
ಮುಂಬಯಿ ಮಹಾನಗರದ ಪ್ರತಿಷ್ಠಿತ ಹೋಟೆಲ್ ಉದ್ಯಮದ ಸಂಘಟನೆಯಲ್ಲಿ ಒಂದಾದ ವಸಾಯಿ ತಾಲೂಕು ಹೋಟೆಲ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ಸೆಂಟ್ರಲ್ ಪಾಯಿಂಟ್ ಇದರ ಮಾಲಕರಾದ ಕಾಪು ಮೋಹನ್ ವಿ. ಶೆಟ್ಟಿ ಕಾಪು ಹಾಗೂ ಉಪಾಧ್ಯಕ್ಷರಾಗಿ ಸಂಘಟಕ, ಉದ್ಯಮಿ ಶಂಕರ್ ಆಳ್ವ ಕರ್ನೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರಾರ್ ಪೂರ್ವದ ವಿಷ್ಣು ಕೃಪಾ ಬ್ಯಾಂಕ್ವೆಟ್ ಹಾಲ್ ಇಲ್ಲಿ ಪ್ರೀತಂ ಸಿಂಗ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹನ್ ವಿ ಶೆಟ್ಟಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಕಾಪು ಬಾಲಾಜಿ ಮೋಹನ್ ಶೆಟ್ಟಿ ಅವರು ತಮ್ಮ ಕಾಲೇಜು ಜೀವನದಿಂದಲೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡವರು. ಅವರು ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ 1986-87ನೇ ಸಾಲಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಸೇವೆ ಸಲ್ಲಿಸಿದ್ದಲ್ಲದೇ ಪ್ರಸ್ತುತ ಎಂ.ಎಸ್.ಆರ್.ಎಸ್. ಕಾಲೇಜು, ಶಿರ್ವ ಅಲುಮ್ನಿ ಅಸೋಸಿಯೇಷನ್ ಮುಂಬಯಿ ಇದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಸಾಯಿ ತಾಲೂಕು ಹೋಟೆಲ್ ಅಸೋಸಿಯೇಷನ್ ನಲ್ಲಿ ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ, ವಸಾಯಿ – ದಹಾಣು ಬಂಟ್ಸ್ ಪ್ರಾದೇಶಿಕ ಸಮಿತಿಯ ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಸಮೃದ್ಧ ಅನುಭವಗಳನ್ನು ಹೊಂದಿದ್ದಾರೆ. ಇದರೊಂದಿಗೆ ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಸಮಿತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅವರು, ಬಂಟರ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿಯಲ್ಲಿಯೂ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಸಾಯಿ ವಿರಾರ್ ಪರಿಸರದಲ್ಲಿ ಜನಾನುರಾಗಿ ಹೋಟೆಲ್ ಉದ್ಯಮಿಯಾಗಿರುವ ಮೋಹನ್ ಶೆಟ್ಟಿ ಅವರಿಗೆ ಹೋಟೆಲ್ ಉದ್ಯಮದಲ್ಲಿ 38 ವರ್ಷಗಳ ಅನುಭವವಿದೆ.
ವಸಾಯಿ ಸೆಂಟ್ರಲ್ ಪಾಯಿಂಟ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಮಾಲೀಕರಾದ ಅವರು ತಮ್ಮ ಪತ್ನಿ ಸರಳ ಹಾಗೂ ಸಹೃದಯಿ ವ್ಯಕ್ತಿತ್ವದ ಮಮತಾ ಶೆಟ್ಟಿ ಹಾಗೂ ಯುವ ಉದ್ಯಮಿ ಪುತ್ರ ಧ್ರುವ್ ಶೆಟ್ಟಿ ಅವರೊಂದಿಗೆ ನಾಲಾಸೋಪಾರಾದಲ್ಲಿ ವಾಸವಾಗಿದ್ದಾರೆ.





















































































































