

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ರಕ್ತದಾನ, ವಿಪತ್ತು ನಿರ್ವಹಣೆಯಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿರುವ ರೆಡ್ ಕ್ರಾಸ್ ಸಂಸ್ಥೆ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಪ್ರೇರಣೆಯಾಗಿದೆ ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಯೂತ್ ರೆಡ್ ಕ್ರಾಸ್ ಮಂಗಳೂರು ವಿ.ವಿ ಸಹಯೋಗದಲ್ಲಿ ರೆಡ್ ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ರೆಡ್ ಕ್ರಾಸ್ ವಿಚಾರ ಸಂಕಿರಣದಲ್ಲಿ ಸುರತ್ಕಲ್ ಎನ್ಐಟಿಕೆಯ ಸಹ ಪ್ರಾಧ್ಯಾಪಕಿ ಡಾ| ರಶ್ಮಿ ಸುಧೀರ್ ಉಚ್ಚಿಲ್ ಮತ್ತು ಡಿ ಅಡಿಕ್ಷನ್ ಸಮಲೋಚಕಿ ಡಾ| ಕುಸುಮ್ ತಂತ್ರಿ ಡೆಸಾ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ರೆಡ್ ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ ಸಚ್ಚಿದಾನಂದ ರೈ, ಖಜಾಂಚಿ ಗುರುದತ್ ನಾಯಕ್, ನಿರ್ದೇಶಕರಾದ ಡಾ. ಸತೀಶ್ ರಾವ್, ಪಿ.ಬಿ ಹರೀಶ್ ರೈ, ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಯೂತ್ ರೆಡ್ ಕ್ರಾಸ್ ಉಪಸಮಿತಿ ನಿರ್ದೇಶಕಿ ಡಾ. ಸುಮನ ಬಿ ಸ್ವಾಗತಿಸಿದರು. ಮಂಗಳೂರು ವಿವಿ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಡಾ. ಗಾಯತ್ರಿ ವಂದಿಸಿದರು. ವಿದ್ಯಾರ್ಥಿನಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಯೂತ್ ರೆಡ್ ಕ್ರಾಸ್ ವಿಚಾರ ಸಂಕಿರಣದಲ್ಲಿ ನಡೆದ ಯೂತ್ ರೆಡ್ ಕ್ರಾಸ್ ವಿಚಾರ ಮಂಡನೆ ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

























































































































