
ಬೆಂಗಳೂರಿನಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ )2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ಶೋಷಿತ ಸಮುದಾಯದ ಕುರಿತ ಅತ್ಯುತ್ತಮ ವರದಿಗೆ ನೀಡಲಾಗುವ ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿಗೆ ವಿಜಯವಾಣಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯ ಉಪ ಸಂಪಾದಕ ರಾಜೇಶ್ ಶೆಟ್ಟಿ ದೋಟ ಭಾಜನರಾಗಿದ್ದಾರೆ. ಬೀದರ್ನಲ್ಲಿ ಏಪ್ರಿಲ್ 11 ಮತ್ತು 12ರಂದು ನಡೆಯಲಿರುವ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ವಾಮದಪದವು ನಿವಾಸಿಯಾಗಿರುವ ರಾಜೇಶ್ ಶೆಟ್ಟಿ ದೋಟ ಅವರು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2024ನೇ ಸಾಲಿನ ಪ್ರತಿಷ್ಠಿತ ಪ.ಗೋ (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ‘ಮುಗದಾರಗೆ’ ಎಂಬ ಕವನ ಸಂಕಲನಕ್ಕೆ 2022ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಅವರಿಗೆ ಸಂದಿದೆ.



























































































































