್ ಹೆಗ್ಡೆ ಸ್ವಾಗತಿಸಿದರು. ನೃತ್ಯ ಗುರುಗಳಾದ ವಿದುಷಿ ನಿಶ್ವಿತ ಶರಣ್, ರಾಶಿಯ ಸಹೋದರ ಸಕ್ಷಮ್ ಆರ್ ಹೆಗ್ಡೆ ಉಪಸ್ಥಿತರಿದ್ದರು.





























































































































