
ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕಳೆದ ಮೂರು ವರ್ಷದ ನಮ್ಮ ಶ್ರಮ ಮತ್ತು ಸಾಧನೆಗಳನ್ನು ಸ್ಮರಿಸುವ ಅರ್ಥಪೂರ್ಣ ವೇದಿಕೆಯಾಗಿದೆ. ನಮ್ಮ ಸಮಿತಿಯ ಎಲ್ಲಾ ಸದಸ್ಯರ ಸಮರ್ಪಣೆ ಮತ್ತು ತಂಡದ ಒಗ್ಗಟ್ಟು ನಮಗೆ ಕ್ರೀಡೆ ಹಾಗೂ ಮತ್ತಿತರ ಎಲ್ಲಾ ವಿಭಾಗಗಳಲ್ಲಿ ಯಶಸ್ಸು ಸಿಗಲು ಸಾಧ್ಯವಾಯಿತು. ಪ್ರತಿಯೊಬ್ಬರ ಸಹಕಾರದಿಂದಲೇ ನಾವು ಈ ಮಟ್ಟದ ಯಶಸ್ಸನ್ನು ಸಾಧಿಸಿದ್ದೇವೆ. ನಮ್ಮ ಯುವ ವಿಭಾಗ, ಮಹಿಳಾ ವಿಭಾಗ ಸದಾ ಕ್ರಿಯಾಶೀಲವಾಗಿದೆ. ನಮ್ಮ ಸಂಸ್ಥೆಯಲ್ಲಿ ದೊಡ್ಡ ದೊಡ್ಡ ಉದ್ಯಮಿಗಳ, ಸಮಾಜ ಸೇವಕರ ಸಂಪೂರ್ಣ ಸಹಕಾರ ಸಿಗುತ್ತಿರುವುದರಿಂದ ನಮ್ಮ ಸಂಸ್ಥೆ ಎತ್ತರೆತ್ತರಕ್ಕೆ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಸಾಧಿಸಲು ನಾವು ಇದೇ ರೀತಿಯ ಏಕತೆ, ನಿಷ್ಠೆ ಮತ್ತು ಶ್ರದ್ಧೆಯನ್ನು ಮುಂದುವರಿಸಬೇಕು ಎಂದು ಬಂಟರ ಸಂಘ ಮುಂಬಯಿಯ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು. ಅವರು ಏಪ್ರಿಲ್ 3ರಂದು ಸಾಕಿವಿಹಾರ್ ರೋಡ್ ವಿಂಡ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನದಲ್ಲಿ ಮಾತನಾಡುತ್ತಾ, ಈ ಸ್ನೇಹ ಸಮ್ಮಿಲನವು ನಾವು ಬಂಟರ ಸಂಘದಿಂದ ಬೆಸ್ಟ್ ರೀಜನ್ ಪ್ರಶಸ್ತಿ ಪುರಸ್ಕೃತರಾದ ಹಾಗೂ ಕ್ರೀಡೆಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಅತೀ ಹೆಚ್ಚು ಅಂಕ ಗಳಿಸಿದ ಸಂತಸದ ಕ್ಷಣಗಳ ಸಂಭ್ರಮಾಚರಣೆಯಲ್ಲಿ ಇದ್ದೇವೆ. ಇದು ಪರಸ್ಪರ ಬಾಂಧವ್ಯವನ್ನು ಬಲಪಡಿಸಿ, ಹೊಸ ಉತ್ಸಾಹದೊಂದಿಗೆ ಮುಂದುವರಿಯಲು ಸಹಾಯ ಮಾಡುತ್ತದೆ ಎಂದು ನುಡಿದು
ಈ ಸಾಧನೆಗಳ ಹಿಂದೆ ಇರುವ ಎಲ್ಲರ ಶ್ರಮವನ್ನು ಕೊಂಡಾಡಿದರು.


ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಈ ಪ್ರಾದೇಶಿಕ ಸಮಿತಿ ಎಲ್ಲಾ ಸದಸ್ಯರು ಸಂಘದ ಅಭಿವೃದ್ಧಿ ಕಾರ್ಯದಲ್ಲಿ ಸದಾ ಸ್ಪಂದಿಸುತ್ತಿದ್ದಾರೆ. ಕ್ರಿಯಾಶೀಲ ಕಾರ್ಯಕ್ರಮದ ಮೂಲಕ ಪ್ರಾದೇಶಿಕ ಸಮಿತಿ ಬಲಾಢ್ಯಗೊಂಡಿದೆ ಎಂದರು. ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ ಅವರು ಮಾತನಾಡುತ್ತಾ, ಈ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷನಾಗಿ ಆರಂಭವನ್ನು ಅದ್ದೂರಿಯಾಗಿ ಮಾಡಿದ್ದೆವು. ಆ ಅಬ್ಬರ, ಆಡಂಬರ ಅನಂತರದ ಎಲ್ಲಾ ಕಾರ್ಯಾಧ್ಯಕ್ಷರು ಮುಂದುವರೆಸಿಕೊಂಡು ಬಂದಿರುವುದರಿಂದ ಈ ಸಮಿತಿಗೆ ಸೋಲೆಂಬುವುದಿಲ್ಲ ಎಂದು ನುಡಿದು ಶುಭ ಹಾರೈಸಿದರು. ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕೆ ಶೆಟ್ಟಿ ಮಾತನಾಡುತ್ತಾ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯವೈಖರಿಯನ್ನು ಮನದಾಳದಿಂದ ಶ್ಲಾಘಿಸಿದರು. ಸಮಿತಿಯು ಸಮಾಜಮುಖಿ ಚಟುವಟಿಕೆಗಳನ್ನು ಸತತವಾಗಿ ಕೈಗೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.
ಬಂಟರ ಸಂಘದ ಸಂಚಾಲಕರಾದ ರವೀಂದ್ರನಾಥ ಎಂ ಭಂಡಾರಿ ಮಾತನಾಡಿ, ಈ ಸಮಿತಿಯಲ್ಲಿ ಎಲ್ಲರೂ ಪ್ರತಿಭಾವಂತರು. ಮಹಿಳಾ ವಿಭಾಗದ ಸಕ್ರಿಯ ಭಾಗವಹಿಸುವಿಕೆ, ಯುವ ಜನರ ಉತ್ಸಾಹಭರಿತ ಸೇವಾಭಾವನೆ ಹಾಗೂ ಸದಸ್ಯರ ಒಗ್ಗಟ್ಟಿನಿಂದ ಈ ಪ್ರಾದೇಶೀಕ ಸಮಿತಿ ಮಾದರಿ ಸಮಿತಿಯಾಗಿ ಹೊರಹೊಮ್ಮಿದೆ ಎಂದ ಅವರು ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಮನೋಭಾವ ಮತ್ತು ಸಂಘಟಿತ ಪ್ರಯತ್ನಗಳು ಮುಂದುವರಿಯಲಿ ಎಂದು ಹಾರೈಸಿದರು. ಬಂಟರ ಸಂಘದ ಮಹಿಳಾ ವಿಭಾಗದ ಪರವಾಗಿ ಜೊತೆ ಕೋಶಾಧಿಕಾರಿ ವನಿತಾ ನೋಂಡ ಅವರು ಮಾತನಾಡಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿರುವುದು ನನಗೆ ಅಪಾರ ಸಂತೋಷ ನೀಡಿದೆ. ಮಹಿಳೆಯರು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದನ್ನು ಒತ್ತಿ ಹೇಳಿದ ಅವರು, ಪುರುಷರು ಮಹಿಳೆಯರಿಗೆ ಇನ್ನಷ್ಟು ಪ್ರೋತ್ಸಾಹ, ಬೆಂಬಲ ಮತ್ತು ಅವಕಾಶಗಳನ್ನು ನೀಡಬೇಕು ಎಂದರು.
ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಮಾತನಾಡಿ, ನಮ್ಮ ಸಮಿತಿಯಲ್ಲಿ ಯಾವ ಕಾರ್ಯಕ್ರಮವಾದರೂ ನಾವು ಎಲ್ಲರೂ ಒಂದಾಗಿ ಕೈಜೋಡಿಸಿ ಯಶಸ್ವಿಯಾಗಿ ನಡೆಸುತ್ತೇವೆ ಎಂದು ಹೇಳಿದರು. ಸಮಿತಿಯ ಸದಸ್ಯರ ಮಧ್ಯೆ ಇರುವ ಪರಸ್ಪರ ಸಹಕಾರ, ಸ್ನೇಹಭಾವ ಮತ್ತು ಸಂಘಟಿತ ಮನೋಭಾವವೇ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನ ಮೂಲವೆಂದು ಅವರು ತಿಳಿಸಿದರು. ಮಹಿಳಾ ವಿಭಾಗದ ಸಕ್ರಿಯ ಭಾಗವಹಿಸುವಿಕೆ ಮತ್ತು ತ್ಯಾಗಭಾವದಿಂದ ಅನೇಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿವೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ಅದ್ವಿತ್ ಪೂಂಜಾ ಯುವ ವಿಭಾಗಕ್ಕೆ ಅಂಧೇರಿ ಬಾಂದ್ರಾ ಸದಾ ಪ್ರೋತ್ಸಾಹಿಸುತ್ತಾ ಬಂದಿದೆ. ನಮ್ಮಿಂದಾಗುವ ಎಲ್ಲಾ ಕೆಲಸಗಳನ್ನು ಪ್ರೀತಿಯಿಂದ ಮಾಡುವೆವು ಎಂದು ನುಡಿದರು. ವೇದಿಕೆಯಲ್ಲಿ ಸಂಚಾಲಕ ರವೀಂದ್ರ ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾದ ಯಶವಂತ ಶೆಟ್ಟಿ, ರಮೇಶ್ ರೈ, ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ, ನ್ಯಾಯವಾದಿ ಆರ್.ಜಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಂಟರ ಸಂಘದ ಕ್ರೀಡೋತ್ಸವದಲ್ಲಿ ವಿಜೇತರಾದ ಎಲ್ಲಾ ಕ್ರೀಡಾಳುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿಶೇಷ ಸಾಧನೆಗಾಗಿ ಕಿಕ್ ಬಾಕ್ಸಿಂಗ್ ಚಿನ್ನ ವಿಜೇತೆ ಕೃತಿಕಾ ಶೆಟ್ಟಿ, ಆಕಾಂಕ್ಷದ ಮಿಸ್ಟರ್ ಬಂಟ್ಸ್ ಸ್ಪರ್ಧೆಯ ಪ್ರಥಮ ರನ್ನರ್ ಮಿಹಿರ್ ಶೆಟ್ಟಿ ಹಾಗೂ ಸಮಾಜದಲ್ಲಿ ಪ್ರಾಮಾಣಿಕತೆ ಮೆರೆದ ವಿದ್ಯಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಅವರನ್ನು ಬೆಸ್ಟ್ ಡೋನರ್ ಎಂದು ಘೋಷಿಸಲಾಯಿತು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಅಪ್ಪಣ್ಣ ಶೆಟ್ಟಿ, ಅಡ್ವೋಕೇಟ್ ಪ್ರಭಾಕರ ಶೆಟ್ಟಿ, ಶಂಕರ್ ಶೆಟ್ಟಿ (ರೋನಕ್), ಕೃಷ್ಣ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಅಶೋಕ್ ಶೆಟ್ಟಿ, ಪೊವಾಯಿ ಕನ್ನಡ ಸಂಘದ ಅಧ್ಯಕ್ಷರಾದ ಸಂದೇಶ ಶೆಟ್ಟಿ, ಪ್ರಸಾದ್ ಶೆಟ್ಟಿ, ಕಾರ್ನಾಡ್ ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಅವರನ್ನು ಗೌರವಿಸಲಾಯಿತು. ಲಕ್ಷ್ಮಣ ಶೆಟ್ಟಿ ಅವರ ಮುಖೇನ ವಿಂಡ್ ಬ್ಯಾಂಕ್ವೆಟ್ ಹಾಲ್ ನ ಸಭಾಂಗಣವನ್ನು ಲೋಹಿತ್ ಶೆಟ್ಟಿ ಅವರು ಉಚಿತವಾಗಿ ನೀಡಿದ್ದು ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಮಹಿಳಾ ವಿಭಾಗದ ಸಂಚಾಲಕಿ ವಜ್ರಾಕ್ಷಿ ಪೂಂಜಾ, ಸಾಂಸ್ಕೃತಿಕ ಸಮಿತಿಯ ಅನುಸೂಯ ಶೆಟ್ಟಿ, ಕಾರ್ಯದರ್ಶಿ ವೃಕ್ಷಾ ಭಂಡಾರಿ, ಕೋಶಾಧಿಕಾರಿ ಪ್ರಮಿಳಾ ಆರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಎಸ್ ಶೆಟ್ಟಿ, ಕೋಶಾಧಿಕಾರಿ ಮಮತಾ ಶೆಟ್ಟಿ, ಕ್ರೀಡಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ದೇವಿಕಾ ಶೆಟ್ಟಿ, ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೆಸರಾಂತ ಗಾಯಕ ವಿಜಯ್ ಶೆಟ್ಟಿ ಮೂಡುಬೆಳ್ಳೆ ಅವರಿಂದ ಗೀತಗುಂಜನ ಕಾರ್ಯಕ್ರಮ ಹಾಗೂ ಸದಸ್ಯರ ಮಕ್ಕಳಿಂದ ನೃತ್ಯ ನಡೆಯಿತು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ನಂತರ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಚಿತ್ರ, ವರದಿ : ದಿನೇಶ್ ಕುಲಾಲ್

























































































































