

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಯಡಾಡಿ ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ರಾಜ್ಯಮಟ್ಟದಲ್ಲಿ 5ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ಒಟ್ಟು 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿರುವ ಸಮೀಕ್ಷಾ, ಶಾಲೆಯ ಹಾಗೂ ಕುಂದಾಪುರ ತಾಲೂಕಿನ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿದ್ದಾಳೆ. ಈ ಮಹತ್ತರ ಸಾಧನೆಯನ್ನು ಗುರುತಿಸಿರುವ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿನಿಗೆ 50,000 ರೂ. ನಗದು ಬಹುಮಾನ ಘೋಷಿಸಿ ಗೌರವಿಸಿದೆ.



ತನ್ನ ಸಾಧನೆಯ ಕುರಿತು ಸಂತಸ ಹಂಚಿಕೊಂಡಿರುವ ಸಮೀಕ್ಷಾ, ‘ನಾನು 7ನೇ ತರಗತಿಯಿಂದ ವಿದ್ಯಾರಣ್ಯ ಶಾಲೆಯಲ್ಲಿ ಕಲಿಯುತ್ತಿದ್ದೇನೆ. ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ನೀಡಿದ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ನನ್ನ ಈ ಯಶಸ್ಸಿಗೆ ಮುಖ್ಯ ಕಾರಣ. ನಮ್ಮ ಶಾಲೆಯಲ್ಲಿ 6ನೇ ತರಗತಿಯಿಂದಲೇ ನೀಡಲಾಗುವ ಐಐಟಿ -ನೀಟ್ (IIT-NEET) ಫೌಂಡೇಶನ್ ಕೋರ್ಸ್ ನನಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಲು ಬಹಳ ಸಹಕಾರಿಯಾಯಿತು’ ಎಂದು ತಿಳಿಸಿದ್ದಾಳೆ. ಸಮೀಕ್ಷಾ ತನ್ನ ಮುಂದಿನ ಪದವಿಪೂರ್ವ ಶಿಕ್ಷಣಕ್ಕಾಗಿ (PUC) ಕುಂದಾಪುರದ ಸುಜ್ಞಾನ ಪದವಿಪೂರ್ವ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ ಹಾಗೂ ಬೋಧಕ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

























































































































