
ಜ್ಞಾನಸುಧಾದಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಇದೀಗ ತನ್ನೂರಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮಹತ್ಕಾರ್ಯಕ್ಕೆ ಮುಂದಾಗಿರುವುದು ಶ್ರೇಷ್ಠ ಕಾರ್ಯವೆಂದು ಮಾಜಿ ಮುಖ್ಯಮಂತ್ರಿ ಡಾ| ಎಂ ವೀರಪ್ಪ ಮೊಯಿಲಿ ಹೇಳಿದರು. ಅವರು ಏಪ್ರಿಲ್ 14 ರಂದು ಅಜೆಕಾರು ಜ್ಞಾನಸುಧಾ ಪಿ.ಯು ಕಾಲೇಜು ಲೋಕಾರ್ಪಣೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತರಾಗದೆ ಜ್ಞಾನ ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಸಾಧನೆ ತೋರಿ ಕೇವಲ ರಾಜ್ಯ, ದೇಶಕ್ಕೆ ಸೀಮಿತವಾಗದೇ ಇಡೀ ಜಗತ್ತಿಗೆ ಜ್ಞಾನಸುಧಾದ ಸುಗಂಧವನ್ನು ಪಸರಿಸಿದ್ದಾರೆ. ಇದು ಕಾರ್ಕಳಕ್ಕೆ ಹೆಮ್ಮೆ. ಸರಿಯಾದ ಅವಕಾಶ ಸಿಕ್ಕರೆ ಪ್ರತಿಯೊಬ್ಬ ಮಗುವೂ ಬುದ್ಧಿವಂತನಾಗಿ ಬೆಳೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಾಜದಿಂದ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು ಎಂದು ಮೊಯಿಲಿಯವರು ಹೇಳಿದರು.


ಗಣಿತದಲ್ಲಿ ಸಂಶೋಧನೆ ಮಾಡುವ ಹಂಬಲ ವ್ಯಕ್ತಪಡಿಸಿದ ಜ್ಞಾನಸುಧಾದ ವಿದ್ಯಾರ್ಥಿಯನ್ನು ಮೊಯಿಲಿ ಪ್ರಶಂಸಿಸಿದರು. ಇಂಜಿನಿಯರಿಂಗ್ನಂತಹ ಸಾಂಪ್ರದಾಯಿಕ ವೃತ್ತಿಗಳ ಆಚೆಗೂ ಸಂಶೋಧನಾ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡುವಂತಹ ವೇದಿಕೆಯನ್ನು ಡಾ| ಸುಧಾಕರ್ ಶೆಟ್ಟಿ ಅವರು ತಮ್ಮ ಸಂಸ್ಥೆಗಳ ಮೂಲಕ ಸೃಷ್ಟಿಸಿದ್ದಾರೆ ಎಂದು ಮೊಯಿಲಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಡಾ. ಎಂ ಮೋಹನ್ ಆಳ್ವ, ವಿಶಾಲ್ ಹೆಗ್ಡೆ, ಕಾರ್ಕಳ ಶಾಸಕರಾದ ವಿ ಸುನೀಲ್ ಕುಮಾರ್ ಮತ್ತು ಶಿವರಾಮ ಶೆಟ್ಟಿ ಅಜೆಕಾರು ಉಪಸ್ಥಿತರಿದ್ದರು.

























































































































