
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ಕಣ್ಣಂಗಾರು ಕಮಲಾ ನಿವಾಸದ ಯೋಗೀಶ್ ಟಿ ಶೆಟ್ಟಿಯವರು ಮೂಲತಃ ಹೆಜಮಾಡಿ ಪಡುಮನೆ ತಬುರ ಶೆಟ್ಟಿ ಹಾಗೂ ಕರ್ನಿರೆ ಹೊಸಮನೆ ಕಮಲಾ ಶೆಟ್ಟಿ ದಂಪತಿಯವರ ಮೂರು ಜನ ಗಂಡು ಮಕ್ಕಳಲ್ಲಿ ಕೊನೆಯ ಸುಪುತ್ರರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೆಜಮಾಡಿ ಪ್ರೈಮರಿ ಸ್ಕೂಲ್, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಹೆಜಮಾಡಿ ಹೈಯರ್ ಸೆಕೆಂಡರಿ ಸ್ಕೂಲಿನಲ್ಲಿ ಗೈದರು. ವಾಣಿಜ್ಯ ಪದವಿಯನ್ನು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಶಾಲಾ ಕಾಲೇಜಿನಲ್ಲಿ ಇರುವಾಗಲೇ ಎಲ್ಲಾ ಆಟೋಟಗಳಲ್ಲಿ ಭಾಗವಹಿಸಿ ಒರ್ವ ಉತ್ತಮ ಕ್ರೀಡಾಪಟುವಾಗಿದ್ದರು. ಬಾಲ್ಯದಿಂದಲೇ ಯಕ್ಷಗಾನ, ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿ ಅನೇಕ ಬಹುಮಾನಗಳನ್ನು ಪಡೆದವರಾಗಿದ್ದಾರೆ. ವಿಚಾರ ಸಂಕೀರಣ, ಭಾಷಣ, ಕವಿಗೋಷ್ಠಿ, ಪ್ರಬಂಧ ಸ್ಪರ್ಧೆ ಇಂತಹ ಅನೇಕ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕವಾಗಿ ಸ್ಪರ್ಧಿಸಿ ಹಲವಾರು ಬಹುಮಾನಗಳ ಸರಮಾಲೆಯನ್ನು ಗಳಿಸಿದ್ದಾರೆ. ಹೈಸ್ಕೂಲ್ ನಲ್ಲಿ ಕಲಿಯುತ್ತಿದ್ದಾಗ ಹೈಸ್ಕೂಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಸ್ಪರ್ಧಿಸುವ ಅವಕಾಶ ಸಿಕ್ಕಿದಾಗ ಯೋಗೀಶ್ ರವರ ಹೆಸರು ವೈ.ಟಿ ಶೆಟ್ಟಿ ಎಂಬ ನಾಮಾಂಕಿತದೊಂದಿಗೆ ಇಂದಿನವರೆಗೂ ವೈ.ಟಿ ಎಂಬ ಹೆಸರಿನಲ್ಲಿ ಪ್ರಚಲಿತರಾದರು.

1984 ರಲ್ಲಿ ಮುಂಬಯಿಗೆ ಆಗಮಿಸಿದ ವೈ.ಟಿ ಶೆಟ್ಟಿಯವರು ಬೆರಳಚ್ಚು (ಕನ್ನಡ -ಇಂಗ್ಲಿಷ್) ಟೈಪಿಂಗ್ ನಲ್ಲಿ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಉತ್ತಮ ಅಂಕಗಳನ್ನು (Rank) ಪಡೆದವರಾಗಿದ್ದಾರೆ. ಮುಂಬಯಿಯಲ್ಲಿ ಒಂದು ಕಂಪನಿಯಲ್ಲಿ ಟೈಪಿಸ್ಟ್ ಆಗಿ ಮುಂದೊತ್ತಿ ಬಂದು ಹೊಟೇಲ್ ಉದ್ಯಮದೊಂದಿಗೆ ವಸಾಯಿಯಲ್ಲಿ ಕರ್ನಾಟಕ ಸಂಘ, ಮೀರಾರೋಡಿನಲ್ಲಿ ತುಳುನಾಡ ಸಮಾಜ ಎಂಬಿತ್ಯಾದಿ ಕೆಲವು ಸಂಘ ಸಂಸ್ಥೆಗಳ ಸ್ಥಾಪನೆಗೆ ಕಾರಣೀಕರ್ತರು. 1992 ರಲ್ಲಿ ಮುಂಬಯಿಯ ಹೆಸರಾಂತ ದಿನ ಪತ್ರಿಕೆಯಾದ ಕರ್ನಾಟಕ ಮಲ್ಲದ ಪ್ರಾರಂಭಕ್ಕೆ ತನ್ನನ್ನು ಕೈ ಬೀಸಿ ಕರೆದಾಗ, ಈ ಮೊದಲೇ ಪತ್ರಿಕೆಗಳ ವ್ಯಾಮೋಹಿತರಾದ ವೈ.ಟಿ ಶೆಟ್ಟರು ಪತ್ರಿಕೆಯನ್ನು ಹುಟ್ಟು ಹಾಕುವಲ್ಲಿ ಅಂದು ಪತ್ರಿಕೆಯ ಮಾಲಕರಾದ ದಿ. ಮಲ್ಲಿಕಾರ್ಜುನರೊಂದಿಗೆ ಸೇರಿದರು. ಆದರೆ ದಿನ ಕಳೆಯುವಷ್ಟರಲ್ಲಿ ಮಲ್ಲಿಕಾರ್ಜುನರು ಪತ್ರಿಕೆಯನ್ನು ನಿಲ್ಲಿಸುವ ಸಮಯದಲ್ಲಿ ಪತ್ರಿಕೆಗೆ ಬೆನ್ನೆಲೆಬು ಆಗಿ ನಿಂತು ದಿನರಾತ್ರಿ ಪತ್ರಿಕೆಯ ಉಳಿವಿಗಾಗಿ ಶ್ರಮಿಸಿ, ಪ್ರಸಾರ ಸಂಖ್ಯೆ, ಅರ್ಥಿಕ ಸದೃಡತೆ ಮಾತ್ರವಲ್ಲದೆ ಪತ್ರಿಕೆಯು ಲಾಭದಾಯಕವಾಗಿ ಮುನ್ನಡೆದದ್ದು ಇಂದು ಎಣಿಸಲು ಅಸಾಧ್ಯ. ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ ಪತ್ರಿಕೆಯಿಂದ ಹೊರ ನಡೆದು, ಉದಯದೀಪ ಎಂಬ ದಿನ ಪತ್ರಿಕೆಯನ್ನಾರಂಬಿಸಿ ಕೆಲ ವರ್ಷಗಳ ಕಾಲದಲ್ಲಿ ಆ ಪತ್ರಿಕೆಯು ಅರ್ಥಿಕ ಅಡಚಣೆಯಿಂದ ಮೂಲೆ ಸೇರಿತು. ತದನಂತರ ಆರಂಬಿಸಿದ ಇದು ಕರ್ನಾಟಕ ಎಂಬ ವಾರ ಪತ್ರಿಕೆಯು 2 ವರ್ಷಗಳ ಕಾಲ ವಿಜೃಂಬಿಸಿ ಆರ್ಥಿಕ ಹಿನ್ನಡೆಯಿಂದ ಮುಚ್ಚಲ್ಪಟ್ಟಿತು. ತದನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ Times Raaj ದಿನ ಪತ್ರಿಕೆಯಲ್ಲಿ ಸಂಪಾದಕನಾಗಿ 2 ವರ್ಷಗಳ ಕಾಲ ಸೇವೆಗೈದದ್ದು ಇಂದಿಗೂ ಅವಿಸ್ಮರಣೀಯ.
ಮುಂಬಯಿ ಬಂಟರ ಸಂಘದಲ್ಲಿ ಕಮಿಟಿ ಸದಸ್ಯನಾಗಿ, ಬಂಟರವಾಣಿ ಪತ್ರಿಕೆಯಲ್ಲಿ ಲೇಖನ ಹಾಗೂ ಕಮಿಟಿ ಸದಸ್ಯನಾಗಿ, ಇಂದು ಬಂಟರವಾಣಿ ಪತ್ರಿಕೆಯ ಸಲಹಾ ಸಮಿತಿಯ ಸದಸ್ಯನಾಗಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಕವನ ಲೇಖನಗಳನ್ನು ಬರೆದ ನೈಪುಣ್ಯತೆ ಹೊಂದಿದ್ದಾರೆ. ಇಂದಿಗೂ ಕರ್ನಾಟಕ ಮಲ್ಲ, ಉದಯವಾಣಿ ಪತ್ರಿಕೆಗಳಲ್ಲಿ ಸುದ್ದಿಗಳ ಬರಹಗಳನ್ನು ಕಳುಹಿಸುತ್ತಿದ್ದಾರೆ. ದಾಂಪತ್ಯ ಜೀವನದಲ್ಲಿ ಅಂಬಲಪಾಡಿ ಪಟೇಲರ ಮನೆ ಪದವೀಧರೆ ಮೀರಾ ಯೋಗೇಶ್ ಶೆಟ್ಟಿಯವರು ತನ್ನ ಬಾಳ ಸಂಗಾತಿ. ಎರಡು ಮಕ್ಕಳಾದ ಮಗ ಸಿ.ಎ ನಿಶ್ಚಿತ್ ವೈ ಶೆಟ್ಟಿ ಹಾಗೂ (ನಿಶ್ಚಿತ್ ರವರ ಧರ್ಮ ಪತ್ನಿ ಸಿ.ಎ ವೈಶ್ಣವಿ ಶೆಟ್ಟಿ), ಮಗಳು ನಕ್ಷಾ ಕೆ. ಶೆಟ್ಟಿ (ಎಂ.ಎನ್.ಸಿ. ಕಂ) ಅಳಿಯ ಕೀರ್ತನ್ ಶೆಟ್ಟಿ (ಏಷ್ಯನ್ ಪೈಂಟ್ ಉದ್ಯೋಗಿ) ಹೀಗೆ ನೆಮ್ಮದಿಯ ಜೀವನದ ಬಾಳ ನೌಕೆಯಲ್ಲಿರುವ ವೈ.ಟಿ ಶೆಟ್ಟಿ ಹೆಜಮಾಡಿಯವರಿಗೆ ಶ್ರೀ ದೇವರು ಸದಾಶೀರ್ವಾದವನ್ನು ದಯಪಾಲಿಸಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.


























































































































