
ಡಾ| ಕನ್ಯಾನ ಸದಾಶಿವ ಶೆಟ್ಟಿಯವರ ಜತೆಯಲ್ಲಿ ಚಿತ್ರ ತಯಾರಿಕೆಯ ಸಾಹಸಕ್ಕಿಳಿದಿರುವ ಕರಾವಳಿ ಕರ್ನಾಟಕದ ಪಡುಬಿದ್ರಿಯ ಹುಟ್ಟು ಪ್ರತಿಭೆ, ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಗುರು ಹೆಗ್ಡೆಯವರು ಮುಂದೆ ಚಿತ್ರ ನಿರ್ಮಾಣದಲ್ಲೂ ಇನ್ನಷ್ಟು ಮಿಂಚಲಿ ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ದೇಗುಲದ ಬ್ರಹ್ಮಕಲಶೋತ್ಸವದಲ್ಲಿ ವಿಜಯಪ್ರಕಾಶ್ ಸಂಗೀತ ರಸಸಂಜೆಯ ಕಾರ್ಯಕ್ರಮದಲ್ಲಿ ‘ಪಂಚರಂಗಿ ಫಿಲಂಸ್’ ಸಂಸ್ಥೆಯಿಂದ ಡಾ| ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಾಣದಲ್ಲಿ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡು ಬಿಡುಗಡೆಯ ಹಂತದಲ್ಲಿರುವ ಕನ್ನಡ ಚಲನಚಿತ್ರ ‘ಅಮರ್ಥ’ದ ಲಿರಿಕಲ್ ವೀಡಿಯೋ ಬಿಡುಗಡೆ ಸಂದರ್ಭ ಮಾತನಾಡಿದರು.


ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಶ್ರೀನಗರ್ ಕಿಟ್ಟಿ, ಮೇಘನಾ ರಾಜ್, ಗುರು ಹೆಗ್ಡೆ, ಮಂಜು ಭಾಷಿಣಿ, ಉಷಾ ಭಂಡಾರಿ, ಹರೀಶ್ ಹಿರಿಯೂರು ಅವರೊಂದಿಗೆ ಕರ್ನಾಟಕ ಕರಾವಳಿಯ ಪ್ರಮುಖ ಕಲಾವಿದರು, ತಂತ್ರಜ್ಞರು ಭಾಗಿಗಳಾಗಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರೇ ಹಾಡಿರುವ ಲಿರಿಕಲ್ ವೀಡಿಯೋವನ್ನು ಸ್ವತಃ ವಿಜಯಪ್ರಕಾಶ್ ಬಿಡುಗಡೆಗೊಳಿಸಿದರು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ವೈ.ಎನ್ ಶೆಟ್ಟಿ, ಸಹ ಸಂಚಾಲಕ ನಟರಾಜ್ ಪಿ.ಎಸ್, ಯಶೋದಾ ಪೂಜಾರಿ, ಚಿತ್ರನಟ ಪಡುಬಿದ್ರಿ ಗುರು ಹೆಗ್ಡೆ ಮತ್ತಿತರರಿದ್ದರು.

























































































































