






ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಾವೂರು ಮುಲ್ಲಕಾಡು ಪರಿಸರದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಊರಿನವರೆಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದ ಸಂಘಟನೆಯಾದ ಮುಲ್ಲಕಾಡು ಫ್ರೆಂಡ್ಸ್ (ರಿ) ತನ್ನ 21 ನೇ ವರ್ಷದ ಯುಗಾದಿ ಉತ್ಸವವನ್ನು ಮೇ 2 ರಂದು ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿ ಇರುವ ಮುಲ್ಲಕಾಡು ಕೇಂದ್ರ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈಯವರು ನೆರವೇರಿಸಿದರು. ಬಳಿಕ ಮಾತನಾಡಿದ ಡಾ. ಆಶಾಜ್ಯೋತಿ ರೈಯವರು, ಅಖಂಡ ಭಾರತದಲ್ಲಿ ಭೂಮಿ ಮೇಲೆ ಮಾನವ ಜನ್ಮ ತಾಳಿರುವುದು ನಮ್ಮೆಲ್ಲರ ಪುಣ್ಯ. ಈ ಶ್ರೇಷ್ಠವಾದ ಜನ್ಮವನ್ನು ನಾವೆಲ್ಲರೂ ಸಾರ್ಥಕ್ಯ ಮಾಡಿಕೊಳ್ಳಬೇಕು. ಆ ಮೂಲಕ ನಾವು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರಸ್ತುತ ಸಮಾಜ ಸಾಮಾಜಿಕ ಪಿಡುಗುಗಳಿಂದ ಹೊರಬರಬೇಕು. ಈಗಿನ ಚಿಕ್ಕ ಮಕ್ಕಳು ಡ್ರಗ್ಸ್ ಗಳ ದಾಸರಾಗಿದ್ದು ಬೇಸರದ ಸಂಗತಿ. ನಾವೆಲ್ಲರೂ ಡ್ರಗ್ಸ್ ಮುಕ್ತ ಸಮಾಜವನ್ನು ನಿರ್ಮಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಮಾತನಾಡಿ, ಸುಚೇತನ್ ಪೂಜಾರಿ ಹಾಗೂ ಮುಲ್ಲಕಾಡು ಫ್ರೆಂಡ್ಸ್ ನ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಶುಭ ಹಾರೈಸಿದರು.










ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಸದಾನಂದ ಪೂಜಾರಿ, ರಾಜಶೇಖರ್ ಕೋಟ್ಯಾನ್, ರಾಘವೇಂದ್ರ ಉಡುಪ, ರಾಘವೇಂದ್ರ ಬೈಂದೂರು, ಲೋಲಕ್ಷಿ ಫೆರ್ನಾಂಡಿಸ್, ವಿದ್ಯಾ ಸಂಪತ್ ಕರ್ಕೇರ ಹಾಗೂ ಶಿಲ್ಪಾ ರಂಜಿತ್ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಿದರು. ಅಶಕ್ತರಿಗೆ ಸಹಾಯಧನ, ಮಕ್ಕಳಿಗೆ ಪ್ರೋತ್ಸಾಹ ಧನ, ಪುಸ್ತಕ ವಿತರಣೆ, ಮುಲ್ಲಕಾಡು ಪರಿಸರದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್ ಪಡೆದ 3 ವಿದ್ಯಾರ್ಥಿಗಳಿಗೆ ಹಾಗೂ 10 ಶಾಲಾ ಶಿಕ್ಷಕಿಯರಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಕಾವೂರು ಠಾಣೆಯ ರಾಘವೇಂದ್ರ ಬೈಂದೂರು, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಗುತ್ತಿಗೆದಾರ ರಾಜಶೇಖರ್ ಕೋಟ್ಯಾನ್, ಸಮಾಜಸೇವಕ ಅರ್ಜುನ್ ಭಂಡಾರ್ಕರ್, ದೀಪಕ್ ಕೆ ಪೂಜಾರಿ, ಬಬಿತ ರವೀಂದ್ರ, ಪ್ರಶಾಂತ್ ಪೂಜಾರಿ, ಪ್ರತೀಕ್ ಪೂಜಾರಿ, ರಾಘವೇಂದ್ರ ಉಡುಪ, ಶ್ರೀಮತಿ ವಿದ್ಯಾ ಸಂಪತ್ ಕರ್ಕೇರ, ಶ್ರೀಮತಿ ಶಿಲ್ಪಾ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು. ಪರಿಸರದ ಪ್ರತಿಭೆಗಳಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಸುರತ್ಕಲ್ ನ ಡಿ ಟ್ರಿಕ್ಸ್ ಡಾನ್ಸ್ ಕ್ರೂ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಕೊನೆಗೆ ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನದ ಚೈತನ್ಯ ಕಲಾವಿದರು ಬೈಲೂರು ತಂಡದವರಿಂದ ‘ರಾಘು ಮಾಸ್ಟ್ರು’ ಹಾಸ್ಯಮಯ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು. ಸಂಘಟಕ ಹಾಗೂ ಮುಲ್ಲಕಾಡು ಫ್ರೆಂಡ್ಸ್ ಅಧ್ಯಕ್ಷ ಸುಚೇತನ್ ಜಿ ಕಾವೂರು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಡಾ| ಪ್ರಿಯ ಹರೀಶ್ ನಿರೂಪಿಸಿದರು.

























































































































